ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಫೆ.19): ರಾಜಧಾನಿ ಸರಹದ್ದಿನಲ್ಲಿ ನಿರ್ಭಿಡೆಯಿಂದ ಏಕ ಮುಖ ಸಂಚಾರ ರಸ್ತೆಗಳಲ್ಲಿ (ಒನ್‌ ವೇ) ವಾಹನಗಳನ್ನು ಚಲಾಯಿಸುವ ಮುನ್ನ ನಾಗರಿಕರೇ ತುಸು ಯೋಚಿಸಿ. ಈಗ ಪೊಲೀಸರಿಗೂ ಕ್ಯಾರೇ ಎನ್ನದೆ ಒನ್‌ ವೇನಲ್ಲಿ ನುಗ್ಗಿದರೆ ದಂಡ ಮಾತ್ರವಲ್ಲ ಪಾನಮತ್ತ ಚಾಲಕರಂತೆ ನೀವು ಚಾಲನಾ ಪರವಾನಿಗೆ ಸಹ ಕಳೆದುಕೊಳ್ಳಬೇಕಾಗಿದೆ..!

ಇಂಥದೊಂದು ಹೊಸ ನಿಯಮವು ನಗರದಲ್ಲಿ ಎರಡು ವಾರಗಳಿಂದ ಜಾರಿಗೆ ಬಂದಿದ್ದು, ಸುಮಾರು 17 ಸಾವಿರ ಮಂದಿ ಚಾಲನಾ ಪರವಾನಗಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಒನ್‌ವೇ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಕಾನೂನು ಉಲ್ಲಂಘಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಾರ್ವಜನಿಕರ ಹಿತದೃಷ್ಟಿಯಿಂದ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ಸಲುವಾಗಿ ನಗರದ ಕೆಲವು ರಸ್ತೆಗಳಲ್ಲಿ ಏಕ ಮುಖ ಸಂಚಾರ ರಸ್ತೆಗಳನ್ನಾಗಿ ಗುರುತಿಸಲಾಗಿದೆ. ಆದರೆ ತಮ್ಮ ಗಮ್ಯವನ್ನು ತಲುಪುವ ಧಾವಂತದಲ್ಲಿ ಕೆಲವರು, ಶಾರ್ಟ್‌ ಕಟ್‌ನಲ್ಲಿ ಹೋಗಲು ಆ ಸಂಚಾರ ನಿಷೇಧಿತ ರಸ್ತೆಗಳಲ್ಲೇ ವಾಹನ ಚಲಾಯಿಸುತ್ತಿದ್ದಾರೆ ಎಂದು ಜಂಟಿ ಪೊಲೀಸ್‌ ಆಯುಕ್ತ (ಸಂಚಾರ) ಬಿ.ಆರ್‌.ರವಿಕಾಂತೇಗೌಡ ತಿಳಿಸಿದ್ದಾರೆ.

ಒನ್‌ ವೇಗಳಲ್ಲಿ ವಾಹನ ಓಡಿಸುವುದರಿಂದ ಅಪಘಾತಗಳಿಗೆ ಸಹ ಕಾರಣವಾಗುತ್ತಿದೆ. ಹಲವು ಬಾರಿ ನಿಯಮ ಪಾಲಿಸುವಂತೆ ಸೂಚಿಸಿದರೂ ಸಹ ಪದೇ ಪದೇ ಜನರು ನಿಯಮ ಮೀರಿ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಈ ಕಾನೂನು ಉಲ್ಲಂಘನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಅಲ್ಲದೆ, ರಸ್ತೆಗಳಲ್ಲಿ ಮಧ್ಯೆ ರಸ್ತೆ ವಿಭಜಕ ನಿರ್ಮಿಸಿಕೊಂಡು ವಾಹನ ಚಲಾಯಿಸುವ ಹಾಗೂ ಎಡ ಮತ್ತು ಬಲ ಪಥ ಸೂಚನಾ ಮಾರ್ಗ ಬದಲಾಯಿಸಿ ವಾಹನ ಓಡಿಸುವವರ ವಿರುದ್ಧ ಸಹ ಕಠಿಣ ಕ್ರಮ ಜರುಗಿಸಲಾಗುತ್ತದೆ. ಈ ಎಲ್ಲ ಕೃತ್ಯಗಳಲ್ಲಿ ತಪ್ಪಿತಸ್ಥರ ವಿರುದ್ಧ ಅತಿವೇಗ ಮತ್ತು ಅಜಾಗೂರಕತೆ (ಸೆಕ್ಷನ್‌ 188) ಆರೋಪದಡಿ ಪ್ರಕರಣ ದಾಖಲಿಸಲಾಗುತ್ತಿದೆ. ಹಾಗೆಯೇ ಆ ಪ್ರಕರಣಗಳಲ್ಲಿ ವಾಹನ ಹಾಗೂ ಚಾಲನಾ ಪರವಾನಗಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನ್ಯಾಯಾಲಯದ ದಂಡ ಪಾವತಿಸಿದ ಬಳಿಕ ವಾಹನಗಳನ್ನು ಬಿಡುಗಡೆಗೊಳಿಸಲಾಗುತ್ತದೆ. ಆದರೆ ಚಾಲನಾ ಪರವಾನಗಿಗಳ (ಡಿಎಲ್‌) ರದ್ದತಿಗೆ ಸಾರಿಗೆ ಇಲಾಖೆಗೆ ಶಿಫಾರಸು ಕಳುಹಿಸಲಾಗುತ್ತದೆ. ಅವರು ಮುಂದಿನ ಕ್ರಮ ಜರುಗಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

