ವಿದ್ಯುತ್ ಬಿಲ್ ಏರಿಕೆ ಹಗಲುದರೋಡೆಯಾ? ಗ್ರಾಹಕರ ಪ್ರಶ್ನೆ
ಯಲ್ಲಾಪುರ ಉಪ-ವಿಭಾಗ ಮಟ್ಟದ ವಿದ್ಯುತ್ ಗ್ರಾಹಕರ ಕುಂದು-ಕೊರತೆಗಳ ಸಂವಾದ ಸಭೆ ಶನಿವಾರ ಪಟ್ಟಣದ ಹೆಸ್ಕಾಂ ಉಪ-ವಿಭಾಗದ ಕಚೇರಿಯಲ್ಲಿ ನಡೆಯಿತು.
ಯಲ್ಲಾಪುರ (ಜೂ.18) : ಯಲ್ಲಾಪುರ ಉಪ-ವಿಭಾಗ ಮಟ್ಟದ ವಿದ್ಯುತ್ ಗ್ರಾಹಕರ ಕುಂದು-ಕೊರತೆಗಳ ಸಂವಾದ ಸಭೆ ಶನಿವಾರ ಪಟ್ಟಣದ ಹೆಸ್ಕಾಂ ಉಪ-ವಿಭಾಗದ ಕಚೇರಿಯಲ್ಲಿ ನಡೆಯಿತು.
ಸಾಮಾನ್ಯವಾಗಿ ಮಾಸಿಕವಾಗಿ 400 ರೂ. ಬರುತ್ತಿದ್ದ ವಿದ್ಯುತ್ ಬಿಲ್, ಈ ತಿಂಗಳು ಏಕಾಏಕಿ 600ಕ್ಕೂ ಅಧಿಕ ಬಂದಿದೆ. ಬಡವರ ಉದ್ಧಾರ ಮಾಡುತ್ತಿರುವ ಸರ್ಕಾರದಿಂದ ನಡೆಯುತ್ತಿರುವ ಹಗಲುದರೋಡೆ ಇದನ್ನು ಕರೆಯಬೇಕಾ ಎಂದು ತಾಲೂಕಿನ ಹಾಸ್ಪುರದ ಗ್ರಾಹಕ ಸುಬ್ರಾಯ ಪ್ರಶ್ನಿಸಿದರು.
ಉಚಿತವಾಗಿ ವಿದ್ಯುತ್ ಸರಬರಾಜು ಮಾಡುವುದಾಗಿ ಘೋಷಿಸಿ ಅಧಿಕಾರಕ್ಕೆ ಬಂದ ಸರ್ಕಾರ ಇದೀಗ ಬಡವರನ್ನು ಶೋಷಿಸಲು ತೊಡಗಿದೆ. ಇಷ್ಟೊಂದು ಅಧಿಕ ಮೊತ್ತದ ಬಿಲ್ ಬರುವುದಕ್ಕೆ ಕಾರಣವೇನೆಂದು ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಶಾಸಕರ ಪ್ರತಿಭಟನೆ ಓಕೆ, ಕಲ್ಲು ಹೊಡೆದಿದ್ದು ಯಾಕೆ? ಆಯನೂರು ಮಂಜುನಾಥ ಪ್ರಶ್ನೆ
ಯಲ್ಲಾಪುರದ ಎಸ್.ಓ. ರಮಾಕಾಂತ ನಾಯ್ಕ ಪ್ರತಿಕ್ರಿಯಿಸಿ, ಈ ತಿಂಗಳು ಸಾಮಾನ್ಯವಾಗಿ ಎಲ್ಲೆಡೆ ವಿದ್ಯುತ್ ಬಿಲ್ಲಿನ ಮೊತ್ತ ಅಧಿಕವಾಗಿ ಬಂದಿದೆ. ಇದಕ್ಕೆ ಪ್ರತಿ ಮನೆಗಳಲ್ಲೂ ವಿದ್ಯುತ್ ಬಳಕೆ ಅಧಿಕವಾಗಿದ್ದು, ಒಂದು ಕಾರಣವಾದರೆ, ಏಪ್ರಿಲ್-ಮೇ ತಿಂಗಳಿನಿಂದ ಪೂರ್ವಾನ್ವಯದ ಹೆಚ್ಚಿನ ದರ ಸೇರ್ಪಡೆಯಾಗಿರುವುದು ಮತ್ತೊಂದು ಕಾರಣವಾಗಿದೆ ಎಂದರು.
