Asianet Suvarna News Asianet Suvarna News

'ಅಬಕಾರಿ ಅಧಿಕಾರಿಗಳೇ ಕುಡುಕರನ್ನು ಮನೆಗೆ ಬಿಡಿ'..!

ಮದ್ಯದ ಬಾಟಲಿಗಳಿಂದ ಪ್ಲಾಸ್ಟಿಕ್ ಹಾವಳಿ ಮಿತಿ ಮೀರಿದ್ದು ಈ ಬಗ್ಗೆ ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಸದಸ್ಯರು ಈ ಕುರಿತಂತೆ ಮಳವಳ್ಳಿ ತಾಲೂಕು ಅಬಕಾರಿ ನಿರೀಕ್ಷಕರಿಗೆ ಮನವಿ ಸಲ್ಲಿಸಿದೆ. ಕುಡಿದು ಸಾರ್ವಜನಿಕ ಸ್ಥಳದಲ್ಲಿ ಬೀಳುವವರನ್ನು ಸುರಕ್ಷಿತವಾಗಿ ಮತ್ತು ಗೌರವಯುತವಾಗಿ ಅಬಕಾರಿ ಇಲಾಖೆ ವಾಹನದಲ್ಲಿ ಕರೆದುಕೊಂಡು ಹೋಗಿ ಅವರ ಮನೆಗೆ ಬಿಡಬೇಕು ಎಂದವರು ಹೇಳಿದ್ದಾರೆ.

drop drunkers to home says environmentalist to Excise officers in Mandya
Author
Bangalore, First Published Sep 4, 2019, 7:56 AM IST

ಮಂಡ್ಯ(ಸೆ.04): ಅಬಕಾರಿ ಇಲಾಖೆಗೆ ಸಾರ್ವಜನಿಕರ ವಲಯದಿಂದಲೇ ಹೆಚ್ಚು ಹಣ ಹರಿದು ಬರುತ್ತಿದೆ. ಆದರೆ ಮದ್ಯದ ಬಾಟಲ್‌, ಮತ್ತು ಮದ್ಯ ವಿತರಿಸಲು ಬಳಸುವ ಪ್ಲಾಸ್ಟಿಕ್‌ ಕವರ್‌ಗಳಿಂದ ಪರಿಸರ ಹಾಳಾಗುತ್ತಿರುವ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಪರಿಸರ ಪ್ರೇಮಿಗಳು ಆರೋಪಿಸಿದ್ದಾರೆ.

ಈ ಸಂಬಂಧ ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಸದಸ್ಯರು ಮಳವಳ್ಳಿ ತಾಲೂಕು ಅಬಕಾರಿ ನಿರೀಕ್ಷಕರಿಗೆ ಮನವಿ ಸಲ್ಲಿಸಿರುವುದು ಪರ- ವಿರೋಧದ ಚರ್ಚೆಗೆ ಗ್ರಾಸವಾಗಿದೆ.

ಮಂಡ್ಯ : ಕಾಂಗ್ರೆಸ್ ಹಣಿಯಲು ಪುಟ್ಟರಾಜು ಸರ್ಕಸ್

ರಾಜ್ಯ ಸರ್ಕಾರಕ್ಕೆ ಪ್ರಮುಖ ಆದಾಯ ಮೂಲವೇ ಅಬ್ಕಾರಿ ಇಲಾಖೆ. ಹಗಲು ವೇಳೆ ಸಾರಾಯಿ, ಮದ್ಯ ಸೇವನೆಯಿಂದ ಸಂಸಾರ ಹಾಳು ಮಾಡಿಕೊಳ್ಳಬೇಡಿ ಎಂದು ಜಾಹೀರಾತು ನೀಡುವ ಇಲಾಖೆ, ಸಂಜೆ, ರಾತ್ರಿ ವೇಳೆಗೆ ನಿಗದಿತ ಟಾರ್ಗೆಟ್‌ ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮದ್ಯಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತದೆ.

ಬಾರ್ ಮಾಲೀಕರಿಗಿಲ್ಲ ಪರಿಸರ ಕಾಳಜಿ:

ರಾಜ್ಯದಲ್ಲಿ ಮದ್ಯದ ಅತಿಯಾದ ಬಳಕೆಯಿಂದ ಪರಿಸರ ಹಾಳಾಗುತ್ತಿದೆ ಎಂಬುದು ಪರಿಸರ ಸಂರಕ್ಷಕರ ಕಾಳಜಿ. ಮದ್ಯ ಮಾರಾಟದಿಂದ ಸರ್ಕಾರ ಮತ್ತು ಬಾರ್‌ ಮಾಲೀಕರಿಗೆ ಭರ್ಜರಿ ಲಾಭ ಗಳಿಸುತ್ತಾರೆ. ಆದರೆ ಪರಿಸರಕ್ಕೆ ಸಾಕಷ್ಟುಹಾನಿಯಾದರೂ ಕಾಳಜಿ ಮಾತ್ರ ವಹಿಸುತ್ತಿಲ್ಲ ಎಂಬ ಆಕ್ರೋಶ ಸದಸ್ಯರಾಗಿದ್ದಾಗಿದೆ.

