ಚಿಕನ್, ಮೊಟ್ಟೆ ಪೂರ್ತಿ ಸುರಕ್ಷಿತ: ಕೇಂದ್ರ| ಹಕ್ಕಿಜ್ವರ ಕಾರಣಕ್ಕೆ ಚಿಕನ್, ಮೊಟ್ಟೆಮೇಲೆ ನಿಷೇಧದ ಹಿನ್ನೆಲೆ
ನವದೆಹಲಿ(ಜ.18): ವಿವಿಧ ರಾಜ್ಯಗಳಲ್ಲಿ ಹಬ್ಬಿರುವ ಹಕ್ಕಿಜ್ವರದ ಕಾರಣದಿಂದಾಗಿ ಕುಕ್ಕುಟೋದ್ಯಮಕ್ಕೆ ಭಾರೀ ಆರ್ಥಿಕ ಹೊಡೆತ ಬಿದ್ದಿರುವ ಬೆನ್ನಲ್ಲೇ, ಚಿಕನ್ ಮತ್ತು ಮೊಟ್ಟೆಗಳು ಸುರಕ್ಷಿತವಾಗಿವೆ. ಈ ಹಿನ್ನೆಲೆಯಲ್ಲಿ ಮೊಟ್ಟೆಮತ್ತು ಕೋಳಿಗಳ ಮಾರಾಟದ ಮೇಲೆ ಹೇರಲಾದ ನಿಷೇಧದ ಹಿಂಪಡೆತದ ಬಗ್ಗೆ ಮರು ಪರಿಶೀಲನೆ ನಡೆಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಕೋರಿಕೊಂಡಿದೆ.
ಜೊತೆಗೆ ಹಕ್ಕಿಜ್ವರ ಹರಡದ ರಾಜ್ಯಗಳು ಮತ್ತು ಪ್ರದೇಶಗಳಿಂದ ಕೋಳಿ ಮತ್ತು ಮೊಟ್ಟೆಗಳ ಮಾರಾಟಕ್ಕೆ ಅನುಮತಿ ಕಲ್ಪಿಸುವಂತೆ ರಾಜ್ಯಗಳಿಗೆ ಒತ್ತಾಯಿಸಿದೆ. ಅರ್ಧಗಂಟೆ ಕಾಲ 70 ಡಿಗ್ರಿ ಸೆಲ್ಸಿಯಸ್‌ನಲ್ಲಿ ಬೇಯಿಸುವುದರಿಂದ ಚಿಕನ್‌ನಲ್ಲಿ ಇರಬಹುದಾದ ಹಕ್ಕಿಜ್ವರ ನಾಶವಾಗಲಿದೆ.
ಜೊತೆಗೆ ಸರಿಯಾಗಿ ಬೇಯಿಸಿದ ಮೊಟ್ಟೆಮತ್ತು ಚಿಕನ್‌ನಿಂದ ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದು. ಜೊತೆಗೆ ಹಕ್ಕಿಜ್ವರದ ಕುರಿತಾಗಿ ಹಬ್ಬುವ ಗಾಳಿಸುದ್ದಿಗಳಿಂದ ಜನರನ್ನು ಜಾಗರೂಕರನ್ನಾಗಿಸಬೇಕು ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.
