Asianet Suvarna News Asianet Suvarna News

ಡಿಕೆಶಿ ವಿರುದ್ಧ ಇಡಿಯಲ್ಲಿ ವಾದ ಮಂಡಿಸಿದ್ದು ಕನ್ನಡಿಗ ವಕೀಲ

ಸದ್ಯ ಅಕ್ರಮ ಹಣ ಸಂಗ್ರಹ ಪ್ರಕರಣದಲ್ಲಿ ಬಂಧಿತರಾಗಿರುವ ಡಿಕೆ ಶಿವಕುಮಾರ್ ವಿರುದ್ಧ ಇಡಿಯಲ್ಲಿ ವಾದ ಮಂಡಿಸಿದವರು ಕನ್ನಡಿಗ ವಕೀಲ. ಅವರು ಮೂಲತಃ ದಕ್ಷಿಣ ಕನ್ನಡದವರಾಗಿದ್ದಾರೆ. 

ED Hear lawyer from Karnataka in DK Shivakumar Case
Author
Bengaluru, First Published Sep 5, 2019, 7:30 AM IST

ಆತ್ಮಭೂಷಣ್‌

ಮಂಗಳೂರು [ಸೆ.05]:  ಕರ್ನಾಟಕದ ಮಾಜಿ ಸಚಿವ, ಶಾಸಕ ಡಿ.ಕೆ. ಶಿವಕುಮಾರ್‌ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ವಶಕ್ಕೆ ನೀಡಿರುವುದರ ಹಿಂದೆ ಸಮರ್ಥವಾಗಿ ಹಾಗೂ ಪ್ರಬಲವಾಗಿ ವಾದ ಮಂಡಿಸಿದ್ದು ಕನ್ನಡಿಗ, ಭಾರತದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ.ನಟರಾಜ್‌. ಮೂಲತಃ ದ.ಕ.ಜಿಲ್ಲೆಯ ಪುತ್ತೂರಿನ ಈಶ್ವರಮಂಗಲ ಬಳಿಯ ಕೋನೆ ತೋಟ ನಿವಾಸಿಯಾಗಿದ್ದಾರೆ.

ದೆಹಲಿ ಫ್ಲ್ಯಾಟ್‌ನಲ್ಲಿ ಸಿಕ್ಕ 8.5 ಕೋಟಿ ರು. ಮೊತ್ತದ ಪ್ರಕರಣಕ್ಕೆ ಸಂಬಂಧಿಸಿ ಕಳೆದ ನಾಲ್ಕು ದಿನಗಳಿಂದ ಇ.ಡಿ. ಅಧಿಕಾರಿಗಳು ಡಿಕೆಶಿ ಅವರ ವಿಚಾರಣೆ ನಡೆಸಿದ್ದು, ಬಳಿಕ ತನಿಖೆಗೆ ಅಸಹಕಾರ ತೋರಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ. ಬಂಧಿತ ಡಿಕೆಶಿ ಅವರನ್ನು ಬುಧವಾರ ದೆಹಲಿಯ ಇ.ಡಿ.ವಿಶೇಷ ಕೋರ್ಟ್‌ಗೂ ಹಾಜರುಪಡಿಸಲಾಯಿತು. ಈ ವೇಳೆ ಡಿಕೆಶಿ ಪರವಾಗಿ ಕಾಂಗ್ರೆಸ್‌ ಹಿರಿಯ ಮುಖಂಡ, ಹಿರಿಯ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ ವಾದ ಮಂಡಿಸಿದರೆ, ಪ್ರತಿಯಾಗಿ ಇ.ಡಿ. ಪರ ವಾದ ಮಂಡಿಸಿದ್ದು ಹಿರಿಯ ವಕೀಲ ಕೆ.ಎಂ.ನಟರಾಜ್‌.

