ಕೆಆರ್‌ಎಸ್‌ ಪಕ್ಷದಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆ

ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಕೆಆರ್‌ಎಸ್‌ ಪಕ್ಷದಿಂದ ಜನಪರ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ ಎಂದು ಪಕ್ಷದ ರೈತ ಘಟಕ ರಾಜ್ಯಾಧ್ಯಕ್ಷ ಹಾಗೂ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ ಸಂಭಾವ್ಯ ಅಭ್ಯರ್ಥಿ ಗುರುಮೂರ್ತಿ ಹೇಳಿದರು.

Election manifesto released by KRS party snr

 ಪಿರಿಯಾಪಟ್ಟಣ :  ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಕೆಆರ್‌ಎಸ್‌ ಪಕ್ಷದಿಂದ ಜನಪರ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ ಎಂದು ಪಕ್ಷದ ರೈತ ಘಟಕ ರಾಜ್ಯಾಧ್ಯಕ್ಷ ಹಾಗೂ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ ಸಂಭಾವ್ಯ ಅಭ್ಯರ್ಥಿ ಗುರುಮೂರ್ತಿ ಹೇಳಿದರು.

ಸೋಮವಾರ ಸುದ್ದಿಗೋಷ್ಠಿ ನಡೆಸಿ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪಕ್ಷವು ಅಧಿಕಾರ ಮತ್ತು ಸಂಪತ್ತನ್ನು ವಿಕೇಂದ್ರಿಕರಿಸುವ ನೀತಿ ಹೊಂದಿದ್ದು ಜನರಿಂದ ಸರ್ಕಾರ ಜನರ ಕೈಗೆ ಅಧಿಕಾರ ಎಂಬ ನೀತಿಗೆ ಬದ್ಧವಾಗಿದೆ. ಗ್ರಾಮೀಣ ಜನರ ಸುಖ ನೆಮ್ಮದಿಯ ಬದುಕಿಗೆ ಹೋರಾಡುತ್ತಿದ್ದು ಉಚಿತ ವಿದ್ಯೆ ಹಾಗೂ ಆರೋಗ್ಯ ಒದಗಿಸುವುದು, ರೈತರ ಎಲ್ಲ ಬೆಳೆಗಳಿಗೆ ಸ್ವಾಮಿನಾಥನ್‌ ವರದಿ ಪ್ರಕಾರ ವೈಜ್ಞಾನಿಕ ಬೆಲೆ ನಿಗದಿ, ಮೂಲಭೂತ ಸೌಲಭ್ಯ ಸಮಸ್ಯೆ ಪರಿಹಾರಕ್ಕೆ ಆದ್ಯತೆ, ಬಸ್‌ ಹಾಗೂ ವಿದ್ಯುತ್‌ ದರ ಕಡಿಮೆ ಮಾಡುವುದು, ಪಿಂಚಣಿ ಯೋಜನೆ ಹೆಚ್ಚು ಮಾಡುವುದು, ಪ್ರತಿ ಕುಟುಂಬದ ಆದಾಯ ಹೆಚ್ಚಳಕ್ಕೆ ನೂತನ ಯೋಜನೆ ರೂಪಿಸುವುದು, ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದು ಅಥವಾ ನಿರುದ್ಯೋಗ ಭತ್ಯೆ ಒದಗಿಸುವುದು, ಜನತಾ ಬಜಾರ್‌ ಅಥವಾ ರೈತ ಬಜಾರ್‌ ಮೂಲಕ ಏಕಕಾಲದಲ್ಲಿ ರೈತ ಮತ್ತು ಬಳಕೆದಾರರ ಹಿತ ಕಾಯುವುದು, ಜನಸ್ನೇಹಿ ಪೊಲೀಸ್‌ ಹಾಗೂ ಭ್ರಷ್ಟಾಚಾರವಿಲ್ಲದ ಆಡಳಿತ ನಡೆಸಲು ಬದ್ಧವಾಗಿದೆ ಎಂದು ಮಾಹಿತಿ ನೀಡಿದರು.

ಪಕ್ಷದ ತಾಲೂಕು ಅಧ್ಯಕ್ಷ ಚಪ್ಪರದಹಳ್ಳಿ ಅಜಿತ್‌ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ನಿಯಂತ್ರಣ ಸೇರಿದಂತೆ ಸಾರ್ವಜನಿಕ ಸೇವೆಗಳು ನಿಗದಿತ ಸಮಯದಲ್ಲಿ ದೊರೆಯುವಂತೆ ತಾಲೂಕಿನಾದ್ಯಂತ ಪಕ್ಷದ ವತಿಯಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಜನಪರ ಕೆಲಸ ನಿರ್ವಹಿಸುತ್ತಿದ್ದು ಉತ್ತಮ ಸರ್ಕಾರ ರಚನೆ ಹಾಗೂ ತಾಲೂಕಿನಲ್ಲಿ ಉತ್ತಮ ಜನಪ್ರತಿನಿಧಿ ಆಯ್ಕೆಗಾಗಿ ಮತದಾರರು ಕೆಆರ್‌ಎಸ್‌ ಪಕ್ಷ ಬೆಂಬಲಿಸಿ ಮತ ನೀಡುವಂತೆ ಕೋರಿದರು.

