Shivamogga News: ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿಗೆ 6 ದಶಕಗಳ ಬಳಿಕ ವಿದ್ಯುತ್!
- ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿಗೆ 6 ದಶಕ ಬಳಿಕ ವಿದ್ಯುತ್!: ನಾಳೆ ಅಡಿಗಲ್ಲು
- ಜಿಲ್ಲಾ ಉಸ್ತುವಾರಿ ಸಚಿವರಿಂದ .360.41 ಲಕ್ಷ ವೆಚ್ಚದಲ್ಲಿ ಭೂಗತ ಕೇಬಲ್ ಮೂಲಕ ವಿದ್ಯುತ್ ನೀಡುವ ಯೋಜನೆಗೆ ಚಾಲನೆ
ಶಿವಮೊಗ್ಗ (ಡಿ.10) :ನಗರದ ಪಕ್ಕದಲ್ಲಿಯೇ ಇದ್ದರೂ ದಶಕಗಳಿಂದಲೂ ಕತ್ತಲೆಯಲ್ಲಿಯೇ ಕೊಳೆಯುತ್ತಿರುವ ಶಿವಮೊಗ್ಗ ತಾಲೂಕಿನ ಶೆಟ್ಟಿಹಳ್ಳಿ ಮತ್ತು ಚಿತ್ರಶೆಟ್ಟಿಹಳ್ಳಿ ಗ್ರಾಮಗಳ ಕತ್ತಲ ಬದುಕಿಗೆ ಮುಕ್ತಿ ದೊರೆಯುವ ಕಾಲ ಕೊನೆಗೂ ಎದುರಾಗಿದೆ.
ಶೆಟ್ಟಿಹಳ್ಳಿ ಸಂರಕ್ಷಿತ ಅರಣ್ಯದ ನಡುವೆ ಇರುವ ಈ ಗ್ರಾಮಗಳಿಗೆ ಭೂಗತ ಕೇಬಲ್ ಅಳವಡಿಕೆ ಮೂಲಕ ವಿದ್ಯುತ್ ನೀಡಲು ಸರ್ಕಾರ ಮುಂದಾಗಿದ್ದು, ಈ ಕಾರ್ಯಕ್ಕೆ ಡಿ.11 ರಂದು ಅಡಿಗಲ್ಲು ಬೀಳಲಿದೆ. 360.41 ಲಕ್ಷ ರು. ಯೋಜನೆ ಇದಾಗಿದೆ. ಯೋಜನೆ ಕಾಮಗಾರಿಗೆ ಡಿ.11ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣ ಗೌಡ ಚಾಲನೆ ನೀಡಲಿದ್ದಾರೆ.
90 ದಿನ ಪೂರ್ತಿ ಕತ್ತಲು, 69 ದಿನ ಪೂರ್ತಿ ಬೆಳಕಲ್ಲೆ ಕಾಲ ಕಳೀತಾರೆ ಈ ದೇಶದಲ್ಲಿ!
ದಶಕಗಳ ಬೇಡಿಕೆ:
ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಇರುವ ಈ ಅವಳಿ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕೆಂಬ ಬೇಡಿಕೆ ಆರು ದಶಕಗಳದ್ದಾಗಿತ್ತು. 60ರ ದಶಕದಲ್ಲಿ ಲಿಂಗನಮಕ್ಕಿ ವಿದ್ಯುತ್ ಯೋಜನೆಯಲ್ಲಿ ಸಂತ್ರಸ್ಥರಾದ ಇವರುಗಳಿಗೆ ಆಗಿನಿಂದಲೂ ಯಾವುದೇ ಮೂಲಭೂತ ಸೌಲಭ್ಯ ನೀಡಲಿಲ್ಲ. ಪುರದಾಳು ಗ್ರಾ.ಪಂ. ವ್ಯಾಪ್ತಿಗೆ ಬರುವ ಹಲವು ಹಳ್ಳಿಗಳು ಶಿವಮೊಗ್ಗ ನಗರದ ಪಕ್ಕದಲ್ಲಿಯೇ ಇದ್ದರೂ ವಿದ್ಯುತ್, ರಸ್ತೆ, ಕುಡಿಯುವ ನೀರು ಸೇರಿದಂತೆ ಯಾವೊಂದು ಮೂಲಭೂತ ಸೌಲಭ್ಯವೂ ಇಲ್ಲಿರಲಿಲ್ಲ.