ಡಿಕೆಶಿ ಪರವಾಗಿ ಈ ಮೊದಲು ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ಇ.ಡಿ. ಕೋರ್ಟ್‌ಗೆ ಮನವರಿಕೆ ಮಾಡಿ ಕಸ್ಟಡಿ ಅಥವಾ ನ್ಯಾಯಾಂಗ ಬಂಧನದಿಂದ ಪಾರು ಮಾಡಲು ಸಾಕಷ್ಟುಯತ್ನ ನಡೆಸಿದರು. ಡಿಕೆಶಿ ಪ್ರಕರಣದಲ್ಲಿ ಇ.ಡಿ. ಪರವಾದ ನ್ಯಾಯವಾದಿಗಳಿದ್ದರೂ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಭಾರತದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅವರನ್ನು ಸಮರ್ಥ ವಾದ ಮಂಡನೆಗೆ ಕೋರಲಾಗಿತ್ತು. ಈ ಹಿನ್ನೆಲೆಯಲ್ಲಿ ಕೆ.ಎಂ.ನಟರಾಜ್‌ ವಾದ ಮಂಡಿಸಿದರು.

ಇ.ಡಿ.ಪರವಾಗಿ ಹೇಳಿದ್ದೇನು?:

ಡಿಕೆಶಿ ಪರವಾದ ಅಭಿಷೇಕ್‌ ಮನು ಸಿಂಘ್ವಿ ವಾದಕ್ಕೆ ಪ್ರತಿಯಾಗಿ ವಾದ ಮಂಡಿಸಿದ ಕೆ.ಎಂ.ನಟರಾಜ್‌, ಡಿಕೆಶಿ ಅವರು ಕೋರ್ಟ್‌ನ ಹಾದಿ ತಪ್ಪಿಸುತ್ತಿದ್ದಾರೆ. ಈಗಾಗಲೇ ಇ.ಡಿ. ಅಧಿಕಾರಿಗಳು ನಡೆಸಿದ ಅಕ್ರಮ ಮೊತ್ತಕ್ಕೆ ಸಂಬಂಧಿಸಿದ ಆರೋಪದ ತನಿಖೆಗೆ ಡಿಕೆಶಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಡಿಕೆಶಿ ಕೇವಲ ದೆಹಲಿಯಲ್ಲಿ ಮಾತ್ರವಲ್ಲ ಬೇರೆ ಬೇರೆ ಕಡೆಗಳಲ್ಲಿ ಅಕ್ರಮ ಸಂಪತ್ತು ಹೊಂದಿದ್ದರೇ ಎಂಬ ಬಗ್ಗೆ ತನಿಖೆ ನಡೆಸಬೇಕಾಗಿದೆ. ಅಲ್ಲದೆ, ಬೇರೆ ಕಡೆಗಳಲ್ಲಿ ಲಭಿಸಿದ ಸಂಪತ್ತಿನ ಬಗ್ಗೆ ಹಾಗೂ ದೆಹಲಿಯಲ್ಲಿ ಪತ್ತೆಯಾದ ದುಡ್ಡಿನ ಮೂಲ, ಯಾರಿಗೆ ನೀಡಬೇಕಾದ್ದು ಇತ್ಯಾದಿ ವಿಚಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕಾಗಿದೆ. ಮಾತ್ರವಲ್ಲ ಬೇನಾಮಿ ಹೆಸರಿನಲ್ಲಿ ಆಸ್ತಿ ಹಾಗೂ ಸಂಪತ್ತು ಹೊಂದಿರುವ ಬಗ್ಗೆಯೂ ವಿಸೃತ ತನಿಖೆ ನಡೆಸುವ ಅಗತ್ಯ ಇದೆ ಎಂದು ಪ್ರಬಲ ವಾದ ಮಂಡಿಸಿದರು. ಈ ಕಾರಣಕ್ಕೆ ಡಿಕೆಶಿಯನ್ನು ಕನಿಷ್ಠ 10 ದಿನಗಳ ಕಾಲ ಇ.ಡಿ. ವಶಕ್ಕೆ ನೀಡುವಂತೆ ಕೋರಿಕೆ ಸಲ್ಲಿಸಿದರು. ಈ ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶರು, ಡಿಕೆಶಿಯನ್ನು 10 ದಿನಗಳ ಕಾಲ ಇ.ಡಿ. ವಶಕ್ಕೆ ಒಪ್ಪಿಸುವಂತೆ ತೀರ್ಪು ನೀಡಿದ್ದಾರೆ ಎಂದು ವಕೀಲ ನಟರಾಜ್‌ ಅವರು ದೆಹಲಿಯಿಂದ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಬೆಂಗಳೂರಲ್ಲಿ ಹೈಕೋರ್ಟ್‌ ನ್ಯಾಯವಾದಿಯಾಗಿದ್ದ ಕೆ.ಎಂ.ನಟರಾಜ್‌ ಅವರು 2009ರಿಂದ 13ರ ವರೆಗೆ ಕರ್ನಾಟಕದಲ್ಲಿ ಹೆಚ್ಚುವರಿ ಅಡ್ವಕೇಟ್‌ ಜನರಲ್‌ ಆಗಿದ್ದರು. ಬಳಿಕ ದಕ್ಷಿಣ ಭಾರತದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿದ್ದರು. 2019 ಜನವರಿಯಲ್ಲಿ ದೆಹಲಿಯಲ್ಲಿ ಭಾರತದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿ ನೇಮಕಗೊಂಡರು. ಕೇಂದ್ರ ಮಾಜಿ ಸಚಿವ ಚಿದಂಬರಂ ಅವರ ಸಿಬಿಐ ವಶ ಪ್ರಕರಣಲ್ಲೂ ಕೆ.ಎಂ.ನಟರಾಜ್‌ ವಾದ ಮಂಡಿಸಿದ್ದರು.

