ಮೈಸೂರು(ಜು.17): ಬೆಟ್ಟದಪುರ ಸಮೀಪ ಪಿರಿಯಾಪಟ್ಟಣ, ಕೆ.ಆರ್‌. ನಗರ, ಹುಣಸೂರು, ಬೆಟ್ಟದಪುರ ವ್ಯಾಪ್ತಿಯ ರೈತರಿಗೆ ಜೀವನಾಡಿಯಾಗಿರುವ ಹಾರಂಗಿ ಜಲಾಶಯ ಸಂಪೂರ್ಣ ಖಾಲಿಯಾಗಿದ್ದು ರೈತರು ಕಂಗಾಲಾಗಿದ್ದಾರೆ. ಜೂನ್‌ ಮತ್ತು ಜುಲೈನಲ್ಲಿ ಬರುತ್ತಿದ್ದ ಮುಂಗಾರು ಮಳೆಯು ಕೈಕೊಟ್ಟಿದ್ದರಿಂದ ಜಲಾಶಯಕ್ಕೆ ನಿರೀಕ್ಷಿತ ಮಟ್ಟದಲ್ಲಿ ನೀರು ಬಂದಿಲ್ಲ.

ಅಧಿಕಾರಿಗಳ ನಿರ್ಲಕ್ಷ್ಯ:

ಈ ಭಾಗದ ರೈತರು ತಂಬಾಕು ಬೆಳೆಯನ್ನಾದರೂ ರಕ್ಷಿಸಿಕೊಳ್ಳಲು ಜಲಾಶಯದಿಂದ ಸುಮಾರು 15 ದಿನಗಳಿಗಾದರೂ ನೀರು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೆ ಪರಿಸ್ಥಿತಿ ಅವಲೋಕಿಸಿದರೆ ಜಲಾಶಯಕ್ಕೆ ನೀರೇ ಬರುತ್ತಿಲ್ಲ. ಆದರೆ ಸಂಬಂಧಪಟ್ಟ ಹಾರಂಗಿ ಜಲಾಶಯದ ಅಧಿಕಾರಿಗಳು ಇದರ ಬಗ್ಗೆ ಮಾಹಿತಿಯನ್ನು ನೀಡುತ್ತಿಲ್ಲ. ರೈತರು ಮುಂಗಾರು ಹಂಗಾಮಿನ ಬೆಳೆಯನ್ನು ರಕ್ಷಿಸಿಕೊಳ್ಳಲು ಏನು ಮಾಡಬೇಕೆಂಬ ಆತಂಕದಲ್ಲಿದ್ದಾರೆ.

ಕನಿಷ್ಠ 15 ದಿನಗಳಿಗೊಮ್ಮೆಯಾದರೂ ನೀರು ಬಿಡಬೇಕು:

ಎಲ್ಲ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಭತ್ತದ ಬಿತ್ತನೆ ಬೀಜ ದಾಸ್ತಾನು ಆಗಿದ್ದು, ಆದರೆ ನೀರಾವರಿ ಪ್ರದೇಶವಾಗದ ಯಾವ ರೈತರು ಭತ್ತದ ಬೀಜವನ್ನು ಕೊಳ್ಳಲು ಮುಂದೆ ಬರುತ್ತಿಲ್ಲ. ಅಲ್ಲದೆ ಈಗಿರುವ ಮುಂಗಾರು ಬೆಳೆಗಳಾದ ಹಲಸಂದೆ, ಹೆಸರು, ಉದ್ದು, ಎಳ್ಳು ಬೆಳೆಗಳು ಕೈಗೆ ಬಾರದಂತಾಗಿದೆ. ಹಾರಂಗಿ ಜಲಾಶಯದಿಂದ ಕನಿಷ್ಠ 15 ದಿನಗಳಾದರೂ ನೀರು ಹರಿಸಿದರೆ ರೈತರನ್ನು ಸಂಕಷ್ಟದಿಂದ ಪಾರು ಮಾಡಬಹುದು.

ಮೈದುಂಬಿದ ರಾಜ್ಯದ ಮೊದಲ ಜಲಾಶಯ : ಗಾಜನೂರು ಡ್ಯಾಂನಿಂದ ನೀರು ಬಿಡುಗಡೆ