ಕೆಲವರ ವಿರೋಧ:

ಕುಡಿತದಿಂದ ಹಲವಾರು ಕುಟುಂಬಗಳು ನಾಶ ಹೊಂದಿವೆ. ಹೀಗಾಗಿ ಮದ್ಯ ಮಾರಾಟವನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ನಿಲ್ಲಿಸಬೇಕೆಂದು ಹಲವಾರು ಮಹಿಳಾ ಸಂಘಟನೆಗಳ ಸದಸ್ಯರು ಒತ್ತಾಯಿಸಿದರೇ ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಸದಸ್ಯರು ಕುಡುಕರಿಗೆ ಸೌಲಭ್ಯಗಳನ್ನು ನೀಡಬೇಕೆಂದು ಮನವಿ ಸಲ್ಲಿಸುತ್ತಿರುವುದು ಕುಡುಕರ ಸಂಖ್ಯೆಯನ್ನು ಹೆಚ್ಚು ಮಾಡುತ್ತವೆ ಎಂಬುವುದು ಕೆಲವರ ಅಭಿಪ್ರಾಯವಾಗಿದೆ.

ಇಲಾಖೆಗೆ ಒಕ್ಕೂಟದ ಒತ್ತಾಯಗಳು:

1) ಯಾವುದೇ ವ್ಯಕ್ತಿಗಳು ಮದ್ಯ ಖರೀದಿ ಮಾಡಬೇಕಾದರೆ ಆಧಾರ್‌ ಕಾರ್ಡ್‌ ತಂದು ಮದ್ಯ ಮಾರಾಟ ಅಂಗಡಿಯಲ್ಲಿ ಅದರ ಮಾಹಿತಿಯನ್ನು ಕಂಪ್ಯೂಟರ್‌ನಲ್ಲಿ ದಾಖಲು ಮಾಡಿದ ನಂತರ ಆತನಿಗೆ ಮದ್ಯ ಮಾರಾಟ ಮಾಡಬೇಕು.

2) ಒಮ್ಮೆ ಮದ್ಯ ಖರೀದಿಸಿ ಕೊಂಡುಹೋದ ವ್ಯಕ್ತಿ ಪುನಃ ಖರೀದಿ ಮಾಡಲು ಮುಂದಾದಾಗ ಕಳೆದ ಬಾರಿ ಕೊಂಡು ಹೋಗಿದ್ದ ಬಾಟಲ್‌ಗಳನ್ನು ಅಂಗಡಿಗೆ ವಾಪಸ್‌ ನೀಡಿದರೇ ಮಾತ್ರ ಮದ್ಯ ನೀಡಬೇಕು.

3)ಸಾರ್ವಜನಿಕ ಸ್ಥಳ, ನದಿ, ಮೈದಾನ, ರಸ್ತೆಬದಿ, ಚರಂಡಿಗಳಲ್ಲಿ ಖಾಲಿ ಮದ್ಯದ ಬಾಟಲ್ ಸಿಕ್ಕಿದ್ದಲ್ಲಿ ಅದರ ಬಾರ್‌ ಕೋಡ್‌ ಸ್ಕ್ಯಾ‌ನ್‌ ಮಾಡಿ ಆ ಬಾಟಲಿ ಮಾರಾಟ ಮಾಡಿದ ಅಂಗಡಿ ಮೇಲೆ ದಂಡ ವಿಧಿಸುವುದು ಅಥವಾ ಲೆಸೆನ್ಸ್‌ ಕ್ಯಾನ್ಸಲ್ ಮಾಡಬೇಕು.

4) ಕುಡುಕರ ಕ್ಷೇಮಾಭಿವೃದ್ಧಿಗೆ ಮತ್ತು ಅವರ ಮಡದಿ ಮಕ್ಕಳ ಕ್ಷೇಮಾಭಿವೃದ್ಧಿಗೆ ಹಣ ತೆಗೆದಿಡಬೇಕು.

5) ಕುಡಿದು ಸಾರ್ವಜನಿಕ ಸ್ಥಳದಲ್ಲಿ ಬೀಳುವವರನ್ನು ಸುರಕ್ಷಿತವಾಗಿ ಮತ್ತು ಗೌರವಯುತವಾಗಿ ಅಬಕಾರಿ ಇಲಾಖೆ ವಾಹನದಲ್ಲಿ ಕರೆದುಕೊಂಡು ಹೋಗಿ ಅವರ ಮನೆಗೆ ಬಿಡಬೇಕು.

6) ದುಡಿದ ಎಲ್ಲಾ ಹಣವನ್ನು ಮದ್ಯ ಖರೀದಿ ಮತ್ತು ಕುಡಿತಕ್ಕೆ ಬಳಸಿದ್ದಲ್ಲಿ ಆತನ ಮನೆಗೆ ಬೇಕಾಗುವ ಸಾಮಗ್ರಿಗಳನ್ನು ಇಲಾಖೆ ವತಿಯಿಂದ ಉಚಿತವಾಗಿ ನೀಡಬೇಕು.

7) ಕುಡಿತದಿಂದ ಆರೋಗ್ಯ ಹಾಳಾದರೆ ಆತನ ಮತ್ತು ಆತನ ಕುಟುಂಬದ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಸಂಪೂರ್ಣ ವೆಚ್ಚವನ್ನು ಇಲಾಖೆ ಅಥವಾ ಸರ್ಕಾರ ವಹಿಸಿಕೊಳ್ಳಬೇಕು.

ಒಕ್ಕೂಟವು ಪರಿಸರ ಸಂರಕ್ಷಣೆಗೆ ನೀಡಿರುವ ಸಲಹೆ ಅಮೂಲ್ಯವಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುತ್ತೇವೆ. ಅಧಿಕಾರಿಗಳ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ವಲಯ ಅಬಕಾರಿ ನಿರೀಕ್ಷಕ ವಿಕ್ರಮ್‌ ಹೇಳಿದ್ದಾರೆ.

Follow Us:
Download App:
  • android
  • ios