ಸಮಸ್ಯೆ ಉದ್ಭವ : ಮೊಟ್ಟೆ ವಿತರಣೆ ಸ್ಥಗಿತ
ಮೊಟ್ಟೆಯ ವಿತರಣೆ ಶೀಘ್ರದಲ್ಲೇ ಸ್ಥಗಿತವಾಗುವ ಸಾಧ್ಯತೆ ಇದೆ. ವಿವಿಧ ಫಲಾನುಭವಿಗಳಿಗೆ ನೀಡಲಾಗುತ್ತಿದ್ದ ಮೊಟ್ಟೆಗೆ ಹಣದ ಕೊರತೆ ಹಿನ್ನೆಲೆ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.
ಕೊರಟಗೆರೆ (ಫೆ.15): ರಾಜ್ಯದಲ್ಲಿ ವಿವಿಧ ವರ್ಗಗಳ ಫಲಾನುಭವಿಗಳಿಗೆ ಅಂಗನವಾಡಿಯಿಂದ ವಿತರಣೆಯಾಗುತ್ತಿರುವ ಮೊಟ್ಟೆಇನ್ನು 3 ತಿಂಗಳಲ್ಲಿ ಸ್ಥಗಿತವಾಗುವ ಸಾಧ್ಯತೆ ಇದೆ. ಕಾರಣ ಮೊಟ್ಟೆ ಖರೀದಿಗೆ ಸರ್ಕಾರ ಹಣ ನೀಡದ ಹಿನ್ನೆಲೆ ಅಂಗನವಾಡಿ ಕಾರ್ಯಕರ್ತರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.
6 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು, ಬಾಣಂತಿಯರ ಆರೈಕೆಗಾಗಿ, ಪೌಷ್ಟಿಕಾಂಶ ಹೆಚ್ಚಿಸುವ ದೃಷ್ಟಿಯಿಂದ ಸರ್ಕಾರ 2017 ರಿಂದ ಮೊಟ್ಟೆವಿತರಣೆ ಮಾಡುತ್ತಿದೆ. ಆದರೆ ಇತ್ತೀಚೆಗೆ ಮೊಟ್ಟೆಗೆ ಕೊಡಬೇಕಾದ ಹಣವನ್ನು ಸರ್ಕಾರ ಸರಿಯಾದ ರೀತಿಯಲ್ಲಿ ಬಿಡುಗಡೆ ಮಾಡುತ್ತಿಲ್ಲ. ಪ್ರತಿ ಗರ್ಭಿಣಿಯರಿಗೆ ಹಾಗು ಬಾಣಂತಿಯರಿಗೆ ತಿಂಗಳಿಗೆ 25 ಮೊಟ್ಟೆಗಳು, ಮಕ್ಕಳಿಗೆ ತಿಂಗಳಿಗೆ 8 ಮೊಟ್ಟೆಗಳನ್ನು ನೀಡುವಂತೆ ಸರ್ಕಾರ ನಿಗದಿ ಮಾಡಿದೆ. ಆದರೆ ಮೊಟ್ಟೆದರ ಏರಿಕೆಯಾದ ಕಾರಣ ಮೊಟ್ಟೆಖರೀದಿ ಮತ್ತು ವಿತರಣೆ ಕಷ್ಟಸಾಧ್ಯವಾಗುತ್ತಿದೆ ಎಂಬುದು ಅಧಿಕಾರಿಗಳ ಅಂಬೋಣ.
ಹಕ್ಕಿ ಜ್ವರ ಭೀತಿ: ಚಿಕನ್, ಮೊಟ್ಟೆ ಪೂರ್ತಿ ಸುರಕ್ಷಿತ! ..
1 ಮೊಟ್ಟೆಗೆ ಸರ್ಕಾರ 5 ರು. ನೀಡುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ದರ 6 ರಿಂದ 8 ರು. ಇದೆ. ಹೆಚ್ಚುವರಿ ಹಣವನ್ನು ಹೇಗೆ ಭರಿಸಬೇಕು ಎಂಬುದು ಅಂಗನವಾಡಿ ಕಾರ್ಯಕರ್ತರ ಪ್ರಶ್ನೆ. ಮೊಟ್ಟೆಖರೀದಗೆ ಸೂಕ್ತ ಅನುದಾನವನ್ನು ಸರ್ಕಾರ ನೀಡದಿದ್ದರೆ ರಾಜ್ಯಾದ್ಯಂತ ಈ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಲೂ ತಿಳಿಸುತ್ತಾರೆ.