Asianet Suvarna News Asianet Suvarna News

ದಸರಾ : ಪಿರಂಗಿ ದಳದಿಂದ ಕುಶಾಲತೋಪು ಸಿಡಿತ- ಮೊದಲು ಗಲಿಬಿಲಿ ನಂತರ ಜಗ್ಗದೇ ನಿಂತ ಗಜಪಡೆ!

  • ದಸರಾ ಮಹೋತ್ಸವದ ಜಂಬೂಸವಾರಿಗೆ ಸಿದ್ಧವಾಗುತ್ತಿರುವ ಗಜಪಡೆ
  • ಕುಶಾಲತೋಪು ಸಿಡಿತ ತಾಲೀಮಿನಲ್ಲಿ ಪಾಲ್ಗೊಂಡಿದ್ದವು. ಕುಶಾಲತೋಪು ಸಿಡಿಯುತ್ತಿದ್ದಂತೆ ಮೊದಲು ಕೆಲವು ಆನೆಗಳು ಗಲಿಬಿಲಿಗೊಂಡವು
Elephants training for Dasara In mysuru snr
Author
Bengaluru, First Published Oct 1, 2021, 1:00 PM IST

 ಮೈಸೂರು (ಅ01):  ದಸರಾ ಮಹೋತ್ಸವದ (Dasara mahotsav) ಜಂಬೂಸವಾರಿಗೆ ಸಿದ್ಧವಾಗುತ್ತಿರುವ ಗಜಪಡೆಯು (Elephants) ಗುರುವಾರ ಕುಶಾಲತೋಪು ಸಿಡಿತ ತಾಲೀಮಿನಲ್ಲಿ ಪಾಲ್ಗೊಂಡಿದ್ದವು. ಕುಶಾಲತೋಪು ಸಿಡಿಯುತ್ತಿದ್ದಂತೆ ಮೊದಲು ಕೆಲವು ಆನೆಗಳು ಗಲಿಬಿಲಿಗೊಂಡು ಓಡಾಡಿದವು. ನಂತರ ಪದೇ ಪದೇ ಶಬ್ದ ಕೇಳಿಸುತ್ತಿದ್ದರಿಂದ ಒಂದೆಡೆ ನಿಂತುಕೊಂಡವು.

ಮೈಸೂರು (Mysuru) ಅರಮನೆ ವರಹಾ ಗೇಟ್‌ ಪಕ್ಕದ ಕೋಟೆ ಮಾರಮ್ಮ ದೇವಸ್ಥಾನ ಬಳಿಯ ಪಾರ್ಕಿಂಗ್‌ ಸ್ಥಳದಲ್ಲಿ 7 ಪಿರಂಗಿಗಳನ್ನು ಬಳಸಿ 21 ಸುತ್ತು ಕುಶಾಲತೋಪುಗಳನ್ನು ಸಿಎಆರ್‌ನ  (CAR) ಪಿರಂಗಿ ದಳದ ನುರಿತ ಸಿಬ್ಬಂದಿ ಸಿಡಿಸಿದರು. ಈ ತಾಲೀಮಿನಲ್ಲಿ ಅಂಬಾರಿ ಆನೆ ಅಭಿಮನ್ಯು, ವಿಕ್ರಮ, ಧನಂಜಯ, ಗೋಪಾಲಸ್ವಾಮಿ, ಅಶ್ವತ್ಥಾಮ, ಕಾವೇರಿ, ಚೈತ್ರ ಮತ್ತು ಲಕ್ಷ್ಮಿ ಆನೆಗಳು ಹಾಗೂ ಅಶ್ವರೋಹಿದಳದ ಕುದುರೆಗಳು ಪಾಲ್ಗೊಂಡಿದ್ದವು.

ಕುಶಾಲತೋಪು ಸಿಡಿಯುತ್ತಿದದಂತೆ ಇದೇ ಮೊದಲ ಬಾರಿಗೆ ದಸರೆಗೆ ಬಂದಿರುವ ಅಶ್ವತ್ಥಾಮ ಆನೆಯು ಗಲಿಬಿಲಿಗೊಂಡು ಓಡಾಡಿತು. ಜೊತೆಗೆ ಗೋಪಾಲಸ್ವಾಮಿ, ಧನಂಜಯ ಮತ್ತು ಲಕ್ಷ್ಮಿ ಆನೆಗಳು ಸಹ ಸ್ವಲ್ಪ ಮಟ್ಟಿಗೆ ಗಲಿಬಿಲಿಗೊಂಡಿದ್ದವು. ಮಾವುತರು ಮತ್ತು ಕಾವಾಡಿಗಳು ಆನೆಗಳನ್ನು ನಿಯಂತ್ರಿಸಿದರು. ಪದೇ ಪದೇ ಶಬ್ದ ಬರುತ್ತಿದ್ದರಿಂದ ಗಲಿಬಿಲಿಗೊಂಡಿದ್ದ ಆನೆಗಳು ಸುಮ್ಮನೇ ನಿಂತವು. ಅಶ್ವರೋಹಿದಳದ ಕೆಲವು ಕುದುರೆಗಳು ಸಹ ತಾಲೀಮು ವೇಳೆ ಗಲಿಬಿಲಿಗೊಂಡಿದ್ದವು.

