Hubballi: ಉತ್ತಮ ಮಹಿಳಾ ಪೌರಕಾರ್ಮಿಕರಿಗೆ ಎಲೆಕ್ಟ್ರಿಕ್ ಸ್ಕೂಟರ್..!
* ಹುಧಾ ಮಹಾನಗರ ಪಾಲಿಕೆ 82 ವಾರ್ಡ್‌ನಲ್ಲಿ ತಲಾ ಒಬ್ಬರಿಗೆ ಇವಿ
* ಶೇ. 90ರಷ್ಟು ಸಬ್ಸಿಡಿ, ಶೇ. 10ರಷ್ಟು ಮೊತ್ತ ಭರಿಸಬೇಕು
* ನಗರವನ್ನು ಅಚ್ಚುಕಟ್ಟಾಗಿ ಇಡುವಲ್ಲಿ ತಮ್ಮದೆ ಕೊಡುಗೆ ನೀಡುತ್ತಿರುವ ಮಹಿಳಾ ಕಾರ್ಮಿಕರು
ಮಯೂರ ಹೆಗಡೆ
ಹುಬ್ಬಳ್ಳಿ(ಮಾ.31): ಹುಬ್ಬಳ್ಳಿ-ಧಾರವಾಡ ಸೇರಿ(Hubballi Dharwad) ರಾಜ್ಯದ 11 ಮಹಾನಗರ ಪಾಲಿಕೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸುವ 300 ಮಹಿಳಾ ಪೌರ ಕಾರ್ಮಿಕರಿಗೆ(Women Civil Labor) ಕರ್ತವ್ಯಕ್ಕೆ ಅನುಕೂಲವಾಗಲು ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮವು ಇವಿ (Electric Vehicle) ನೀಡಲು ಮುಂದಾಗಿದ್ದು, ಆಯ್ಕೆ ಪ್ರಕ್ರಿಯೆ ನಡೆಸಿದೆ.
ಮಹಾನಗರಗಳ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪೌರ ಕಾರ್ಮಿಕರು ಅದರಲ್ಲೂ ಕಸ ಗುಡಿಸುವ, ನಗರವನ್ನು ಅಚ್ಚುಕಟ್ಟಾಗಿ ಇಡುವಲ್ಲಿ ತಮ್ಮದೆ ಕೊಡುಗೆ ನೀಡುವ ಮಹಿಳಾ ಕಾರ್ಮಿಕರನ್ನು ಪ್ರೋತ್ಸಾಹಿಸಲು ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಜಾರಿಗೊಳಿಸಿದ ವಿನೂತನ ಯೋಜನೆ ಇದು. ಯೋಜನೆ ಅನುಷ್ಠಾನಕ್ಕೆ ತರುವ ಅಂಬೇಡ್ಕರ್ ಅಭಿವೃದ್ಧಿ ನಿಗಮವು ಪಾಲಿಕೆಯಿಂದ ಪೌರ ಕಾರ್ಮಿಕರ ಪಟ್ಟಿತರಿಸಿಕೊಂಡು ಆಯ್ಕೆ ಪ್ರಕ್ರಿಯೆ ನಡೆಸಲಿದೆ. ಹಾಗೆಂದು ಸಂಪೂರ್ಣ ಉಚಿತವಾಗಿ ಇವಿ ನೀಡಲಾಗುತ್ತಿಲ್ಲ. ಶೇ. 90ರಷ್ಟು ಸಬ್ಸಿಡಿಯನ್ನು(Subsidy) ನಿಗಮ ನೀಡಲಿದ್ದು, ಶೇ.10ರಷ್ಟು ಮೊತ್ತವನ್ನು ಕಾರ್ಮಿಕರು ಭರಿಸಬೇಕಾಗುತ್ತದೆ. ಅಂದರೆ1 ಲಕ್ಷ ಮೊತ್ತದ ವೆಹಿಕಲ್‌ಗೆ ಕೇವಲ . 10 ಸಾವಿರ ನೀಡಬೇಕಾಗುತ್ತದೆ.
Hubballi Crime: ಆನ್‌ಲೈನ್ ಆ್ಯಪ್‌ನಿಂದ ಸಾಲ ಡೇಂಜರ್: ಸ್ವಲ್ಪ ಯಾಮಾರಿದ್ರೂ ಅಪಾಯ ಫಿಕ್ಸ್..!
ಧಾರವಾಡಕ್ಕೆ 90 ಇವಿ ವೆಹಿಕಲ್ ಮಂಜೂರಾಗಿದ್ದು, ಹು-ಧಾ ಮಹಾನಗರ ಪಾಲಿಕೆಯ ಎಲ್ಲ 82 ವಾರ್ಡ್‌ಗಳಲ್ಲಿ ತಲಾ ಒಬ್ಬರಿಗೆ ಇವಿ ಬೈಕ್ ನೀಡಲು ನಿರ್ಧರಿಸಲಾಗಿದೆ. ಉಳಿದ ಸ್ಕೂಟಿಯನ್ನು ಜಿಲ್ಲೆಯ ಇತರೆ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮಾಡಲಿದ್ದೇವೆ. ತುಂಬಾ ವಯಸ್ಸಾದವರಿಗೆ ನೀಡದಿರಲು ತೀರ್ಮಾನವಾಗಿದ್ದು, ಶಕ್ತರನ್ನು ಆಯ್ಕೆ ಮಾಡಲಾಗುವುದು ಎಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಭವಿಷ್ಯಾ ಮಾರ್ಟಿನ್ ತಿಳಿಸಿದರು.
