ಭಟ್ಕಳದಲ್ಲಿ ಹದ್ದುಗಳ ಸಾಮೂಹಿಕ ಸಾವು
ಭಟ್ಕಳದ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜಾಲಿಕೋಡಿಯಲ್ಲಿ ಹದ್ದುಗಳು ಸಾವನ್ನಪ್ಪುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಉತ್ತರ ಕನ್ನಡ(ಏ.05): ಭಟ್ಕಳದ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜಾಲಿಕೋಡಿಯಲ್ಲಿ ಹದ್ದುಗಳು ಸಾವನ್ನಪ್ಪುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಾಲ್ಕು ಕೊರೋನಾ ವೈರಸ್ ಸೋಂಕಿತರು ಪತ್ತೆಯಾಗುವುದರೊಂದಿಗೆ ಜನತೆ ಭೀತಿಯಲ್ಲಿಯೇ ಕಾಲ ಕಳೆಯುತ್ತಿದ್ದರೆ, ಹಕ್ಕಿಗಳು ಸಾಯುತ್ತಿರುವುದು ನಾಗರೀಕರನ್ನು ಇನ್ನಷ್ಟಚಿಂತೆಗೀಡು ಮಾಡಿದೆ.
ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಆರು ಹದ್ದುಗಳು ಬಿದ್ದು ಮೃತ ಪಟ್ಟಿರುವುದಾಗಿ ವರದಿಯಾಗಿದೆ. ಹದ್ದುಗಳ ಸಾವು ಸಾಮಾನ್ಯ ಎಂದುಕೊಂಡ ಜನರು ಹದ್ದುಗಳು ದಿನಕ್ಕೊಂದರಂತೆ ಸಾಯುತ್ತಿರುವುದನ್ನು ನೋಡಿ ಗಾಬರಿಗೊಂಡಿದ್ದಾರೆ.
ಶನಿವಾರವೂ ಕೂಡ ಹಾರುತ್ತಿದ್ದ ಹದ್ದೊಂದು ದಿಢೀರ್ ಅಸ್ವಸ್ಥಗೊಂಡು ನೆಲಕ್ಕೆ ಬಿದ್ದಿದೆ. ತಕ್ಷಣ ಜಾಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದು ಸ್ಥಳಕ್ಕೆ ಪಶು ಇಲಾಖೆಯ ಸಹಾಯಕ ನಿರ್ದೇಶಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಾಲಿಯಲ್ಲಿ ಹದ್ದುಗಳ ದಿಢೀರ್ ಸಾವಿಗೆ ಇನ್ನಷ್ಟೇ ಕಾರಣ ತಿಳಿದು ಬರಬೇಕಿದೆ.