ಕೆಪಿಎಸ್‌ಸಿ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಕೆಎಎಸ್‌ ಪೂರ್ವಭಾವಿ ಪರೀಕ್ಷೆ ನಡೆದ 11 ದಿನಗಳಲ್ಲೇ ಫಲಿತಾಂಶ, ಅಭ್ಯರ್ಥಿಗಳ ಅಂಕ ಮತ್ತು ಕಟ್ ಆಫ್ ಅಂಕಗಳನ್ನು ಪ್ರಕಟಿಸಿದೆ. ನೇಮಕಾತಿಯಲ್ಲಿ ಪಾರದರ್ಶಕತೆ ತರಲು 87,697 ಅಭ್ಯರ್ಥಿಗಳ ಅಂಕಗಳನ್ನು ವೆಬ್‌ಸೈಟ್‌ನಲ್ಲಿ ಬಹಿರಂಗಪಡಿಸಲಾಗಿದೆ.

ಬೆಂಗಳೂರು (ನ.27): ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ತಡೆದು, ಪಾರದರ್ಶಕತೆ ತರುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಕೆಪಿಎಸ್‌ಸಿ, ಇದೇ ಮೊದಲ ಬಾರಿ ಕೆಎಎಸ್‌ ಸೇರಿ ಗೆಜೆಟೆಡ್ ಪ್ರೊಬೇಷನರ್ಸ್ 319 ಹುದ್ದೆಗಳ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆ ನಡೆದ 11 ದಿನಗಳಲ್ಲೇ ಫಲಿತಾಂಶದ ಜೊತೆಗೆ ಅಭ್ಯರ್ಥಿಗಳ ಅಂಕ ಹಾಗೂ ಕಟ್ ಆಫ್ ಅಂಕಗಳನ್ನು ಪ್ರಕಟಿಸಿದೆ.

ನ.15ರಂದು ನಡೆದ ಪರೀಕ್ಷೆಗೆ ಹಾಜರಾಗಿದ್ದ 87,697 ಅಭ್ಯರ್ಥಿಗಳ ನೋಂದಣಿ ಸಂಖ್ಯೆ, ಹೆಸರು, ಎರಡು ಪತ್ರಿಕೆಗಳಲ್ಲಿ ಪಡೆದಿರುವ ಅಂಕಗಳು ಹಾಗೂ ಒಟ್ಟಾರೆ ಅಂಕಗಳ ವಿವರಗಳನ್ನು ಬಹಿರಂಗವಾಗಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಈ ವಿವರಗಳನ್ನು ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಭೇಟಿ ನೀಡಿ ಯಾರು ಬೇಕಾದರೂ ವೀಕ್ಷಿಸಬಹುದು.

ಈ ರೀತಿ ಎಲ್ಲರ ಅಂಕಗಳನ್ನು ಈ ಮೊದಲು ಬಹಿರಂಗಪಡಿಸುತ್ತಿರಲಿಲ್ಲ. ‘ಈ ರೀತಿ ಗೌಪ್ಯತೆ ಕಾಪಾಡುವುದರಿಂದ ಅಕ್ರಮಗಳು ನಡೆಯುತ್ತವೆ. ಕೂಡಲೇ ಅಂಕಗಳನ್ನು ಪ್ರಕಟಿಸುವ ಜೊತೆಗೆ ಕಟ್ ಆಫ್ ಅಂಕಗಳನ್ನು ಕೂಡ ಪ್ರಕಟಿಸಬೇಕು’ ಎಂದು ಅಭ್ಯರ್ಥಿಗಳು ಅನೇಕ ವರ್ಷಗಳಿಂದ ಆಗ್ರಹಿಸುತ್ತಾ ಬಂದಿದ್ದರು. ಹೀಗಾಗಿ ಈಗ ಎಲ್ಲ ಅಂಕ ಪ್ರಕಟಿಸಲಾಗಿದೆ.

