ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ, ಮದ್ಯದ ಅಮಲಿನಲ್ಲಿದ್ದ ಚಾಲಕನೊಬ್ಬ ಹೆಬ್ಬಾಳದ ಮಾಲ್ ಆಫ್ ಏಷ್ಯಾ ಬಳಿ ಪಾದಚಾರಿಗಳ ಮೇಲೆ ಕಾರು ಹತ್ತಿಸಿದ್ದಾನೆ. ಈ ಭೀಕರ ಅಪಘಾತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಸಂಜಯನಗರ ಸಂಚಾರ ಪೊಲೀಸರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಂಗಳೂರು: ನ್ಯೂ ಇಯರ್‌ ಸಂಭ್ರಮಾಚರಣೆಯ ನಡುವೆ ಮದ್ಯದ ಅಮಲಿನಲ್ಲಿ ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಪಾದಚಾರಿಗಳ ಮೇಲೆ ಕಾರು ಹತ್ತಿಸಿದ ಘಟನೆ ನಗರವನ್ನು ಬೆಚ್ಚಿಬೀಳಿಸಿದೆ. ಡಿಸೆಂಬರ್ 31ರ ರಾತ್ರಿ ನಗರದ ಹೆಬ್ಬಾಳ ಬಳಿಯ ಮಾಲ್ ಆಫ್ ಏಷ್ಯಾ ಬಳಿ ಈ ಭೀಕರ ಘಟನೆ ಸಂಭವಿಸಿದೆ.

ನ್ಯೂ ಇಯರ್‌ ಸೆಲೆಬ್ರೇಷನ್‌ ಹಿನ್ನೆಲೆಯಲ್ಲಿ ಮಾಲ್ ಆಫ್ ಏಷ್ಯಾದ ಮುಖ್ಯದ್ವಾರದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಏಕಾಏಕಿ ಅತಿವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು, ನಂತರ ಅಲ್ಲೇ ನಡೆದುಕೊಂಡು ಹೋಗುತ್ತಿದ್ದ ಜನರ ಮೇಲೆ ಹರಿದಿದೆ. ಪರಿಣಾಮ ನಾಲ್ವರು ಪಾದಚಾರಿಗಳಿಗೆ ಗಂಭೀರ ಗಾಯಗಳಾಗಿವೆ.

ಮಹಿಂದ್ರ ಎಕ್ಸ್‌ಯುವಿ ಕಾರು

ಮಾಹಿತಿಯಂತೆ, ಕಾರು ಚಾಲಕ ಮದ್ಯಪಾನ ಮಾಡಿಕೊಂಡಿದ್ದ ಕಾರಣ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು ರಭಸವಾಗಿ ಕಾರು ಚಲಾಯಿಸಿದ್ದಾನೆ ಎನ್ನಲಾಗಿದೆ. ಮಹಿಂದ್ರ ಎಕ್ಸ್‌ಯುವಿ (Mahindra XUV) ಮಾದರಿಯ KA05 NP 3609 ಸಂಖ್ಯೆಯ ಕಾರಿನಿಂದ ಈ ಅಪಘಾತ ಸಂಭವಿಸಿದೆ.

ಘಟನೆಯ ಬಳಿಕ ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣವೇ ಗಾಯಾಳುಗಳಿಗೆ ನೆರವು ನೀಡಿದ್ದು, ಗಾಯಗೊಂಡ ನಾಲ್ವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದರು. ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮಾಲ್ ಆಫ್ ಏಷ್ಯಾದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ

ಘಟನೆಯ ಬಗ್ಗೆ ಮಾಹಿತಿ ಪಡೆದ ಸಂಜಯನಗರ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾರು ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಮದ್ಯದ ಅಮಲಿನಲ್ಲಿ ಕಾರು ಚಾಲನೆ ಮಾಡಿದ ಆರೋಪದಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ಈ ಭೀಕರ ಘಟನೆ ಮಾಲ್ ಆಫ್ ಏಷ್ಯಾದ ಸಿಸಿಟಿವಿ ಕ್ಯಾಮರಾದಲ್ಲಿ ಸಂಪೂರ್ಣವಾಗಿ ದಾಖಲಾಗಿದ್ದು, ಅದರ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ತನಿಖೆ ಮುಂದುವರಿದಿದೆ.

ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಅಪಾಯಕಾರಿ ಮಾತ್ರವಲ್ಲ, ಕಾನೂನುಬಾಹಿರವೂ ಆಗಿದೆ. ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುವ ಇಂತಹ ವರ್ತನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಈಗಾಗಲೇ ಬೆಂಗಳೂರು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.