ಹೈಟೆನ್ಷನ್‌ ತಂತಿ ತಾಗಿ ಅನಾಹುತ ಮಾಡಿಕೊಂಡ ಮಕ್ಕಳ ಬಗ್ಗೆ ಮತ್ತಷ್ಟು ಮಾಹಿತಿ, ಮಕ್ಕಳನ್ನು ತಡೆದ ಮನೆ ಮಾಲೀಕರ ತಾಯಿ, ಹಿಂಬದಿಯಿಂದ ಹೋದ ಮಕ್ಕಳು, ಮಕ್ಕಳಿಬ್ಬರಿಗೆ ಶೇ.80 ಸುಟ್ಟ ಗಾಯ, ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ. 

ಬೆಂಗಳೂರು(ಡಿ.03): ಪಾರಿವಾಳ ಹಿಡಿಯಲು ಹೋಗಿ ವಿದ್ಯುತ್‌ ಪ್ರವಹಿಸಿ ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಬಾಲಕರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ವಿಜಯಾನಂದ ನಗರದ ಸುಪ್ರೀತ್‌(11) ಮತ್ತು ಚಂದನ್‌(9) ಗಾಯಗೊಂಡವರು. ಗುರುವಾರ ಸಂಜೆ ಮನೆಯ ಮಹಡಿ ಮೇಲೆ ಪಾರಿವಾಳ ಹಿಡಿಯಲು ಹೋದಾಗ ಹೈಟೆನ್ಷನ್‌ ವಿದ್ಯುತ್‌ ತಂತಿ ತಗುಲಿದ ಪರಿಣಾಮ ವಿದ್ಯುತ್‌ ಪ್ರವಹಿಸಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರದಿದೆ. ಇಬ್ಬರು ಬಾಲಕರಿಗೆ ಶೇ.80ಕ್ಕಿಂತ ಹೆಚ್ಚಿನ ಸುಟ್ಟಗಾಯಗಳಾಗಿವೆ. ಮುಖ ಮತ್ತು ತಲೆ ಹೊರತುಪಡಿಸಿ ದೇಹದ ಎಲ್ಲ ಭಾಗಗಳು ಗಾಯಗೊಂಡಿದೆ.

ಆರೋಗ್ಯದಲ್ಲಿ ಕೊಂಚ ಚೇತರಿಕೆಯಾಗಿದೆ. ಶುಕ್ರವಾರ ಮನೆಯವರನ್ನು ಗುರುತಿಸಿ ಕೊಂಚ ಮಾತನಾಡಿದ್ದಾರೆ. ಆದರೆ, ವೈದ್ಯರು ಬಾಲಕರ ಆರೋಗ್ಯದ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಇದರಿಂದ ನಮಗೆ ಭಯವಾಗುತ್ತಿದೆ. ನಮ್ಮ ಮಕ್ಕಳನ್ನು ಉಳಿಸಿಕೊಡಿ ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ.

Kolar: ವಿದ್ಯುತ್ ತಂತಿ ತಗುಲಿ ಅಣ್ಣ ತಮ್ಮಂದಿರ ಸಾವು

ಗುರುವಾರ ಸಂಜೆ ಆರು ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ನಾವು ಕೆಲಸಕ್ಕೆ ಹೋಗಿದ್ದೆವು. ಈ ವೇಳೆ ನಮ್ಮ ತಾಯಿ ಮನೆಯಲ್ಲಿದ್ದರು. ಈ ಮಕ್ಕಳು ಗೇಟ್‌ ಬಳಿ ಬಂದಾಗ ನಮ್ಮ ತಾಯಿ ತಾರಿಸಿ ಮೇಲೆ ಹೋಗಲು ಮಕ್ಕಳಿಗೆ ಅವಕಾಶ ನೀಡಿಲ್ಲ. ಹೀಗಾಗಿ ಹಿಂದಿನಿಂದ ಮನೆಯ ಮೇಲೆ ಬಂದಿದ್ದಾರೆ. ಈ ವೇಳೆ ಇಬ್ಬರು ಪಾರಿವಾಳ ಹಾರಿಸಲು ಮುಂದಾಗಿದ್ದು, ಈ ವೇಳೆ ಪಾರಿವಾಳ ಹೈಟೆನ್ಷನ್‌ ವಿದ್ಯುತ್‌ ತಂತಿ ಮೇಲೆ ಕುಳಿತಿದೆ. ಈ ವೇಳೆ ಕಬ್ಬಿಣದ ರಾಡ್‌ನಿಂದ ತಂತಿಗೆ ಹೊಡೆದಿದ್ದಾರೆ. ಇದರಿಂದ ವಿದ್ಯುತ್‌ ಪ್ರವಹಿಸಿ ಎರಡು ಮಕ್ಕಳು ಗಾಯಗೊಂಡಿವೆ. ಅಷ್ಟೇ ಅಲ್ಲದೆ, ನಮ್ಮ ಮನೆಗೂ ಕೂಡ ಹಾನಿಯಾಗಿದೆ ಎಂದು ಮನೆ ಮಾಲಿಕರಾದ ಮಂಜುಳಾ ಹೇಳಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ನಂದಿನಿ ಲೇಔಟ್‌ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.