ಕಟ್ ಆಫ್ ಅಂಕ ಪ್ರಕಟಕ್ಕೆ ಪ್ರಶಂಸೆ:

ವರ್ಗವಾರು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯಲು ಬೇಕಾದ ಅಂಕಗಳ ವಿವರಗಳು, ಜನ್ಮ ದಿನಾಂಕದ ವಿವರಗಳನ್ನು ಒಳಗೊಂಡ ಕಟ್ ಆಫ್ ಪ್ರಕಟಿಸಿರುವ ಕೆಪಿಎಸ್‌ಸಿ ನಡೆ ಪ್ರಶಂಸೆಗೆ ಪಾತ್ರವಾಗಿದೆ. ಈ ಮೊದಲು ಮುಖ್ಯ ಪರೀಕ್ಷೆಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಬೇಕಾಗಿರುವ ಅಂಕಗಳ ಕುರಿತ ಮಾಹಿತಿಯನ್ನೂ ಅಧಿಕೃತವಾಗಿ ಪರೀಕ್ಷೆ ನಡೆದ ಕೆಲ ದಿನಗಳಲ್ಲಿ ಬಹಿರಂಗಪಡಿಸುತ್ತಿರಲಿಲ್ಲ. ಪರೀಕ್ಷೆ ನಡೆದು ತಿಂಗಳು ಅಥವಾ ವರ್ಷ ಕಳೆದ ನಂತರ ನೇಮಕಾತಿ ಪ್ರಕ್ರಿಯೆ ಮುಗಿಸಿದ ಬಳಿಕ ಕಟ್ ಆಫ್ ಅಂಕಗಳ ವಿವರ ಪ್ರಕಟಿಸಲಾಗುತ್ತಿತ್ತು. ಈ ಬಗ್ಗೆಯೂ ಅಭ್ಯರ್ಥಿಗಳು ಪ್ರತಿ ಬಾರಿ ಆಕ್ಷೇಪಿಸಿದ್ದರು.

ಸಾಮಾನ್ಯ ಅಭ್ಯರ್ಥಿಯ ಕನಿಷ್ಠ ಕಟ್‌ ಆಫ್‌ ಅಂಕ 206.5:

ಉಳಿಕೆ ಮೂಲ ವೃಂದ (ಆರ್‌ಪಿಸಿ) ಸಾಮಾನ್ಯ ವರ್ಗದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಹೊಂದಲು ಕಟ್ ಆಫ್ ಅಂಕ 206.5 ಇದೆ. ಇನ್ನು 3ಬಿ ವರ್ಗಕ್ಕೆ 199.5 ಅಂಕ, 2ಎ ಕನ್ನಡ ಮಾಧ್ಯಮ ವರ್ಗಕ್ಕೆ 198 ಅಂಕ, 3ಎ ವರ್ಗಕ್ಕೆ 196 ಅಂಕ, ಎಸ್ಸಿ ವರ್ಗಕ್ಕೆ 193 ಅಂಕ, ಎಸ್ಟಿ ಗ್ರಾಮೀಣ ವರ್ಗಕ್ಕೆ 186.5 ಅಂಕ, 2ಬಿ ವರ್ಗಕ್ಕೆ 180.5 ಕಟ್ ಅಫ್ ಅಂಕ ನಿಗದಿಯಾಗಿದೆ. ಒಟ್ಟಾರೆ 53 ವರ್ಗಗಳಲ್ಲಿ (ರಿಸರ್ವೇಷನ್) ಕಟ್ ಆಫ್ ಅಂಕಗಳನ್ನು ಬಿಡುಗಡೆ ಮಾಡಲಾಗಿದೆ.

ಕಲ್ಯಾಣ ಕರ್ನಾಟಕದಲ್ಲಿ ತೀವ್ರ ಪೈಪೋಟಿ!:

ಇನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸ್ಪರ್ಧೆ ತೀವ್ರವಾಗಿದ್ದು, ಈ ಭಾಗದ ಅಭ್ಯರ್ಥಿಗಳ ಪೈಕಿ ಮುಖ್ಯ ಪರೀಕ್ಷೆ ಬರೆಯಲು ಸಾಮಾನ್ಯ ಅಭ್ಯರ್ಥಿಯ (ಗ್ರಾಮೀಣ) ಕಟ್ ಆಫ್ ಅಂಕ 215.5 ಇದೆ.