ವಿಜಯಪುರ(ಆ.31): ಕರ್ತವ್ಯ ಪ್ರಜ್ಞೆ ಎಂಬುದು ಕೆಲವರಿಗೆ ದೊಡ್ಡ ದೊಡ್ಡ ಕುರ್ಚಿಯಲ್ಲಿ ಕುಳಿತರೂ ತಿಳಿಯುವದಿಲ್ಲ. ಇನ್ನೂ ಕೆಲವರು ಡ್ರೈವರ್ ಸೀಟ್ ಮೇಲೆ ಕುಳಿತುಕೊಂಡೇ ಕರ್ತವ್ಯ ಪ್ರಜ್ಞೆಯ ಪಾಠ ಹೇಳಿ ಕೊಡುತ್ತಾರೆ.

ಚಲಿಸುತ್ತಿದ್ದ ಬಸ್ ನಲ್ಲಿ ಎದೆನೋವು ಕಾಣಿಸಿಕೊಂಡ ಪರಿಣಾಮ, ಚಾಲಕನೋರ್ವ ಬಸ್ ನ್ನು ನಿಲ್ಲಿಸಿ ಸ್ಟಿಯರಿಂಗ್ ಮೇಲೆಯೇ ಪ್ರಾಣಬಿಟ್ಟ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನಲ್ಲಿ ನಡೆದಿದೆ.

ಬಸವನ ಬಾಗೇವಾಡಿಯಿಂದ ಕೋಲ್ಹಾರಕ್ಕೆ ಹೊರಟಿದ್ದ ವೇಳೆ ಬಸ್ ಚಾಲಕ ಸಂಗನಗೌಡ ನಾಡಗೌಡ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಬಸ್ ಚಾಲನೆ ನಿಲ್ಲಿಸಿದ ಸಂಗನಗೌಡ, ಬಸ್ ನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದಾರೆ. ಎದೆನೋವು ತಾಳಲಾರದ ಸಂಗನಗೌಡ ಕೊನೆಗೆ ಸ್ಟಿಯರಿಂಗ್ ಮೇಲೆಯೇ ತಲೆ ಇಟ್ಟು ಪ್ರಾಣ ಬಿಟ್ಟಿದ್ದಾರೆ.

ಕೂಡಲೇ ಚಾಲಕ ಸಂಗನಗೌಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಬಸ್ ನಿಲ್ಲಿಸಿದಾಗಲೇ ಸಂಗನಗೌಡ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಸಾವಿನಲ್ಲೂ ಸಾರ್ಥಕತೆ ಮೆರೆದ ಸಂಗನಗೌಡ ಅವರ ಕರ್ತವ್ಯ ಪ್ರಜ್ಞೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.