ಇದರಲ್ಲಿ ಕೆಲ ವರ್ಷಗಳ ಹಿಂದೆ ಪುರದಾಳು ಗ್ರಾಮಕ್ಕೆ ಮಾತ್ರ ವಿದ್ಯುತ್ ಬಂದಿತು. ಇಲ್ಲಿಂದ ಉಳಿದ ಗ್ರಾಮಗಳಿಗೆ ವಿದ್ಯುತ್ ಕಂಬಗಳನ್ನು ಕೂಡಾ ನೆಡಲಾಗಿದ್ದರೂ, ಈ ಜಾಗ ಸಂರಕ್ಷಿತ ಅರತ್ಯ ಎಂಬ ನೆಪ ಒಡ್ಡಿ ಅರಣ್ಯ ಇಲಾಖೆಯು ಮುಂದಿನ ಕಾಮಗಾರಿಗೆ ತಡೆ ನೀಡಿತ್ತು. ಎಸ್. ಬಂಗಾರಪ್ಪ ಅವರು ಒಂದು ಬಾರಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಎರಡು ಬಾರಿ ಶೆಟ್ಟಿಹಳ್ಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಡಿಗಲ್ಲು ಹಾಕಿದ್ದರೂ ಯೋಜನೆ ಜಾರಿಗೆ ಬಂದಿರಲಿಲ್ಲ. ಪ್ರತಿ ಚುನಾವಣೆಯ ವೇಳೆಯಲ್ಲಿಯೂ ಇದು ಈ ಭಾಗದ ವಿಷಯವಾಗುತ್ತಿದ್ದರೂ, ಭರವಸೆಗಳು ಭರವಸೆಗಳಾಗಿಯೇ ಇರುತ್ತಿದ್ದವು.
Big 3; ವಿದ್ಯುತ್ ಇಲ್ಲದೇ ಭವಿಷ್ಯವೇ ಕತ್ತಲು, ಕಗ್ಗತ್ತಲ ಕೂಪದಲ್ಲಿ ಕಲಬುರಗಿಯ ರಾವೂರ ಗ್ರಾಮ
ಶಾಸಕ ಅಶೋಕ್ ನಿರಂತರ ಪ್ರಯತ್ನದ ಫಲ
ಶೆಟ್ಟಿಹಳ್ಳಿ ಮತ್ತು ಚಿತ್ರಶೆಟ್ಟಿಹಳ್ಳಿ ಗ್ರಾಮಗಳು ಅಭಯಾರಣ್ಯದಲ್ಲಿ ಇದ್ದು, ಕಾಡಾನೆ ಸೇರಿದಂತೆ ವನ್ಯಜೀವಿಗಳ ಕಾಟ ಇಲ್ಲಿ ಜಾಸ್ತಿಯಿದೆ. ಇವುಗಳನ್ನು ನಿಯಂತ್ರಿಸಲು ಕಾನೂನು ಪ್ರಕಾರ ಸಾಧ್ಯವಿಲ್ಲ. ಜೊತೆಗೆ ಮೂಲಭೂತ ಸೌಲಭ್ಯ ಕೂಡ ಇದೇ ಕಾರಣಕ್ಕೆ ಕೊಡಲು ಸಾಧ್ಯವಿಲ್ಲ ಎಂಬ ಕಾರಣದ ಹಿನ್ನೆಲೆ ಅಲ್ಲಿನ ಗ್ರಾಮಸ್ಥರನ್ನು ಸ್ಥಳಾಂತರಿಸುವ ಪ್ಯಾಕೇಜ್ ಸಿದ್ಧಗೊಂಡಿತ್ತು. ಆದರೆ ಇದಕ್ಕೆ ಗ್ರಾಮಸ್ಥರು ಒಪ್ಪದ ಕಾರಣ ಯೋಜನೆ ಜಾರಿಯಾಗಿರಲಿಲ್ಲ. ಬಳಿಕ ಹಾಲಿ ಶಾಸಕ ಕೆ.ಬಿ. ಅಶೋಕ್‌ಕುಮಾರ್ ಅವರ ನಿರಂತರ ಪ್ರಯತ್ನದಿಂದಾಗಿ ಕೊನೆಗೂ ನಗರದ ಸಮೀಪದ ಕುಗ್ರಾಮಗಳಿಗೆ ವಿದ್ಯುತ್ ಬರಲಿದೆ. ಡಿ.11 ರ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಇಂಧನ ಸಚಿವ ಸುನಿಲ್ ಕುಮಾರ್, ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.