500 ದಂಡ ಜತೆ ಡಿಎಲ್‌ ರದ್ದು:

ಮೊದಲು ಒನ್‌ ವೇ ರಸ್ತೆಗಳಲ್ಲಿ ವಾಹನ ಚಲಾಯಿಸಿದರೆ 100 ವಿಧಿಸಲಾಗುತ್ತಿತ್ತು. ಆದರೆ ಕೇಂದ್ರ ಸರ್ಕಾರದ ಸಂಚಾರ ದಂಡ ಪರಿಷ್ಕರಣೆ ಬಳಿಕ ಒನ್‌ವೇ ಸಾಗುವ ವಾಹನಗಳಿಗೆ .500 ದಂಡ ಬೀಳುತ್ತಿತ್ತು. ದಂಡ ಅಧಿಕವಾದರೂ ಒನ್‌ ವೇಗಳಲ್ಲಿ ವಾಹನಗಳ ಸಂಚಾರಕ್ಕೆ ಲಗಾಮು ಬೀಳಲಿಲ್ಲ. ಕೊನೆಗೆ ಜಂಟಿ ಪೊಲೀಸ್‌ ಆಯುಕ್ತ ರವಿಕಾಂತೇಗೌಡ ಅವರು, ಒನ್‌ವೇ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಪಾತಮತ್ತ ಚಾಲಕರ ಮೇಲೆ ಜರುಗಿಸುವ ಮಾದರಿಯಲ್ಲೇ ಕ್ರಮಕ್ಕೆ ಆದೇಶ ಹೊರಡಿಸಿದ್ದಾರೆ. ಅದರಂತೆ ಅತಿವೇಗದ ಮತ್ತು ಅಜಾಗರೂಕತೆ ಚಾಲನೆ ಆರೋಪದಡಿ ಪ್ರಕರಣಗಳು ದಾಖಲಾಗುತ್ತಿದೆ. ಇನ್ನಾದರೂ ಜನರು ಸಂಚಾರ ಶಿಸ್ತು ಕಲಿಯುತ್ತಾರೆ ಎಂಬುದು ಪೊಲೀಸರ ಆಶಯವಾಗಿದೆ.

ನಿರ್ಲಕ್ಷ್ಯ ಪ್ರಕರಣ ದಾಖಲು

ಒನ್‌ವೇ ರಸ್ತೆಯಲ್ಲಿ ಅಪಘಾತ ಸಂಭವಿಸಿ ಪ್ರಾಣಹಾನಿ ಉಂಟಾದರೆ ಚಾಲಕನ ವಿರುದ್ಧ ಉದ್ದೇಶ ಪೂರ್ವಕ ವಲ್ಲದ ಕೊಲೆ (304) ಪ್ರಕರಣ ದಾಖಲಾಗುತ್ತಿತ್ತು. ಈಗ ಸಾಮಾನ್ಯ ಪ್ರಕರಣವನ್ನೂ ಕೂಡ ಗಂಭೀರ ಪ್ರಕರಣವೆಂದೇ ಪೊಲೀಸರು ಪರಿಗಣಿಸುತ್ತಿದ್ದಾರೆ. ಚಾಲಕರ ವಿರುದ್ಧ ನಿರ್ಲಕ್ಷ್ಯ, ರಾರ‍ಯಷ್‌ ಡ್ರೈವಿಂಗ್‌ ಕೇಸ್‌ ದಾಖಲಿಸುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಸಂಚಾರ ಜಂಟಿ ಆಯುಕ್ತ ಡಾ.ಬಿ.ಆರ್‌.ರವಿಕಾಂತೇಗೌಡ ಅವರು, ಏಕ ಮುಖ ಸಂಚಾರ (ಒನ್‌ವೇ) ರಸ್ತೆಗಳಲ್ಲಿ ವಾಹನ ಚಲಾಯಿಸುವುದು ಕೆಲವರಿಗೆ ಖಯಾಲಿ. ಮದ್ಯ ಸೇವಿಸಿ ವಾಹನ ಚಾಲನೆ ಮಾಡುವಷ್ಟೇ ಅಪಾಯಕಾರಿ ಒನ್‌ ವೇಗಳಲ್ಲಿ ವಾಹನ ಓಡಿಸುವುದು. ಬಹುತೇಕರು ಗೊತ್ತಿದ್ದು ಒನ್‌ವೇನಲ್ಲಿ ಬರುತ್ತಾರೆ. ಡಿಎಲ್‌ ರದ್ದುಗೊಳ್ಳಲಿದೆ ಎಂಬ ಎಚ್ಚರಿಕೆಯಿಂದಲಾದರೂ ಜನರು ಸಂಚಾರ ಶಿಸ್ತು ಪಾಲನೆ ಮಾಡಲಿ ಎಂದು ಹೇಳಿದ್ದಾರೆ.