ವಿಜಯಪುರ ಜಿಲ್ಲೆಯಲ್ಲಿ ಭೂಮಿಯಲ್ಲಿ ನಿಗೂಢ ಶಬ್ದ: ಅಂತರ್ಜಲ ಹೆಚ್ಚಳವೇ ಭೂ ಕಂಪನಕ್ಕೆ ಕಾರಣ

ವಿಜಯಪುರ ಜಿಲ್ಲೆಯ ಮಲಘಾಣ, ಮಸೂತಿ, ಕೂಡಗಿ, ಕಲಗುರ್ಕಿಯಲ್ಲಿ ಭೂಮಿ ಶಬ್ದಕ್ಕೆ ಸಿಕ್ಕಿತು ಕಾರಣ| ಸ್ಥಳಕ್ಕೆ ಭೂಗರ್ಭ ವಿಜ್ಞಾನಿಗಳ ಭೇಟಿ, ಪರಿಶೀಲನೆಯ ನಂತರ ಸ್ಪಷ್ಟನೆ| ಈ ಭಾಗದಲ್ಲಿ ಆಗುತ್ತಿರುವುದು ಭೂಕಂಪವಲ್ಲ, ಭಯ ಪಡುವ ಅಗತ್ಯವಿಲ್ಲ| 

Earthquake Is Caused by an Increase in Groundwater in Vijayapur District grg

ಕೊಲ್ಹಾರ(ನ.04): ವಿಜಯಪುರ ಜಿಲ್ಲೆಯ ಮಲಘಾಣ, ಮಸೂತಿ, ಕೂಡಗಿ, ಕಲಗರ್ಕಿ ಗ್ರಾಮಗಳಲ್ಲಿ ಕಳೆದ 15 ದಿನಗಳಿಂದ ಭೂಮಿಯಿಂದ ಜೋರಾದ ಶಬ್ದ, ಭೂಮಿ ಕಂಪಿಸಿದ ಅನುಭವ ಆಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಉಪವಿಭಾಗಾಧಿಕಾರಿ ಬಲರಾಮ ನಾಯಕ, ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ಭೂಗರ್ಭ ವಿಜ್ಞಾನಿ ಜಗದೀಶ ನೇತೃತ್ವದ ಅಧಿಕಾರಿಗಳ ತಂಡ ಈ ಗ್ರಾಮಗಳಿಗೆ ಭೇಟಿ ನೀಡಿತು.

ಮಸೂತಿ, ಮಲಘಾಣ ಗ್ರಾಪಂ ಸಭಾಂಗಣದಲ್ಲಿ ಅಧಿಕಾರಿಗಳ ತಂಡ ಸಭೆ ನಡೆಸಿತು. ಸಭೆಯಲ್ಲಿ ಗ್ರಾಮಸ್ಥರು ಕಳೆದ 15 ದಿನಗಳಿಂದ ತಮಗೆ ಆಗುತ್ತಿರುವ ಅನುಭವಗಳನ್ನು ವಿವರಿಸಿದರು. ಭೂಗರ್ಭ ವಿಜ್ಞಾನಿ ಜಗದೀಶ ಅವರು ಸ್ಫೋಟದ ಶಬ್ದ ಹೇಗಿತ್ತು, ಎಷ್ಟುಸಲ ಉಂಟಾಗಿದೆ? ಯಾವುದಾದರೂ ಬಾವಿ, ಕೆರೆ, ಹಳ್ಳಗಲ್ಲಿ ಬಿಸಿನೀರು ಉತ್ಪತ್ತಿಯಾಗಿದೆಯಾ? ಮನೆ ಗೋಡೆಗಳು ಬಿರುಕು ಬಿಟ್ಟಿರುವ ಕುರಿತು ಸೇರಿದಂತೆ ಹಲವಾರು ರೀತಿಯ ಪ್ರಶ್ನೆಗಳನ್ನು ಗ್ರಾಮಸ್ಥರಿಗೆ ಕೇಳಿದರು.
ಆಗ ಗ್ರಾಮಸ್ಥರು ತಮಗೆ ಭೂಮಿಯಿಂದ ಜೋರಾದ ಶಬ್ದ ಮಾತ್ರ ಕೇಳಿಬಂದಿದೆ. ಉಳಿದಂತೆ ಯಾವುದೇ ಅನುಭವ ಆಗಿಲ್ಲ. ಪದೇ ಪದೆ ಜೋರಾದ ಶಬ್ದ ಬರುತ್ತಿರುವುದರಿಂದ ಭಯ ಉಂಟಾಗಿದೆ ಎಂದರು. ಎನ್‌ಟಿಪಿಸಿ ಕೆರೆಯಲ್ಲಿ ಬೋರವೆಲ್‌ಗಳು ಇದ್ದು. ಅದರಿಂದಾಗಿ ಈ ರೀತಿಯ ಶಬ್ದ ಉಂಟಾಗುತ್ತಿದೆಯಾ ಎಂಬುದನ್ನು ತಿಳಿಸಬೇಕು. ಈ ಭಾಗದಲ್ಲಿ ಭೂಕಂಪನ ಕೇಂದ್ರವನ್ನು ಸ್ಥಾಪಿಸಬೇಕೆಂದು ಮನವಿ ಮಾಡಿದರು.

