ಪ್ರವೀಣ್ ನೆಟ್ಟಾರು ಕನಸಿನ ಮನೆಗೆ ದ‌.ಕ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ನೆಟ್ಟಾರುವಿನಲ್ಲಿ ಶಂಕು ಸ್ಥಾಪನೆ ಮಾಡಿದ ನಳಿನ್ ಕುಮಾರ್ ಕಟೀಲ್

ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು

ಮಂಗಳೂರು(ನ.02): ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ‌ನೆಟ್ಟಾರಿಗೆ 60 ಲಕ್ಷ ವೆಚ್ಚದ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿದ್ದು, ಪ್ರವೀಣ್ ಕನಸು ನನಸಾಗಿಸಲು ರಾಜ್ಯ ಬಿಜೆಪಿ ಮತ್ತು ನಳಿನ್ ಕುಮಾರ್ ಕಟೀಲ್ ಹೆಜ್ಜೆ ಇಟ್ಟಿದ್ದಾರೆ. ಪ್ರವೀಣ್ ‌ನೆಟ್ಟಾರು ಕನಸಿನ ಮನೆ ನಿರ್ಮಾಣಕ್ಕೆ ನಳಿನ್ ಕುಮಾರ್ ಕಟೀಲ್ ಸಾಥ್ ನೀಡಿದ್ದು, ಪ್ರವೀಣ್ ಕನಸು ನನಸು ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಹೆಜ್ಜೆ ಇಟ್ಟಿದ್ದಾರೆ. ಪ್ರವೀಣ್ ನೆಟ್ಟಾರು ಕನಸಿನ ಮನೆಗೆ ದ‌.ಕ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ನೆಟ್ಟಾರುವಿನಲ್ಲಿ ನಳಿನ್ ಕುಮಾರ್ ಕಟೀಲ್ ಶಂಕು ಸ್ಥಾಪನೆ ಮಾಡಿದ್ದಾರೆ. ಪ್ರವೀಣ್ ಸಮಾಧಿ ಬಳಿಯ ಜಾಗದಲ್ಲೇ ಹೊಸ ಮನೆಗೆ ಶಂಕುಸ್ಥಾಪನೆ ಮಾಡಲಾಗಿದ್ದು, ಪೂಜೆ ನೆರವೇರಿಸಿ ಕುಟುಂಬಸ್ಥರ ಸಮ್ಮುಖದಲ್ಲಿ ಮನೆಗೆ ಗುದ್ದಲಿ ಪೂಜೆ ಮಾಡಲಾಗಿದೆ. 

ಹಳೆಯ ಮನೆ ಕೆಡವಿ ಹೊಸ ಮನೆಗೆ ಗುದ್ದಲಿ ಪೂಜೆ ನೆರವೇರಿಸಿದ್ದು, ಮೊಗರೋಡಿ ಕನ್ಸ್ ಸ್ಟ್ರಕ್ಷನ್ ಕಂಪನಿಗೆ ಮನೆ ನಿರ್ಮಾಣದ ಜವಾಬ್ದಾರಿ ವಹಿಸಲಾಗಿದೆ. 2,700 ಚ.ಅಡಿಯ ನೂತನ ಮನೆಗೆ 60 ಲಕ್ಷ ವೆಚ್ಚ ತಗುಲಲಿದೆ. ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಚಿವ ಎಸ್.ಅಂಗಾರ, ಶಾಸಕ ಸಂಜೀವ ಮಠಂದೂರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ, ಪ್ರವೀಣ್ ಪತ್ನಿ ನೂತನ ಹಾಗೂ ಕುಟುಂಬಿಕರು ಉಪಸ್ಥಿತಿಯಿದ್ದರು. ಕೆಲ ದಿನಗಳ ಹಿಂದೆ ಪ್ರವೀಣ್ ಕುಟುಂಬಸ್ಥರಿಗೆ ಭರವಸೆ ನೀಡಿದ್ದ ‌ನಳಿನ್, ಕೊಟ್ಟ ಮಾತಿನಂತೆ ಮನೆ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಪ್ರವೀಣ್ ಪತ್ನಿಗೆ ‌ದ.ಕ ಜಿಲ್ಲಾಧಿಕಾರಿ ‌ಕಚೇರಿಯಲ್ಲಿ ಸರ್ಕಾರಿ ಕೆಲಸ ಕೂಡ ಸಿಕ್ಕಿದೆ. ಕಳೆದ ಜುಲೈ 26 ರಂದು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಪ್ರವೀಣ್ ಹತ್ಯೆ ಬಳಿಕ ಬಿಜೆಪಿ‌ ನಾಯಕರು ಮುಜುಗರಕ್ಕೆ ಈಡಾಗಿದ್ದರು. ನಳಿನ್ ಕಟೀಲ್ ಮತ್ತು ಸುನೀಲ್ ಕುಮಾರ್ ಕಾರು ಅಲುಗಾಡಿಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು.