ಪಾಲಿಕೆಯ ಘನತ್ಯಾಜ್ಯ ವಿಲೇವಾರಿ ವಿಭಾಗದ ಅಭಿಯಂತರ ಸಂತೋಷ ವೈ., ‘ಇವಿ ವೆಹಿಕಲ್ ವಿತರಣೆಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿದೆ. ಉತ್ತಮವಾಗಿ ಕಾರ್ಯನಿರ್ವಹಿಸುವ ಮಹಿಳಾ ಪೌರಕಾರ್ಮಿಕರ ನಾಮಿನೇಶನ್ ಪಟ್ಟಿಯನ್ನು ನೀಡುವಂತೆ ಡಿಸಿ ಸೂಚಿಸಿದ್ದಾರೆ. ಅದರಂತೆ ವಲಯ ಅಧಿಕಾರಿಗಳು, ಹೆಲ್ತ್ ಇನ್‌ಸ್ಪೆಕ್ಟರ್‌ಗಳ ಮೂಲಕ ಪಟ್ಟಿ ತರಿಸಿಕೊಳ್ಳುತ್ತಿದ್ದೇವೆ. ಅವರ ಹಾಜರಾತಿ, ಕರ್ತವ್ಯ ನಿರ್ವಹಿಸುವ ಬಗೆಯನ್ನು ಪರಿಗಣಿಸಲಾಗುವುದು’ ಎಂದರು.
ಹೆಸರು ಹೇಳಲಿಚ್ಛಿಸದ ಮಹಿಳಾ ಪೌರಕಾರ್ಮಿಕರೊಬ್ಬರು ಮಾತನಾಡಿ, ‘ಎಲ್ಲ ಮಹಿಳಾ ಪೌರ ಕಾರ್ಮಿಕರು ಉತ್ತಮವಾಗಿಯೆ ಕೆಲಸ ಮಾಡುತ್ತಾರೆ. ವಾಹನ ನೀಡುವ ಮಾನದಂಡವನ್ನು ಸ್ಪಷ್ಟಪಡಿಸಬೇಕು. ಬಡವರಿಗೆ ಮೊದಲ ಆದ್ಯತೆ ನೀಡಬೇಕು. ನಮ್ಮ ವಾರ್ಡಿನಲ್ಲಿ ಹೆಲ್ತ್ ಇನ್‌ಸ್ಪೆಕ್ಟರ್ ಅವರು ಚೀಟಿ ಎತ್ತಿಸುವ ಮೂಲಕ ಫಲಾನುಭವಿ ಆಯ್ಕೆ ಮಾಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ? ಅದರಲ್ಲೂ ನೇರ ವೇತನಕ್ಕೆ ಒಳಪಡದವರು, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಇದಕ್ಕೆ ಪರಿಗಣಿಸುತ್ತಿಲ್ಲ. ಅಂಥವರ ನಿರ್ಲಕ್ಷ್ಯ ಮಾಡಿರುವುದು ಯಾಕೆ?’ ಎಂದು ಪ್ರಶ್ನಿಸಿದರು.
ವಿದ್ಯಾಕಾಶಿ ಧಾರವಾಡಕ್ಕೆ ಮತ್ತೊಂದು ಶೈಕ್ಷಣಿಕ ಕಿರೀಟ್, ಉದ್ಘಾಟನೆಗೆ ಸಜ್ಜು
ರಾಜ್ಯದ(Karnataka) 11 ಮಹಾನಗರ ಪಾಲಿಕೆಯಲ್ಲಿ 300 ಮಹಿಳಾ ಪೌರಕಾರ್ಮಿಕರಿಗೆ ಎಲೆಕ್ಟ್ರಿಕ್ ಬೈಕ್ ನೀಡಲಾಗುತ್ತಿದೆ. ಉತ್ತಮ ಕೆಲಸ ಮಾಡುವವರಿಗೆ ಪ್ರೋತ್ಸಾಹಿಸಲು, ಬೆಳಗ್ಗೆ ಕರ್ತವ್ಯಕ್ಕೆ ತೆರಳಲು ಅನುಕೂಲವಾಗಲಿ ಎಂದು ರೂಪಿಸಿರುವ ನೂತನ ಯೋಜನೆ ಇದು ಅಂತ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಮೋನಪ್ಪ ಕಟ್ಟಿಮನಿ ತಿಳಿಸಿದ್ದಾರೆ.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾರ್ಗಸೂಚಿ ಪ್ರಕಾರ ಇವಿ ವೆಹಿಕಲ್ ನೀಡಲಾಗುತ್ತದೆ. ನಿಗಮ ಕೇಳಿದ ಮಾಹಿತಿಯನ್ನು ಪಾಲಿಕೆಯಿಂದ ಒದಗಿಸಲಾಗಿದ್ದು, ಆನ್‌ಲೈನ್ ಅರ್ಜಿ ಸಲ್ಲಿಸಿದವರ ಪರಿಶೀಲನೆ ನಡೆಯುತ್ತದೆ. ಇದರಿಂದ ಮಹಿಳಾ ಪೌರಕಾರ್ಮಿಕರಿಗೆ ಅನುಕೂಲವಾಗಲಿದೆ ಅಂತ ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಹೇಳಿದ್ದಾರೆ.