ಹುಬ್ಬಳ್ಳಿ[ಡಿ.20]: ಬಿಆರ್‌ಟಿಎಸ್‌ ಬಸ್‌ ಒಂದು ಗಂಟೆ ತಡವಾಗಿ ಆಗಮಿಸಿದ ಪರಿಣಾಮ ಮಹಿಳಾ ಸಿಬ್ಬಂದಿಗೆ ಪ್ರಯಾಣಿಕರು ಕಿರಿಕ್‌ ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಇದರಲ್ಲಿ ಕೆಲ ಕುಡುಕರು ಸಹ ಸೇರಿಕೊಂಡು ಮಹಿಳಾ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿದ್ದು ನಡೆಯಿತು. ಕೊನೆಗೆ ಮಹಿಳಾ ಸಿಬ್ಬಂದಿ ಮಹಿಳಾ ಪೊಲೀಸ್‌ ಪೇದೆಯೊಬ್ಬರನ್ನು ಬಸ್‌ನಲ್ಲಿ ಕರೆದುಕೊಂಡು ಧಾರವಾಡಕ್ಕೆ ಪ್ರಯಾಣಿಸಿದ್ದಾರೆ.

ಆಗಿದ್ದೇನು?

ಪ್ರತಿದಿನ ರಾತ್ರಿ 11ಗಂಟೆಗೆ ಬಿಆರ್‌ಟಿಎಸ್‌ ಕೊನೆ ಬಸ್‌. ಅಂಬೇಡ್ಕರ್‌ ಸರ್ಕಲ್‌ನಿಂದ ಬರೋಬ್ಬರಿ 11ಗಂಟೆಗೆ ಹೊರಡಬೇಕು. ಆದರೆ ನಿನ್ನೆ ಬರೋಬ್ಬರಿ 1 ಗಂಟೆ ತಡವಾಗಿ ಅಂದರೆ 12ಗಂಟೆಗೆ ಈ ಬಸ್‌ ಚಲಿಸಿದೆ. ಈ ನಡುವೆ 11 ಗಂಟೆಗೆ ಸರಿಯಾಗಿ ಬಸ್‌ ಬರುತ್ತದೆ ಎಂದುಕೊಂಡು ಕಾರ್ಪೋರೇಷನ್‌ ನಿಲ್ದಾಣದಲ್ಲಿ 15ಕ್ಕೂ ಹೆಚ್ಚು ಜನ ಹಾಗೂ ಅತ್ತ ಹಳೆ ಬಸ್‌ ನಿಲ್ದಾಣದಲ್ಲಿ 25ಕ್ಕೂ ಹೆಚ್ಚು ಜನ ಪ್ರಯಾಣಿಕರು ಟಿಕೆಟ್‌ ಪಡೆದಿದ್ದರು. ಇವರೆಲ್ಲರಿಗೂ ಬಿಆರ್‌ಟಿಎಸ್‌ ಬಸ್‌ ನಿಲ್ದಾಣದಲ್ಲಿ 11ರೊಳಗೆ ಟಿಕೆಟ್‌ ಕೊಡಲಾಗಿತ್ತು. ಬಸ್‌ ನಿಲ್ದಾಣದಲ್ಲಿ ಕಾಯ್ದು ಕಾಯ್ದು ಸುಸ್ತಾದ ಪ್ರಯಾಣಿಕರು, ಪದೇ ಪದೇ ಟಿಕೆಟ್‌ ಕೌಂಟರ್‌ನಲ್ಲಿದ್ದ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೌಂಟರ್‌ನಲ್ಲಿದ್ದ ಸಿಬ್ಬಂದಿ ಕೂಡ ಮೊಬೈಲ್‌ನಲ್ಲಿ ಬಸ್‌ ಯಾವಾಗ ಬರುತ್ತದೆ ಎಂದೆಲ್ಲ ಮಾಹಿತಿ ಕೇಳಿದ್ದಾರೆ. ಅತ್ತ ಕಡೆಯಿಂದ ಈಗ ಬರುತ್ತದೆ. ಕೆಲ ಸಮಯದಲ್ಲಿ ಬರುತ್ತದೆ ಎಂದುಕೊಂಡೇ ಸಿಬ್ಬಂದಿ ಕಾಲ ಕಳೆದಿದ್ದಾರೆ. ಆದರೆ ನಿಲ್ದಾಣದಲ್ಲಿ ನಿಂತ ಪ್ರಯಾಣಿಕರು 11.30 ಅನ್ನುವಷ್ಟರಲ್ಲೇ ರೊಚ್ಚಿಗೆದ್ದು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲ ಪ್ರಯಾಣಿಕರು ಹಿರಿಯ ಅಧಿಕಾರಿಗಳ ಮೊಬೈಲ್‌ನಂಬರವನ್ನು ಪಡೆದಿದ್ದಾರೆ. ಆದರೆ ಆ ಮೊಬೈಲ್‌ಗಳೆಲ್ಲ ಸ್ವಿಚ್‌ ಆಫ್‌ ಅಥವಾ ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ಎಂದೇ ಬಂದಿವೆಯೇ ಹೊರತು ಯಾವ ಅಧಿಕಾರಿಯನ್ನು ಸಂಪರ್ಕಿಸಲು ಪ್ರಯಾಣಿಕರಿಗೆ ಸಾಧ್ಯವಾಗಿಲ್ಲ. ಇದು ಕಾರ್ಪೋರೇಷನ್‌ ಹಾಗೂ ಹಳೆ ಬಸ್‌ ನಿಲ್ದಾಣ ಎರಡು ಕಡೆಗಳಲ್ಲೂ ಇದೇ ರೀತಿ ಆಗಿದೆ.