ಇ.ಡಿ. ಬಳಿಕ ಡಿಕೆಶಿಗೆ ಸಿಬಿಐ ಕುಣಿಕೆ?

ಇ.ಡಿ. ತನಿಖೆ ಬಳಿಕ ಮುಂದೆ ಡಿ.ಕೆ.ಶಿವಕುಮಾರ್‌ಗೆ ಸಿಬಿಐ ಕುಣಿಕೆ ಕಾದಿದೆಯೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಬುಧವಾರ ಇ.ಡಿ.ಕೋರ್ಟ್‌ಗೆ ಡಿಕೆಶಿ ಅವರನ್ನು ಹಾಜರುಪಡಿಸಿದ ವೇಳೆ ನಡೆದ ವಾದ-ಪ್ರತಿವಾದ ಸಂದರ್ಭ ಸಿಬಿಐ ವಿಚಾರಣೆಗೂ ಡಿಕೆಶಿ ಬೇಕಾದ ಅಂಶ ಬೆಳಕಿಗೆ ಬಂದಿದೆ. ಆದರೆ ಈಗ ಇ.ಡಿ. ವಿಚಾರಕ್ಕೆ ಸಂಬಂಧಿಸಿ ವಿಚಾರಣೆ ನಡೆಯುತ್ತಿರುವುದರಿಂದ ನೇರವಾಗಿ ಸಿಬಿಐ ತನಿಖೆಯ ಮಾತು ಬಂದಿಲ್ಲ. ಆದರೆ ಇ.ಡಿ. ವ್ಯಾಪ್ತಿಯ ಹೊರತಾಗಿ ಡಿಕೆಶಿ ನಡೆಸಿರಬಹುದಾದ ವಂಚನೆ ಪ್ರಕರಣಗಳನ್ನು ಇ.ಡಿ. ಅಧಿಕಾರಿಗಳು ಸಿಬಿಐಗೂ ಮಾಹಿತಿ ರವಾನಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇ.ಡಿ. ವಿಚಾರಣೆ ಪೂರ್ಣಗೊಂಡ ಬಳಿಕ ಡಿಕೆಶಿ ಅವರನ್ನು ಸಿಬಿಐ ವಶಕ್ಕೆ ಪಡೆದರೂ ಅಚ್ಚರಿ ಇಲ್ಲ ಎಂದು ಉನ್ನತ ಮೂಲಗಳು ಹೇಳುತ್ತಿವೆ.

Follow Us:
Download App:
  • android
  • ios