Praveen Nettaru Murder Case: ಹಂತಕರನ್ನು ಹುಡುಕಿಕೊಟ್ಟರೆ ಇನಾಮು: ಎನ್‌ಐಎ ಘೋಷಣೆ

ಇನ್ನು ಮನೆಯ ಗುದ್ದಲಿ ಪೂಜೆ ಬಳಿಕ ಪ್ರವೀಣ್ ಪತ್ನಿ ‌ನೂತನ ಮನೆಯವರ ಪರವಾಗಿ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ. ‌ಸಂಸದರು, ಸಚಿವರು ಮತ್ತು ಬಿಜೆಪಿ‌ ಮುಖಂಡರು ಪ್ರವೀಣ್ ‌ಕನಸಿಗೆ ಹೆಜ್ಜೆ ಇಟ್ಟಿದ್ದಾರೆ.‌ ಪಕ್ಷದ ರಾಜ್ಯಾಧ್ಯಕ್ಷರು ಕನಸಿನ ಮೊದಲ ಹೆಜ್ಜೆ ಇಟ್ಟಿದ್ದಾರೆ. ಪಕ್ಷದ ಎಲ್ಲಾ ನಾಯಕರು ನಮ್ಮ ‌ಜೊತೆಗೆ ನಿಂತಿದ್ದಾರೆ‌. ಆರೋಪಿಗಳನ್ನ ಹಿಡಿಯುವಲ್ಲೂ ಸಹಕಾರ ಮುಂದೆಯೂ ಸಿಗಲಿ. ಇನ್ನೂ ಆರು ಜನರ ಪತ್ತೆ ಆಗಬೇಕು, ಅವರನ್ನೂ ಹಿಡಿಯಲು ಎಲ್ಲರೂ ಸಹಕರಿಸಲಿ ಎಂದಿದ್ದಾರೆ.

ಪ್ರವೀಣ್ ಕಾರ್ಯದ ಎದುರು ಹಣದ ಮೌಲ್ಯ ದೊಡ್ಡದಲ್ಲ

ಪ್ರವೀಣ್ ನೆಟ್ಟಾರು ‌ಮನೆಗೆ ಶಂಕುಸ್ಥಾಪನೆ ‌ನೆರವೇರಿಸಿ ಬಿಜೆಪಿ ರಾಜ್ಯಾಧ್ಯಕ್ಷ ‌ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ. ಪ್ರವೀಣ್ ಕನಸು ನನಸು ಮಾಡಲು ಪಕ್ಷ ಹೆಜ್ಜೆ ಇಟ್ಟಿದೆ. ಅವರ ಹಳೆಯ ಮನೆ ಕೆಡವಿ ಇಂದು ಹೊಸ ಮನೆಗೆ ಗುದ್ದಲಿ ಪೂಜೆ ಮಾಡಿದ್ದೇವೆ.‌ 60 ಲಕ್ಷ ವೆಚ್ಚದಲ್ಲಿ 2700 ಚ.ಅಡಿಯ ಮನೆ ನಿರ್ಮಾಣ ಆಗಲಿದೆ. ಮುಗ್ರೋಡಿ ಕನ್ಸ್ಟ್ ಕ್ಷನ್ ಕಂಪೆನಿ ಮೇ ಅಂತ್ಯದ ಒಳಗೆ ಮನೆ ನಿರ್ಮಾಣ ಮಾಡಿ ಕೊಡಲಿದೆ. ಈಗಾಗಲೇ ಪ್ರವೀಣ್ ಪತ್ನಿಗೆ ಡಿಸಿ ‌ಕಚೇರಿಯಲ್ಲಿ ಕೆಲಸ ಸಿಕ್ಕಿದೆ.‌ ಬಿಜೆಪಿಯಿಂದ 25 ಲಕ್ಷ, ಸರ್ಕಾರ 25 ಲಕ್ಷ ಹಾಗೂ ಯುವಮೋರ್ಛಾ 15 ಲಕ್ಷ ಕೊಟ್ಟಿದೆ. ಪ್ರವೀಣ್ ನಮ್ಮ ಒಂದೊಳ್ಳೆ ಕಾರ್ಯಕರ್ತ, ಅವನ ಕುಟುಂಬದ ಜೊತೆ ನಾವು ನಿಂತಿದ್ದೇವೆ. ಅವನ ಕೆಲಸಕ್ಕೆ ‌ಮೌಲ್ಯ ಕಟ್ಟಲು ಸಾಧ್ಯವೇ ಇಲ್ಲ, ಹಾಗಾಗಿ ಇಲ್ಲಿ ಹಣ ಮುಖ್ಯವಲ್ಲ. ಬಿಜೆಪಿ ಪಕ್ಷ ಕಾರ್ಯಕರ್ತನ ಕುಟುಂಬದ ಪರ ಯಾವತ್ತೂ ‌ನಿಲ್ಲಲಿದೆ. ನಾವು ಹತ್ಯೆಯಾದ ವೇಳೆಯೇ ಕುಟುಂಬದ ಜೊತೆ ನಿಲ್ಲುವ ಭರವಸೆ ಕೊಟ್ಟಿದ್ದೆವು. ಅವನು ಪಕ್ಷಕ್ಕೆ ಸಾಕಷ್ಟು ಸಮಯ ಕೊಟ್ಟಿದ್ದ, ಹಾಗಾಗಿ ಪಕ್ಷ ಅವನ ಕುಟುಂಬದ ಪರ ನಿಂತಿದೆ. ಮನೆಯವರೇ ಕೊಟ್ಟ ನಕ್ಷೆಯ ಪ್ರಕಾರ ಈ ಮನೆ ನಿರ್ಮಾಣ ಆಗ್ತಿದೆ. ಹಲವಾರು ಮಂದಿ ‌ಮನೆ ಕಟ್ಟಿ ಕೊಡಲು ಮುಂದೆ ಬಂದಿದ್ದರು. ಆದರೆ ಅವರ ಮನೆಯವರ ಅಭಿಪ್ರಾಯದಂತೆ ಪಕ್ಷವೇ ಮನೆ ಕಟ್ಟಿ ಕೊಡ್ತಾ ಇದೆ. ಇಡೀ ಮನೆಯ ವೆಚ್ಚವನ್ನು ಬಿಜೆಪಿ ಪಕ್ಷ ಕೊಡ್ತದೆ ಅಂತ ತಿಳಿಸಿದ್ದಾರೆ. 