ಮಹಿಳಾ ಸಿಬ್ಬಂದಿಗೆ ಅವಮಾನ:

ಇದೇ ಕೊನೆ ಬಸ್‌ ಆಗಿದ್ದರಿಂದ ಬಿಆರ್‌ಟಿಎಸ್‌ ಸಿಬ್ಬಂದಿ ಕೂಡ ಹೊರಡುತ್ತಾರೆ. ಅಂತೂ ಇಂತೂ ಕೊನೆಗೆ 12ಗಂಟೆಗೆ ಅಂಬೇಡ್ಕರ್‌ ಸರ್ಕಲ್‌ನಿಂದ ಬಸ್‌ ಹೊರಟು ಹಳೆ ಬಸ್‌ ನಿಲ್ದಾಣಕ್ಕೆ ಬಂದಾಗ 12.08 ಗಂಟೆ. ಆಗ ಸಿಬ್ಬಂದಿ ನಿಟ್ಟಿಸಿರು ಬಿಟ್ಟಿದ್ದಾರೆ. ಆದರೆ ಕೆಲ ಕುಡುಕರು ಸಹ ಇದೇ ಬಸ್‌ನಲ್ಲಿ ಏರಿದ್ದರಿಂದ ಮಹಿಳಾ ಸಿಬ್ಬಂದಿ ಗಾಬರಿಯಾಗಿ ಹಳೆ ಬಸ್‌ ನಿಲ್ದಾಣದಲ್ಲಿದ್ದ ಮುಂಜಾಗ್ರತಾ ಕ್ರಮವಾಗಿ ಮಹಿಳಾ ಪೊಲೀಸ್‌ ಪೇದೆಯನ್ನು ತಮ್ಮ ಬಸ್‌ನಲ್ಲಿ ಹತ್ತಿಸಿಕೊಂಡು ಧಾರವಾಡವರೆಗೂ ಪ್ರಯಾಣಿಸಿದ್ದಾರೆ. ಮಹಿಳಾ ಪೇದೆ ಇದ್ದರೂ ಏಳೆಂಟು ಜನ ಪ್ರಯಾಣಿಕರು (ಕುಡಿದು ಹತ್ತಿದವರು) ಧಾರವಾಡವರೆಗೂ ಮಹಿಳಾ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಲೇ ಇದ್ದರು.

ವಾಕಿಟಾಕಿ:

ಬಿಆರ್‌ಟಿಎಸ್‌ನಲ್ಲಿ ಬಸ್‌ ತಡವಾಗುತ್ತಿದೆ ಏಕೆ ಎಂಬ ಬಗ್ಗೆ ತಿಳಿಸಲು ವಾಕಿಟಾಕಿ ಸೇರಿದಂತೆ ಎಲ್ಲ ಬಗೆಯ ಸೌಲಭ್ಯಗಳುಂಟು. ಆದರೂ ಅಧಿಕಾರಿಗಳು, ನಿಲ್ದಾಣದಲ್ಲಿರುವ ಸಿಬ್ಬಂದಿಗಳಿಗೆ ಸರಿಯಾಗಿ ಮಾಹಿತಿ ನೀಡದ ಕಾರಣ ಮಹಿಳಾ ಸಿಬ್ಬಂದಿ ತೊಂದರೆ ಸಿಲುಕುವಂತಾಗಿದ್ದಂತೂ ಸತ್ಯ.

ಇನ್ನೂ ಮುಂದಾದರೂ ಈ ರೀತಿ ಅಚಾತುರ್ಯ ಆಗದಂತೆ ನೋಡಿಕೊಳ್ಳಬೇಕು ಎಂಬುದು ನಾಗರಿಕರ ಒತ್ತಾಸೆ.

ತಡವಾಗಿದ್ದಾದರೂ ಏಕೆ?

ಬಿಆರ್‌ಟಿಎಸ್‌ ಬಸ್‌ ತಡವಾಗಿದ್ದು ಧಾರವಾಡದಲ್ಲಿ ನಡೆಯುತ್ತಿರುವ ರಸ್ತೆ ರಿಪೇರಿ ಕಾರಣವಂತೆ. ಧಾರವಾಡದಲ್ಲಿ ಹಲವು ಕಡೆಗಳಲ್ಲಿ ರಸ್ತೆ ರಿಪೇರಿ ನಡೆಯುತ್ತಿದೆ. ಈ ಕಾರಣದಿಂದ ಬಸ್‌ಗಳ ಸಂಚಾರದಲ್ಲಿ ಕೊಂಚ ವಿಳಂಬವಾಗುತ್ತಿದೆ. ಇದರೊಂದಿಗೆ ಬಿಆರ್‌ಟಿಎಸ್‌ ಮಾರ್ಗದಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಲಾಗಿದೆ. ಇದು ಬಸ್‌ ವಿಳಂಬವಾಗಲು ಕಾರಣ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಮಾತನಾಡಿದ ನಗರ ಸಾರಿಗೆ ಘಟಕದ ವಿಭಾಗೀಯ ನಿಯಂತ್ರಕ ವಿವೇಕ ವಿಶ್ವಜ್ಞ ಅವರು, ಧಾರವಾಡದಲ್ಲಿ ಕೆಲವೆಡೆ ರಸ್ತೆ ರಿಪೇರಿ ನಡೆದಿರುವುದರಿಂದ ಬಸ್‌ ವಿಳಂಬವಾಗಿದೆ. ಇನ್ನು ಕುಡುಕ ಪ್ರಯಾಣಿಕರು ಬಸ್‌ನಲ್ಲಿ ಮಹಿಳಾ ಸಿಬ್ಬಂದಿಗೆ ತೊಂದರೆ ಕೊಟ್ಟಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.