ಉಳಿದಂತೆ ಅಂಬಾರಿ ಆನೆ ಅಭಿಮನ್ಯು, ವಿಕ್ರಮ, ಚೈತ್ರ ಮತ್ತು ಕಾವೇರಿ ಆನೆಗಳು ಜಗ್ಗದೇ ನಿಲ್ಲುವ ಮೂಲಕ ದಸರೆಗೆ ಸಿದ್ಧವಾಗಿರುವ ಸಂದೇಶ ರವಾನಿಸಿದವು.

ಏನಿದು ತಾಲೀಮು?

ದಸರಾ ಜಂಬೂಸವಾರಿ ವೇಳೆ 21 ಸುತ್ತು ಸಿಡಿಮದ್ದು ಸಿಡಿಸಲಾಗುತ್ತದೆ. ಚಿನ್ನದ ಅಂಬಾರಿಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಗಣ್ಯರು ಪುಷ್ಪಾರ್ಚನೆ ಮಾಡುವ ವೇಳೆ ಪೊಲೀಸ್‌ ಬ್ಯಾಂಡ್‌ ತಂಡ ರಾಷ್ಟ್ರಗೀತೆ ನುಡಿಸಲಿದೆ. ಈ ವೇಳೆ ಒಂದೇ ನಿಮಿಷದಲ್ಲಿ ಪಿರಂಗಿಗಳನ್ನು ಬಳಸಿ 21 ಸುತ್ತು ಸಿಡಿಮದ್ದು ಸಿಡಿಸಿ ಗೌರವಿಸಲಾಗುತ್ತದೆ. ಈ ಸವಾಲಿನ ಕೆಲಸವನ್ನು 30 ಸಿಬ್ಬಂದಿಯ ಪಿರಂಗಿ ದಳ ನಿಭಾಯಿಸುತ್ತದೆ. ಈ ಹಿನ್ನೆಲೆಯಲ್ಲಿ ಗಜಪಡೆ, ಅಶ್ವಾರೋಹಿ ದಳಕ್ಕೆ ಪಿರಂಗಿ ಶಬ್ದ ಪರಿಚಯಿಸುವ ತಾಲೀಮು ನಡೆಯಿತು.

ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ, ಡಿಸಿಎಫ್‌ ಕರಿಕಾಳನ್‌, ಅರಮನೆ ಎಸಿಪಿ ಚಂದ್ರಶೇಖರ್‌, ದಸರಾ ಆನೆ ವೈದ್ಯ ಡಾ. ರಮೇಶ್‌ ಮೊದಲಾದವರು ಇದ್ದರು.

ನಡಿಗೆ ತಾಲೀಮು

ಇನ್ನೂ ದಸರಾ ಗಜಪಡೆಯು ಎಂದಿನಂತೆ ಗುರುವಾರ ಬೆಳಗ್ಗೆ ಸಹ ಅರಮನೆ (Palace) ಆವರಣದಲ್ಲಿ ನಡಿಗೆ ತಾಲೀಮಿನಲ್ಲಿ ಪಾಲ್ಗೊಂಡಿದ್ದವು. ಕುಶಾಲತೋಪು ಸಿಡಿತ ತಾಲೀಮಿನ ಹಿನ್ನೆಲೆಯಲ್ಲಿ ಯಾವ ಆನೆಗಳಿಗೂ ಮರಳು ಮೂಟೆ ಭಾರ ಹೊರಿಸಿರಲಿಲ್ಲ.

ಇಂದು ಮರದ ಅಂಬಾರಿ

ದಸರಾ (Dasara) ಜಂಬೂಸವಾರಿಗೆ ಸಜ್ಜಾಗುತ್ತಿರುವ ಗಜಪಡೆಯ ಕ್ಯಾಪ್ಟನ್‌ ಅಭಿಮನ್ಯು ಆನೆಗೆ ಅ.1ರ ಬೆಳಗ್ಗೆ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.

ಮೈಸೂರು ಅರಮನೆಯಲ್ಲಿ ರಾಜವಂಶಸ್ಥರು ವಾಸವಾಗಿರುವ ಭಾಗದಲ್ಲಿ ಕ್ರೇನ್‌ ಅಳವಡಿಸಿ ಅಭಿಮನ್ಯು ಆನೆ ಮೈಮೇಲೆ 280 ಕೆ.ಜಿ. ತೂಕದ ಮರ ಅಂಬಾರಿ ಕೂರಿಸಿ ನಂತರ ಹಗ್ಗದ ಸಹಾಯದಿಂದ ಬಿಗಿಯಾಗಿ ಕಟ್ಟಲಾಗುತ್ತದೆ. ನಂತರ ಮರದ ಅಂಬಾರಿಯೊಳಗೆ ಮರಳು ಮೂಟೆಗಳನ್ನು ಇರಿಸಿ ತಾಲೀಮು ನಡೆಸಲಾಗುತ್ತದೆ.

ಅಭಿಮನ್ಯು ಆನೆಯೊಂದಿಗೆ ಕಾವೇರಿ, ಚೈತ್ರ ಕುಮ್ಕಿ ಆನೆಗಳಾಗಿ ಸಾಗಲಿದ್ದು, ಇವುಗಳ ಜೊತೆಗೆ ವಿಕ್ರಮ, ಧನಂಜಯ, ಗೋಪಾಲಸ್ವಾಮಿ, ಅಶ್ವತ್ಥಾಮ ಮತ್ತು ಲಕ್ಷ್ಮಿ ಆನೆಗಳು ಸಹ ಭಾಗವಹಿಸಲಿವೆ.

Follow Us:
Download App:
  • android
  • ios