ಬಾಡಿಗೆ ಕೇಳಿ ಹೌಹಾರಿದ ಉಪ ಮುಖ್ಯಮಂತ್ರಿ
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಇಲ್ಲಿ ಕಟ್ಟುತ್ತಿರುವ ಹಾಸ್ಟೆಲ್ ಬಾಡಿಗೆ ಬಗ್ಗೆ ಕೇಳಿ ಹೌಹಾರಿದರು. ತಿಂಗಳಿಗೆ ಲಕ್ಷ ಲಕ್ಷ ಬಾಡಿಗೆ ಕಟ್ಟುವ ವಿಚಾರ ಕೇಳಿ ಅಚ್ಚರಿ ವ್ಯಕ್ತಪಡಿಸಿದರು.
ಚಿತ್ರದುರ್ಗ [ಸೆ.12]: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಹಾಗೂ ಸ್ವಂತ ಕಟ್ಟಡವಿರುವ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಭಿವೃದ್ದಿ ನಿಗಮಗಳ ಮತ್ತು ಲೋಕೋಪಯೋಗಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ಹಾಸ್ಟೆಲ್‌ಗಳಲ್ಲಿ ಕನಿಷ್ಠ ಐದು ವಿದ್ಯಾರ್ಥಿಗಳನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಿಕೊಳ್ಳುವಂತೆ ಸೂಚಿಸಿದರು.
‘ಶೀಘ್ರದಲ್ಲೇ ಎಚ್‌ಡಿಕೆ ಮತ್ತೆ ಕರ್ನಾಟಕ ಸಿಎಂ’
ನಗರದ ಹೊರವಲಯದಲ್ಲಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಕ್ಕೆ ಮಾಸಿಕ ಬರೋಬ್ಬರಿ 1.25 ಲಕ್ಷ ರು. ಬಾಡಿಗೆ ನೀಡುತ್ತಿರುವ ಸಂಗತಿ ಕೇಳಿ ಸ್ವತಃ ಉಪ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಹೌಹಾರಿದರು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ತಿಪ್ಪಾರೆಡ್ಡಿ, ಚಳ್ಳಕೆರೆ ರಸ್ತೆಯಲ್ಲಿರುವ ವೈದ್ಯ ಶ್ರೀಧರಮೂರ್ತಿ ಎನ್ನುವರಿಗೆ ಸೇರಿದ ಕಟ್ಟವನ್ನು ಮಾಸಿಕ 1.25 ಲಕ್ಷ ರು. ನೀಡಿ ಬಾಡಿಗೆ ಪಡೆಯಲಾಗಿದೆ. ಅದೇನು ಸ್ಟಾರ್ ಹೋಟೆಲ್ಲಾ ಎಂದು ಪ್ರಶ್ನಿಸಿದರು. ಕಟ್ಟಡದಲ್ಲಿ ಹತ್ತು ರೂಂಗಳಿದ್ದು ಪ್ರತಿ ರೂಂಗೂ ಮಾಸಿಕ ಹತ್ತು ಸಾವಿರ ರು. ಬಾಡಿಗೆಯಾ? ಈ ಹಣದಲ್ಲಿ ಕನಿಷ್ಠ ನಾಲ್ಕು ಕಟ್ಟಡಗಳನ್ನು ಬಾಡಿಗೆ ಪಡೆಯಬಹುದು ಎಂದರು. ಈ ಮಾತಿಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ತಕ್ಷಣವೇ ಕಡಿಮೆ ಮೊತ್ತದ ಬದಲಿ ಕಟ್ಟಡವನ್ನು ಹಾಸ್ಟೆಲ್ ಗೆ ಬಾಡಿಗೆ ಪಡೆಯುವಂತೆ ಸೂಚಿಸಿದರು.