ರೈತ ಘಟಕ ರಾಜ್ಯ ಕಾರ್ಯದರ್ಶಿ ಪ್ರಭುಸ್ವಾಮಿ, ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಎಂ. ರಾಜು, ಯುವ ಘಟಕ ಅಧ್ಯಕ್ಷ ಶೇಖರ್‌ಕುಮಾರ್‌, ಜಂಟಿ ಕಾರ್ಯದರ್ಶಿ ಲೋಕೇಶ್‌ ಆರಾಧ್ಯ, ಮುಖಂಡರಾದ ಸ್ವಾಗತ, ಆಶಾ ಇದ್ದರು.

ದಕ್ಷ  ಆಡಳಿತಕ್ಕೆ ಕೆಆರ್‌ಎಸ್ ಪಕ್ಷ ಬೆಂಬಲಿಸಿ

ತಿಪಟೂರು :ರಾಜ್ಯದಲ್ಲಿ ಭ್ರಷ್ಟಾಚಾರ ಹೆಮ್ಮರವಾಗಿ ಹರಡಿಕೊಂಡಿದ್ದು ಇದನ್ನು ಕಿತ್ತೊಗೆದು ದಕ್ಷ ಮತ್ತು ಪಾರದರ್ಶಕ ಜವಾಬ್ದಾರಿಯುತ ಆಡಳಿತಕ್ಕಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಬೆಂಬಲಿಸುವಂತೆ ತಾಲೂಕಿನ ಜನತೆಯಲ್ಲಿ ತಿಪಟೂರು ವಿಧಾನಸಭಾ ಕ್ಷೇತ್ರದ ಕೆಆರ್‌ಎಸ್‌ ಪಕ್ಷದ ಅಭ್ಯರ್ಥಿ ಗಂಗಾಧರ್‌ ಕರೀಕೆರೆ ಮನವಿ ಮಾಡಿಕೊಂಡರು.

ನಗರದ ಗೊರಗೊಂಡನಹಳ್ಳಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಸಿಬಿ (ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ) ಪಕ್ಷಗಳು ಮಾಡುತ್ತಿರುವ ಪರಮ ಭ್ರಷ್ಟ, ಅನೀತಿ, ಅದಕ್ಷ ರಾಜಕಾರಣದಿಂದಾಗಿ ಜನರು ನೆಮ್ಮದಿಯಿಂದ ಜೀವನ ನಡೆಸಲಾಗುತ್ತಿಲ್ಲ. ಲಂಚ ನೀಡಿದರೆ ಮಾತ್ರ ಕೆಲಸ ಮಾಡಿಕೊಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಂತಹ ಅವ್ಯವಸ್ಥೆ ತೊಲಗಿಸಿ ದಕ್ಷ ಪ್ರಾಮಾಣಿಕ ವ್ಯವಸ್ಥೆ ನಿರ್ಮಾಣವಾಗಬೇಕೆಂದರೆ ಭ್ರಷ್ಟಾಚಾರ ತೊಲಗಬೇಕು. ಆದ್ದರಿಂದ ಕೆಆರ್‌ಎಸ್‌ ಪಕ್ಷ ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೆ, ರೈತರು ಹಾಗೂ ಜನಸಾಮಾನ್ಯತರ ಆಶೋತ್ತರಗಳಿಗೆ ಅನುಕೂಲವಾಗುವಂತಹ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿದೆ ಎಂದರು.

ಈ ಬಾರಿ ಕೆಆರ್‌ಎಸ್‌ ಪಕ್ಷವು ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲಿದ್ದು ಈಗಾಗಲೆ 119 ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ನನ್ನನ್ನು ತಿಪಟೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ಬಾಕಿ ಇರುವ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಿದೆ. ಈಗಾಗಲೆ ನಮ್ಮ ಪಕ್ಷದಿಂದ ಹಲವು ಜನಪರ ಕಾರ್ಯಕ್ರಮಗಳನ್ನು ಆಯೋಜಿಸಿ ಅವರ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತಿದ್ದು ಎಲ್ಲೆಲ್ಲಿ ಅನ್ಯಾಯ, ದೌರ್ಜನ್ಯಗಳು ನಡೆಯುತ್ತಿವೆಯೇ ಅವುಗಳನ್ನು ಖಂಡಿಸುವ ಮೂಲಕ ಜನರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡುತ್ತಿದೆ. ರೈತರ, ಜನಸಾಮಾನ್ಯರ ಕೆಲಸಗಳನ್ನು ಸಂಬಂದಪಟ್ಟಅಧಿಕಾರಿಗೊಂದಿಗೆ ಚರ್ಚಿಸಿ ತಕ್ಷಣದಲ್ಲೇ ಪರಿಹರಿಸಿಕೊಟ್ಟಿರುವ ಸಾಕಷ್ಟುಉದಾಹರಣೆಗಳಿವೆ. ಇನ್ನೂ ಹೆಚ್ಚಿನ ಸೇವೆ ಮಾಡಲು ಪಕ್ಷ ಅಧಿಕಾರಕ್ಕೆ ಬರಬೇಕಿದ್ದು ರಾಜ್ಯದ ಜನತೆ ನಮ್ಮ ಪಕ್ಷವನ್ನು ಬೆಂಬಲಿಸಬೇಕಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಶಿವಕುಮಾರ್‌ ಮತ್ತಿಹಳ್ಳಿ, ಉಪಾಧ್ಯಕ್ಷ ಈಶಣ್ಣ, ಪ್ರಚಾರ ಸಮಿತಿ ಮುಖಂಡ ಶಿವಶಂಕರ್‌ ಮತ್ತಿತರರಿದ್ದರು.

Latest Videos
Follow Us:
Download App:
  • android
  • ios