ಕಲಬುರಗಿ (ನ. 19): ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಯ ಕೆಲ ಭಾಗದಲ್ಲಿ ಸೋಮವಾರ ಭೂಮಿಯೊಳಗಿಂದ ಭಾರಿ ಸದ್ದು ಕೇಳಿ ಬಂದಿದ್ದು, ವಿಜಯಪುರದ ಕೆಲ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.

ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಕೆಲ ಗ್ರಾಮಗಳಲ್ಲಿ ಸೋಮ​ವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಭಾರೀ ಪ್ರಮಾಣದ ಶಬ್ದ ಕೇಳಿ​ಬಂದಿದ್ದು, ನಂತರ ಭೂಮಿ ಅಲು​ಗಾಡಿದಂತೆ ಆಗಿದೆ. ಗೋಡೆಗಳು ಅಲುಗಾಡಿದ್ದು, ಮನೆಯಲ್ಲಿದ್ದ ಸಾಮಗ್ರಿಗಳು ಕೆಳಗೆ ಬಿದ್ದಿವೆ. ಆದರೆ, ಭೂಕಂಪ ಆಗಿರುವ ಕುರಿತು ಅಧಿಕಾರಿಗಳು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಸೊರಬ್ಬಿ ಹಳ್ಳದಿಂದ ಉಗಮ, 50 ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಧಾರೆ!

ಕಲಬುರಗಿ ಜಿಲ್ಲೆಯ ಅಫಜಲ್ಪುರ ಹಾಗೂ ಜೇವರ್ಗಿ ತಾಲೂಕಿನ ಹಲವು 10. 45ರ ವೇಳೆಗೆ ಬಾಂಬ್‌ ಸ್ಫೋಟಗೊಂಡಂತೆ ಭಾರಿ ಸದ್ದು ಕೇಳಿ ಬಂದಿದ್ದು, ಆತಂಕಗೊಂಡ ಜನ ಮನೆಗಳಿಂದ ಹೊರಕ್ಕೆ ಓಡಿ ಬಂದಿದ್ದಾರೆ. ಆದರೆ, ಭೂಮಿ ಅಲುಗಾಡಿದ ಯಾವುದೇ ಅನುಭವ ಇಲ್ಲಿ ಆಗಿಲ್ಲ. ಎರಡು ಜಿಲ್ಲೆಗಳಿಗೆ ಹೊಂದಿಕೊಂಡತಹ ಗಡಿ ಭಾಗದಲ್ಲಿ ಘಟನೆ ನಡೆದಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.

ಆಲಮೇಲದಲ್ಲಿ ಭೂಕಂಪನ ಸಂಭವಿಸಿದ ಬಗ್ಗೆ ಯಾವುದೇ ನಿರ್ದಿಷ್ಟಮಾಹಿತಿ ಇಲ್ಲ. ಈ ಬಗ್ಗೆ ತಜ್ಞರು ಮಂಗಳವಾರ ಪರಿಶೀಲನೆ ನಡೆಸಲಿದ್ದು, ನಂತರ ಈ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರಭಾರ ಅಧಿಕಾರಿ (ವಿಜಯಪುರ) ಎಸ್‌.ಪ್ರದೀಪ್‌ ತಿಳಿಸಿದ್ದಾರೆ.