ಅರ್ಜುನನ ಮೇಲೆ ದಸರಾ ಅಂಬಾರಿ ಈ ವರ್ಷವೇ ಕಡೆ?
ಅರ್ಜುನನ ಮೇಲೆ ದಸರಾ ಅಂಬಾರಿ ಈ ವರ್ಷವೇ ಕಡೆ?| ಮುಂದಿನ ವರ್ಷ ಅಭಿಮನ್ಯು ಹೊರುವ ಸಾಧ್ಯತೆ
-ಬಿ.ಶೇಖರ್ ಗೋಪಿನಾಥಂ
ಮೈಸೂರು[ಅ.05]: ವಿಶ್ವವಿಖ್ಯಾತ 2019ನೇ ಸಾಲಿನ ದಸರಾ ಮಹೋತ್ಸವದ ಜಂಬೂಸವಾರಿಗೆ ಇನ್ನೂ ಕೆಲವೇ ದಿನಗಳು ಬಾಕಿ ಇವೆ. ಈ ವರ್ಷವೂ ಅರ್ಜುನ ಆನೆಯೇ ಚಿನ್ನದ ಅಂಬಾರಿ ಹೊತ್ತು ಸಾಗುವುದು ಖಚಿತವಾಗಿದೆ. 8ನೇ ವರ್ಷ ಅಂಬಾರಿ ಹೊತ್ತು ಅರ್ಜುನ ಸಾಗಲು ಸಜ್ಜಾಗಿರುವ ಹೊತ್ತಿನಲ್ಲೇ ಮುಂದಿನ ಅಂಬಾರಿ ಆನೆ ಯಾವುದು ಎಂಬ ಪ್ರಶ್ನೆ ಎದ್ದಿದೆ.
ಇದಕ್ಕೆ ಕಾರಣ ಅರ್ಜುನ(59) ಆನೆಗೆ ವಯಸ್ಸಾಗುತ್ತಿರುವುದು. ಅಂದರೆ 2020ನೇ ವೇಳೆಗೆ ಅರ್ಜನ ಆನೆಗೆ 60 ವರ್ಷವಾಗಲಿದೆ. ಕರ್ನಾಟಕ ಹೈಕೋರ್ಟ್ ಆದೇಶ ಪ್ರಕಾರ 60 ವರ್ಷದ ಆನೆಗಳ ಮೇಲೆ ಯಾವುದೇ ಭಾರ ಹೊರಿಸುವ ಹಾಗಿಲ್ಲ. ಈ ಆದೇಶದಿಂದಾಗಿ ಅರ್ಜುನ ಆನೆಯು 2020ನೇ ಸಾಲಿನಲ್ಲೂ ಅಂಬಾರಿ ಹೊರುವ ಸಾಧ್ಯತೆ ಇಲ್ಲ.
ಅರ್ಜುನ ಅಂಬಾರಿ ಹೊತ್ತ ಕಥೆ
ಅರ್ಜುನ ಆನೆಯನ್ನು 1968ರಲ್ಲಿ ಖೆಡ್ಡಾ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದ್ದು, ಬಳ್ಳೆ ಆನೆ ಶಿಬಿರದಲ್ಲಿ ವಾಸವಾಗಿದೆ. ಕಳೆದ 20 ವರ್ಷದಿಂದ ಅರ್ಜುನ ಆನೆಯು ದಸರೆಯಲ್ಲಿ ಭಾಗವಹಿಸುತ್ತಿದೆ. ಅರ್ಜುನ ಆನೆಯು ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯನ್ನು 2012ನೇ ಸಾಲಿನಿಂದ ನಿರ್ವಹಿಸುತ್ತಿದೆ. ಅರ್ಜುನ ನಂತರ ಅಭಿಮನ್ಯು ಆನೆ ಮೇಲೆ ಅಂಬಾರಿ ಹೊರಿಸಲಾಗುತ್ತದೆಂಬ ಮಾತು ಸದ್ಯ ದಸರಾ ಗಜಪಡೆಯವರಿಂದ ಕೇಳಿ ಬರುತ್ತಿದೆ.