ಲಿಖಿತ ದೂರು ನೀಡುವಂತೆ ಪೋಷಕರಿಗೆ ತಿಳಿಸಿದ್ದೇವೆ. ಪೋಷಕರ ಲಿಖಿತ ದೂರಿನನ್ವಯ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ: ನೆಲಮಂಗಲ ಬಿಇಒ ತಿಮ್ಮಯ್ಯ 

ದಾಬಸ್‌ಪೇಟೆ(ಸೆ.01): ಶಿಕ್ಷಕನೊಬ್ಬ ಶಾಲೆಗೆ ಕುಡಿದು ಬಂದು ಮಕ್ಕಳ ಮುಂದೆ ಬಟ್ಟೆ ಬಿಚ್ಚಿ ಅಸಹ್ಯವಾಗಿ ವರ್ತಿಸಿದ ಶಿಕ್ಷಕನನ್ನು ಪೋಷಕರು ತರಾಟೆಗೆ ತೆಗೆದುಕೊಂಡು ಮಕ್ಕಳ ಸಹಾಯವಾಣಿ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಸೋಂಪುರ ಹೋಬಳಿಯ ಗಂಟೆಹೊಸಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ರಾಮಕೃಷ್ಣಯ್ಯ ಸೋಮವಾರ ಶಾಲೆಯಲ್ಲಿ ಕುಡಿದ ಅಮಲಿನಲ್ಲಿ ಮಕ್ಕಳ ಮುಂದೆ ಶರ್ಟ್‌ ಬಿಚ್ಚಿದ್ದಲ್ಲದೆ, ಏನೇನೋ ಮಾತನಾಡಿದ್ದನ್ನು ಮಕ್ಕಳು ಮನೆಯಲ್ಲಿ ಪೋಷಕರಿಗೆ ವಿಷಯ ತಿಳಿಸಿದ್ದಾರೆ.

Viral video: ಮಹಿಳೆಯೊಂದಿಗೆ ಅನುಚಿತ ವರ್ತನೆ: ಸಾರಿಗೆ ಬಸ್ ನಿರ್ವಾಹಕನಿಗೆ ಬಿತ್ತು ಧರ್ಮದೇಟು

ಈ ವಿಚಾರವಾಗಿ ಮಂಗಳವಾರ ಶಾಲೆಗೆ ಬಂದ ಪೋಷಕರು ಹಾಗೂ ಗ್ರಾಮಸ್ಥರು ಶಿಕ್ಷಕನನ್ನು ಪ್ರಶ್ನಿಸಿದ್ದಲ್ಲದೆ ಶಾಲೆಯಲ್ಲಿ ತಪಾಸಣೆ ನಡೆಸಿದಾಗ ಶಾಲೆಯ ಶೌಚಾಲಯದಲ್ಲಿ ಟೆಟ್ರಾಪ್ಯಾಕಿನ ಮಧ್ಯದ ಪಾಕೆಟ್‌ಗಳು ಹಾಗೂ ಪ್ಲಾಸ್ಟಿಕ್‌ ಲೋಟಗಳು ಪತ್ತೆಯಾಗಿದೆ. ನಂತರ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತಂದ ಪೋಷಕರು, ಮುಂದೆ ಈ ರೀತಿ ಕುಡಿದು ಶಾಲೆಗೆ ಬರದಂತೆ ಎಚ್ಚರಿಕೆ ಕೊಟ್ಟಿದ್ದು ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆನ್ನಲಾಗಿದೆ. ಲಿಖಿತ ದೂರು ನೀಡುವಂತೆ ಪೋಷಕರಿಗೆ ತಿಳಿಸಿದ್ದೇವೆ. ಪೋಷಕರ ಲಿಖಿತ ದೂರಿನನ್ವಯ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ನೆಲಮಂಗಲ ಬಿಇಒ ತಿಮ್ಮಯ್ಯ ಹೇಳಿದರು.