ಅಂತರ್ಜಲ ಗಣನೀಯ ಏರಿಕೆ: ಅರ್ಧಕ್ಕರ್ಧ ತಾಲೂಕಲ್ಲಿ ಈಗ 32 ಅಡಿಗೇ ನೀರು!

ವಿಜ್ಞಾನಿ ಜಗದೀಶ ಮಾತನಾಡಿ, ಈ ಭಾಗದಲ್ಲಿ ಆಗುತ್ತಿರುವುದು ಭೂಕಂಪವಲ್ಲ. ಭಯ ಪಡುವ ಅಗತ್ಯವಿಲ್ಲ. 2012ರಲ್ಲೂ ಹೀಗೆ ಆಗಿತ್ತು. ಹೆಚ್ಚು ಮಳೆಯಿಂದಾಗಿ ಅಂತರ್ಜಲ ಹೆಚ್ಚಾಗಿದೆ. ಈ ಭಾಗದಲ್ಲಿ ಭೂಮಿಯ ಒಳಗಡೆ ಕಲ್ಲು, ಮಣ್ಣಿನ ಪದರಗಳಿದ್ದು. ಅದರಲ್ಲಿ ಮಣ್ಣು ನೀರಿನ ಮೂಲಕ ಕೊಚ್ಚಿಕೊಂಡು ಹೋದಾಗ ಭೂಮಿ ಕುಸಿಯುತ್ತದೆ. ಕಲ್ಲಿನ ಪದರಗಳ ಮಧ್ಯ ಘರ್ಷಣೆಯಿಂದಾಗಿ ಜೋರಾದ ಶಬ್ದ ಉಂಟಾಗುತ್ತದೆ. ಭೂಕಂಪ ಕೇಂದ್ರ ಸ್ಥಾಪನೆ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗವುದು ಎಂದರು.

ಸಭೆಯಲ್ಲಿ ಭೂವಿಜ್ಞಾನಿಗಳಾದ ರಮೇಶ ದಿಕ್ಪಾಲ, ಅಭಿನಯ, ವಿಶ್ವನಾಥ, ನಾಗಭೂಷಣ, ಕೊಲ್ಹಾರ ತಹಸೀಲ್ದಾರ್‌ ಎಂ.ಎ.ಎಸ್‌. ಬಾಗವಾನ, ಕಂದಾಯ ನಿರೀಕ್ಷಕ ಬಿ.ಎಸ್‌. ಪಾಟೀಲ, ಗ್ರಾಮದ ಸಿ.ಪಿ.ಪಾಟೀಲ, ಎಸ್‌.ಎಸ್‌.ಗೌರಿ, ಮೋಹನಗೌಡ ಪಾಟೀಲ, ಪ್ರಕಾಶ ಕಾಗಲ್‌, ಬಸನಗೌಡ (ಪುಟ್ಟುಗೌಡ) ಪಾಟೀಲ, ಎಸ್‌.ಎಸ್‌. ಗರಸಂಗಿ, ಸುರೇಶ ವಠಾರ, ಸದಾನಂದ ನಿಂಗನೂರ, ಭೀಮನಗೌಡ ಪಾಟೀಲ ಇತರರು ಇದ್ದರು.
 

Latest Videos
Follow Us:
Download App:
  • android
  • ios