ಬೆಂಗಳೂರು [ಜ.03]: ಕುಡಿದ ಅಮಲಿನಲ್ಲಿ ಖಾಸಗಿ ಕೈಗಾರಿಕೆಯ ಕಾವಲುಗಾರನೊಬ್ಬನನ್ನು ಆತನ ಸಹೋದ್ಯೋಗಿಯನ್ನೇ ಕೊಂದಿರುವ ಘಟನೆ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ರಾತ್ರಿ ನಡೆದಿದೆ.

ಬ್ಯಾಡರಹಳ್ಳಿ ನಿವಾಸಿ ತಿಪ್ಪೇಸ್ವಾಮಿ (65) ಕೊಲೆಯಾದ ದುರ್ದೈವಿ. ಈ ಹತ್ಯೆ ಪ್ರಕರಣ ಸಂಬಂಧ ಮೃತನ ಸ್ನೇಹಿತ ಸಂಜಯ್‌ ಯಾದವ್‌ನನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಕೈಗಾರಿಕಾ ಪ್ರದೇಶದ ಕೆಂಪಣ್ಣ ಕೈಗಾರಿಕೆಯಲ್ಲಿ ಇಬ್ಬರು ಭದ್ರತೆಯಲ್ಲಿ ತೊಡಗಿದ್ದರು. ರಾತ್ರಿ ಕಂಠಪೂರ್ತಿ ಕುಡಿದಿದ್ದ ಸಂಜಯ್‌, ವಿನಾಕಾರಣ ಜಗಳ ತೆಗೆದು ತಿಪ್ಪೇಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾನೆ. ಕೆಳಗೆ ಬೀಳಿಸಿ ಕೈಯಿಂದ ಮನಬಂದಂತೆ ಗುದ್ದಿದ್ದು, ಗಂಭೀರವಾಗಿ ಗಾಯಗೊಂಡ ತಿಪ್ಪೇಸ್ವಾಮಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೃತ ತಿಪ್ಪೇಸ್ವಾಮಿ ಮೂಲತಃ ಪಾವಗಡ ತಾಲೂಕಿನವರಾಗಿದ್ದು, ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದರು. ಬಿಹಾರ ಮೂಲದ ಸಂಜಯ್‌ ಯಾದವ್‌, ಪೀಣ್ಯ ಕೈಗಾರಿಕಾ ಪ್ರದೇಶ ಕಂಪನಿಯಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ. ಕೈಗಾರಿಕೆಯಲ್ಲಿ ಇಬ್ಬರು ರಾತ್ರಿ ಪಾಳೆಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಆ ವೇಳೆ ವಿಪರೀತ ಮದ್ಯ ಸೇವಿಸಿದ್ದ ಸಂಜಯ್‌, ಸಹೋದ್ಯೋಗಿ ಮೇಲೆ ಹಲ್ಲೆ ನಡೆಸಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.