ಬೆಂಗಳೂರು [ಜ.25]:  ಸಿಲಿಕಾನ್‌ ಸಿಟಿಯ ಹೃದಯ ಭಾಗದಲ್ಲಿರುವ ಜಯಚಾಮ ರಾಜೇಂದ್ರ ಒಡೆಯರ್‌ ಉದ್ಯಾನದ (ಕಬ್ಬನ್‌ ಉದ್ಯಾನ) ಸುಮಾರು ಐದು ಎಕರೆ ಪ್ರದೇಶದಲ್ಲಿ ಬೀಳುವ ಹಂತದಲ್ಲಿದ್ದ ಬಿದಿರನ್ನು ತೋಟಗಾರಿಕೆ ಇಲಾಖೆ ಸಂಪೂರ್ಣ ತೆರವುಗೊಳಿಸಿದೆ.

ಕಸ್ತೂರಬಾ ರಸ್ತೆ ಪಕ್ಕ, ಬಾಲಭವನ, ವೆಂಕಟಪ್ಪ ಕಲಾ ಗ್ಯಾಲರಿಯ ಹಿಂಬದಿ ಮತ್ತು ಬಾಲ ಭವನದಿಂದ ಪ್ರೆಸ್‌ಕ್ಲಬ್‌ ಕಡೆಗೆ ಬರುವ ಮಾರ್ಗದಲ್ಲಿ ಬೆಳೆದಿದ್ದ ಬಿದಿರು ಬೀಳುವ ಹಂತದಲ್ಲಿತ್ತು. ಅಲ್ಲದೆ, ಸಂಪೂರ್ಣ ಒಣಗಿದ್ದು ಬೇಸಿಗೆಯಲ್ಲಿ ಬೆಂಕಿ ಬೀಳುವ ಆತಂಕವೂ ಇತ್ತು. ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಕಾರಣದಿಂದ ಈ ಎಲ್ಲ ಬಿದಿರನ್ನು ಇಲಾಖೆ ಸಿಬ್ಬಂದಿ ತಗೆದಿದ್ದಾರೆ.

ಉದ್ಯಾನದಲ್ಲಿ ಸುಮಾರು ಐದು ಎಕರೆ ಪ್ರದೇಶದಲ್ಲಿ ಆವರಿಸಿದ್ದ ಬಿದಿರು ಸಂಪೂರ್ಣವಾಗಿ ಒಣಗಿತ್ತು. ಇದನ್ನು ತೆರವುಗೊಳಿಸುವುದಕ್ಕಾಗಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಟೆಂಡರ್‌ ಕರೆಯಲು ಪ್ರಯತ್ನಿಸಲಾಗಿತ್ತು. ಒಬ್ಬ ವ್ಯಕ್ತಿ ಬಂದು ಸುಮಾರು 10 ಟ್ರಕ್‌ನಷ್ಟುಬಿದಿರು ಖರೀದಿ ಮಾಡಿದ್ದರು. ಇನ್ನುಳಿದ ಬಿದಿರನ್ನು ತೆರವು ಮಾಡುವುದಕ್ಕೆ ಮುಂದಾಗಿರಲಿಲ್ಲ. ಪರಿಣಾಮ ಸುಮಾರು 30ಕ್ಕೂ ಹೆಚ್ಚು ಟ್ರಕ್‌ಗಳಷ್ಟುಬಿದಿರನ್ನು ಇಲಾಖೆ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ಬುಡ ಸಮೇತ ಕಿತ್ತುಹಾಕಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿದಿರು ತೆರವಿಗೆ ಸಾರ್ವಜನಿಕರು ಹಾಗೂ ಖಾಸಗಿಯವರು ಮುಂದಾಗಲಿಲ್ಲ, ಹಾಗಾಗಿ ಬಿದಿರು ಸಂಪೂರ್ಣ ಒಣಗಿತ್ತು. ಜೊತೆಗೆ ಬೆಂಕಿ ಬೀಳುವ ಸಾಧ್ಯತೆಯೂ ಇತ್ತು. ಪರಿಣಾಮ ತೋಟಗಾರಿಕೆ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಇದೀಗ ಸುಮಾರು 5 ಲಕ್ಷ ರು. ವೆಚ್ಚ ಮಾಡಿ ಸಂಪೂರ್ಣ ಬಿದಿರನ್ನು ತೆರವುಗೊಳಿಸಿರುವುದಾಗಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

BBMPಯಲ್ಲಿ ಖಾಲಿ ಬಿದ್ದಿವೆ ಶೇ.60 ಹುದ್ದೆ!...

ಜೈವಿಕ ಗೊಬ್ಬರವಾಗಿ ಪರಿವರ್ತನೆ: ಇಲಾಖೆಯಿಂದ ತೆರವುಗೊಳಿಸಿರುವ ಬಿದಿರನ್ನು ಗೊಬ್ಬರವನ್ನಾಗಿ ಪರಿವರ್ತಿಸಲು ಇಲಾಖೆ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಟ್ರಕ್‌ಗಳ ಬಿದಿರನ್ನು ಉದ್ಯಾನದಲ್ಲಿ ದೊಡ್ಡದೊಂದು ಗುಂಡಿ ಮಾಡಿ ಮುಚ್ಚಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಈ ಬಿದಿರು ಜೈವಿಕ ಗೊಬ್ಬರವಾಗಿ ಪರಿವರ್ತನೆ ಆಗಲಿದ್ದು, ಉದ್ಯಾನದಲ್ಲಿನ ಮರ ಮತ್ತು ಗಿಡಗಳಿಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ(ಕಬ್ಬನ್‌ ಪಾರ್ಕ್) ಜಿ.ಕುಸುಮಾ ತಿಳಿಸಿದ್ದಾರೆ.

ಉದ್ಯಾನ ಅಭಿವೃದ್ಧಿ:  ಬಿದಿರಿನಿಂದ ತೆರವು ಮಾಡಿದ್ದ ಸ್ಥಳವನ್ನು ಪ್ರಸ್ತುತ ಹದ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಲ್ಯಾಂಡ್‌ಸ್ಕೇಪ್‌ ಮಾಡಲಾಗುವುದು. ವಿವಿಧ ಹೂವಿನ ಸಸಿಗಳನ್ನು ನೆಡಲಾಗುವುದು. ಸಾರ್ವಜನಿಕರಿಗೆ ಮತ್ತಷ್ಟುಆಕರ್ಷಕವಾಗವಂತೆ ಉದ್ಯಾನವನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಅವರು ತಿಳಿಸಿದರು.

ಕಬ್ಬನ್‌ ಉದ್ಯಾನದಲ್ಲಿ ಬೆಳೆದು ಒಣಗಿದ್ದ ಬಿದಿರು ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂಬ ಆತಂಕ ಉಂಟಾಗಿತ್ತು. ಇದೀಗ ಸಂಪೂರ್ಣ ತೆರವು ಮಾಡಿದ್ದೇವೆ. ಈ ಪ್ರದೇಶದಲ್ಲಿ ಉದ್ಯಾನ ಅಭಿವೃದ್ಧಿ ಮಾಡಲಾಗುವುದು.

-ಜಿ.ಕುಸುಮಾ, ಉಪ ನಿರ್ದೇಶಕಿ, ತೋಟಗಾರಿಕೆ ಇಲಾಖೆ