ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಮದ್ಯದಂಗಡಿ ಓಪನ್‌| ಬೆಳಗ್ಗೆಯೇ ಟೈಟ್‌ ಆಗಿ ನಡು ರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಇಬ್ಬರು ವ್ಯಕ್ತಿಗಳು| ಕುಡಿದ ಮತ್ತಿನಲ್ಲಿ ಕುಡುಕರ ನರಳಾಟ| ಪೊಲೀಸರ ಸಹಕಾರದೊಂದಿಗೆ ಆಸ್ಪತ್ರೆಗೆ ದಾಖಲಿಸಿದ ಸಮಾಜ ಸೇವಕ ಅಬ್ದುಲ್‌ ಖಾದರ್‌| 

ಹಾವೇರಿ(ಏ.29): ಜನತಾ ಕರ್ಫ್ಯೂ ಹಿನ್ನೆಲೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದರಿಂದ ಇಬ್ಬರು ವ್ಯಕ್ತಿಗಳು ಬೆಳಗ್ಗೆಯೇ ಟೈಟ್‌ ಆಗಿ ನಡು ರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಘಟನೆ ನಗರದಲ್ಲಿ ಬುಧವಾರ ನಡೆದಿದೆ

ಕೊರೋನಾ ನಿಯಂತ್ರಣಕ್ಕಾಗಿ ಬೆಳಗ್ಗೆ 10 ಗಂಟೆಯಿಂದ ಜನತಾ ಕರ್ಫ್ಯೂ ಜಾರಿಗೊಳಿಸಿ ಅದಕ್ಕೂ ಮೊದಲು ಅಗತ್ಯ ವಸ್ತು, ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದು ಕುಡುಕರಿಗೆ ಬೆಳಗ್ಗೆಯೇ ನಶೆ ಏರಿಸಿಕೊಳ್ಳಲು ಅನುಕೂಲವಾದಂತಾಗಿದೆ.

ಬಡ ಕೊರೋನಾ ಸೋಂಕಿತರ ಚಿಕಿತ್ಸಾ ವೆಚ್ಚ ಭರಿಸುವೆ ಎಂದ ಸಚಿವ

ನಗರದ ಸಿದ್ದಪ್ಪ ವೃತ್ತದ ಬಳಿ ಇಬ್ಬರು ವಿಪರೀತ ಕುಡಿದು ಬಿದ್ದಿದ್ದರು. ಒಬ್ಬ ದೇವಿಹೊಸೂರ ಗ್ರಾಮದ ನಿವಾಸಿ, ಇನ್ನೊಬ್ಬ ಹಾವೇರಿ ನಿವಾಸಿ ಎಂದು ತಿಳಿದುಬಂದಿದೆ. ಆದರೆ ಇವರ ಪರಿಚಯದವರಾರೂ ಇವರತ್ತ ಸುಳಿಯಲಿಲ್ಲ. ಕುಡಿದ ಮತ್ತಿನಲ್ಲಿ ನರಳಾಟ ಆರಂಭಿಸಿದ್ದ ಇವರನ್ನು ಸಮಾಜ ಸೇವಕ ಅಬ್ದುಲ್‌ ಖಾದರ್‌ ಎಂಬವರು ಪೊಲೀಸರ ಸಹಕಾರದೊಂದಿಗೆ ಟಂಟಂ ಗಾಡಿಯಲ್ಲಿ ಹತ್ತಿಸಿಕೊಂಡು ಆಸ್ಪತ್ರೆಗೆ ದಾಖಲಿಸಿದರು.