ಈಗಾಗಲೇ ಎಲ್ಲರ ಬಂಧನ ಆಗಿದೆ, ಆರ್ಥಿಕ ಸಹಕಾರ ಕೊಟ್ಟವರಿಗೆ ಲುಕ್ ಔಟ್ ನೋಟೀಸ್. ರಾಜ್ಯ ಮತ್ತು ಕೇಂದ್ರ ಸರ್ಕಾರ ‌ಸರಿಯಾದ ತನಿಖೆ ಮಾಡ್ತಿದೆ. ಇದರ ಹಿಂದೆ ಇರೋ ಎಲ್ಲಾ ಶಕ್ತಿಗಳನ್ನು ಬಂಧಿಸೋ ಕೆಲಸ ಆಗ್ತಿದೆ.‌ ಪ್ರಮುಖ ಆರೋಪಿಗಳು ಜೈಲಿನ ಒಳಗೆ ಇದ್ದಾರೆ‌. ಆರ್ಥಿಕ, ವಾಹನ ಕೊಟ್ಟವರು, ಮಾನಸಿಕವಾಗಿ ಆರೋಪಿಗಳ ಜೊತೆ ನಿಂತವರನ್ನೂ ಬಿಡಲ್ಲ. ಇದಕ್ಕಾಗಿ ಎನ್ಐಎ ತಪ್ಪಿಸಿಕೊಂಡವರ ಪತ್ತೆಗೆ ಬಹುಮಾನ ‌ಘೋಷಿಸಿದೆ.‌ ಈಗಾಗಲೇ ಪ್ರವೀಣ್ ಹತ್ಯೆ ಬಳಿಕ ಪಿಎಫ್ಐ ನಿಷೇಧ ಆಗಿದೆ. ಸದ್ಯ ‌ಹತ್ಯೆ ಕೇಸ್ ಆರೋಪಿಗಳು ಯಾವ ಕೋರ್ಟ್ ನಲ್ಲೂ ಹೊರ ಬರದ ಹಾಗೆ ಪ್ರಕರಣ ದಾಖಲಿಸಲಾಗಿದೆ.‌ ಎನ್ ಐಎ ಇದಕ್ಕೆ ಸಂಬಂಧಿಸಿ ಎಲ್ಲಾ ರೀತಿಯ ಕೆಲಸ ಮಾಡ್ತಿದೆ ಎಂದಿದ್ದಾರೆ. ‌