ಇನ್ನು ಸರ್ಕಾರದ ಘೋಷಣೆಯಂತೆ ಉಚಿತ ವಿದ್ಯುತ್ ಸಂಪರ್ಕ ನೀಡುವ ಬಗೆಗೆ ನಮಗಿನ್ನೂ ಮಾರ್ಗಸೂಚಿ ಬಂದಿಲ್ಲ. ಮುಂದಿನ ಆಗಸ್ಟ್ ತಿಂಗಳಿನಿಂದ ಇದು ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ ಎಂದರು.
ಸುಬ್ರಾಯ ನಾಯ್ಕ ಅವರ ಅಧಿಕ ಬಿಲ್ ಬಂದಿರುವುದರ ಕುರಿತಾದ ಪ್ರಶ್ನೆಗೆ ಮಂಚೀಕೇರಿ ಎಸ್.ಓ. ಸುನೀಲ್ ಬಿ.ಕೆ. ಉತ್ತರಿಸಿ, ತಕ್ಷಣದಲ್ಲಿಯೇ ಈ ಸಮಸ್ಯೆಗೆ ಸ್ಪಂದಿಸಲಾಗುವುದು. ಮನೆಯ ಮೀಟರ್ ರೀಡಿಂಗ್ ಪರಿಶೀಲಿಸಿ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದರು.
ಮತ್ತೋರ್ವ ಗ್ರಾಹಕ ಅನಂತ ಹೆಗಡೆ ಹಿತ್ಲಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಇತ್ತೀಚೆಗೆ ನೂತನ ವಿದ್ಯುತ್ ಸಂಪರ್ಕಕ್ಕೆ ಹಿಂದೆಂದೂ ಕಾಣಿಸದ ಗೊಂದಲ ಕಂಡುಬರುತ್ತಿದ್ದು, ಅಧಿಕಾರಿಗಳು ಅನವಶ್ಯಕ ಗ್ರಾಹಕರನ್ನು ಸತಾಯಿಸುವುದೇಕೆ?. ಅಗತ್ಯವಿದ್ದೆಡೆ ನೂತನ ಮಾರ್ಗ ನಿರ್ಮಾಣ ಮತ್ತು ಕಂಬ ಬದಲಾಯಿಸುವ ಕುರಿತಂತೆಯೂ ಪ್ರಶ್ನಿಸಿದ ಅನಂತ ಹೆಗಡೆ, ಬೇರೆ ಜಿಲ್ಲೆಗಳಲ್ಲಿ ಇರದ ಕಾನೂನು ನಮ್ಮ ಜಿಲ್ಲೆಯಲ್ಲಿದೆ. ಇದಕ್ಕೆ ಕಾರಣವೇನೆಂದು ಖಾರವಾಗಿ ಕೇಳಿದರಾದರೂ ಅಧಿಕಾರಿಗಳು ಸಮಂಜಸ ಉತ್ತರ ನೀಡಲಿಲ್ಲ.
ಕರೆಂಟ್ ಕದನ: ದರ ಏರಿಸಿದ್ದು ನಾವಲ್ಲ -ಬೊಮ್ಮಾಯಿ, ಬಿಜೆಪಿ ಏರಿಕೆ ಮಾಡಿದ್ದಕ್ಕೆ ದಾಖಲೆ ಇದೆ - ಸರ್ಕಾರ!
ಜೀವಮಾನದಲ್ಲೇ ಕಾಣದಷ್ಟುಮೊತ್ತದ ವಿದ್ಯುತ್ ಬಿಲ್ ಈ ತಿಂಗಳು ಬಂದಿದ್ದು, ರೈತರಾದ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕೆ? ಎಂದು ಸಾವಗದ್ದೆಯ ರವೀಂದ್ರ ಭಟ್ಟಆಕ್ರೋಶ ವ್ಯಕ್ತಪಡಿಸಿದರು.
ಒಂದೆರಡು ತಿಂಗಳ ನಂತರ ಪುನಃ ಯಥಾ ಪ್ರಕಾರ ಮೊದಲಿನಂತೆಯೇ ಬಳಕೆಯಷ್ಟೇ ಮೊತ್ತದ ಬಿಲ್ ಬರುವ ಸಾಧ್ಯತೆಯಿದೆ. ಗ್ರಾಹಕರು ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಳ್ಳಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ರಮಾಕಾಂತ ನಾಯ್ಕ ತಿಳಿಸಿದರು.