ಬೆಂಗಳೂರು(ಏ.19): ಸಾರಿಗೆ ಮುಷ್ಕ​ರಕ್ಕೆ ಸೆಡ್ಡು ಹೊಡೆದು ಬಸ್‌ ಚಾಲನೆ ಮಾಡಿದ ಬಿಎಂಟಿಸಿ ಬಸ್‌ ಚಾಲಕನ ಮೇಲೆ ಮೂವರು ಕಿಡಿ​ಗೇ​ಡಿ​ಗಳು ಕಲ್ಲು ತೂರಾಟ ನಡೆ​ಸಿ​ದ್ದು, ಚಾಲಕನ ತಲೆಗೆ ಗಂಭೀರ ಗಾಯವಾಗಿ​ರುವ ಘಟನೆ ಕಾಮಾ​ಕ್ಷಿ​ಪಾಳ್ಯ ಠಾಣಾ ವ್ಯಾಪ್ತಿ​ಯಲ್ಲಿ ನಡೆ​ದಿ​ದೆ.

ಘಟ​ನೆ​ಯಲ್ಲಿ ಡಿಪೋ 22ರ ಬಸ್‌ ಚಾಲ​ಕ ನಂಜುಂಡೇ​ಗೌ​ಡ​ (44) ಎಂಬ​ವ​ರು​ ಗಾ​ಯ​ಗೊಂಡಿದ್ದು, ಸಮೀ​ಪದ ಆಸ್ಪ​ತ್ರೆ​ಯಲ್ಲಿ ಚಿಕಿತ್ಸೆ ಪಡೆ​ಯು​ತ್ತಿ​ದ್ದಾರೆ. ಕೃತ್ಯ ಎಸ​ಗಿದ ಮೂವರ ಪೈಕಿ 9ನೇ ಡಿಪೋದ ಬಿಎಂಟಿಸಿ ಬಸ್‌ ಚಾಲ​ಕ ಸೀತೆ​ಗೌಡ (42) ಎಂಬಾತನನ್ನು ಬಂಧಿ​ಸ​ಲಾ​ಗಿ​ದೆ. ಇಬ್ಬರು ಆರೋ​ಪಿ​ಗ​ಳಿ​ಗಾಗಿ ಶೋಧ ಮುಂದು​ವ​ರಿ​ದಿ​ದೆ ಎಂದು ಪೊಲೀ​ಸರು ಹೇಳಿ​ದ​ರು.

ಜಮಖಂಡಿ: ಮುಷ್ಕರದ ಮಧ್ಯೆ ಬಸ್‌ ಚಾಲನೆ, ಕಲ್ಲೇಟಿಗೆ ಚಾಲಕ ಬಲಿ

ಚಾಲಕ ನಂಜುಂಡೇ​ಗೌಡ ಅವರು ಕೆ.ಆರ್‌.​ಮಾ​ರು​ಕ​ಟ್ಟೆಯಿಂದ ಜಾಲ​ಹ​ಳ್ಳಿ ಮಾರ್ಗದ ಬಸ್‌ ಚಾಲನೆ ಮಾಡುತ್ತಾರೆ. ಭಾನು​ವಾರ ಸಂಜೆ ನಾಲ್ಕು ಗಂಟೆ ಸುಮಾ​ರಿಗೆ ಕೆ.ಆ​ರ್‌.​ಮಾ​ರು​ಕ​ಟ್ಟೆ​ಯಿಂದ ಜಾಲ​ಹ​ಳ್ಳಿಗೆ ಕಾಮಾ​ಕ್ಷಿ​ಪಾ​ಳ್ಯದ ವಿಘ್ನೇ​ಶ್ವರ ನಗ​ರದ ಮಾರ್ಗ​ವಾಗಿ ಹೋಗು​ತ್ತಿ​ದ್ದರು. ಈ ವೇಳೆ ಮೂವರು ಆರೋ​ಪಿ​ಗಳು ಬಸ್‌ ಅಡ್ಡಗಟ್ಟಿಏಕಾ​ಏಕಿ ಚಾಲಕನ ಮೇಲೆ ಕಲ್ಲು ತೂರಾಟ ನಡೆ​ಸಿ​ ಪರಾ​ರಿ​ಯಾ​ಗಿದ್ದಾ​ರೆ. ಘಟ​ನೆ​ಯಲ್ಲಿ ನಂಜುಂಡೇ​ಗೌಡ ಅವರ ತಲೆಗೆ ಗಂಭೀ​ರ ಗಾಯ​ವಾ​ಗಿದೆ. ಕೂಡಲೇ ಸ್ಥಳೀ​ಯರು ಅವ​ರನ್ನು ಸಮೀ​ಪದ ಆಸ್ಪ​ತ್ರೆಗೆ ದಾಖ​ಲಿ​ಸಿ​ದ್ದಾರೆ. ಅದೃ​ಷ್ಟ​ವ​ಶಾತ್‌ ಪ್ರಾಣಾ​ಪಾ​ಯ​ದಿಂದ ಪಾರಾ​ಗಿ​ದ್ದಾರೆ. ಘಟನೆ ವೇಳೆ ಬಸ್‌​ನಲ್ಲಿ ಸುಮಾರು 20 ಮಂದಿ ಪ್ರಯಾ​ಣಿ​ಕ​ರಿದ್ದು, ಯಾರಿಗೂ ತೊಂದ​ರೆ​ಯಾ​ಗಿಲ್ಲ. ಬಸ್‌ ಗಾಜು ಪುಡಿ​ಯಾ​ಗಿ​ವೆ ಎಂದು ಪೊಲೀ​ಸರು ಹೇಳಿ​ದ​ರು.

ಕೃತ್ಯ ಎಸಗಿ ಪರಾ​ರಿ​ಯಾದ ಆರೋ​ಪಿ​ಗ​ಳನ್ನು ಸಮೀ​ಪದ ಸಿಸಿ ಕ್ಯಾಮೆ​ರಾ​ದಲ್ಲಿ ಸೆರೆ​ಯಾದ ದೃಶ್ಯ​ಗ​ಳನ್ನು ಆಧ​ರಿಸಿ ಗುರು​ತಿ​ಸ​ಲಾ​ಗಿದೆ. ಮೂವರ ಪೈಕಿ ಒಬ್ಬ​ನನ್ನು ಬಂಧಿ​ಸ​ಲಾ​ಗಿದೆ. ಇಬ್ಬ​ರಿ​ಗಾಗಿ ಶೋಧ ಮುಂದು​ವ​ರಿ​ದಿದೆ ಎಂದು ಪೊಲೀ​ಸರು ಹೇಳಿ​ದ​ರು. ಕಾಮಾ​ಕ್ಷಿ​ಪಾಳ್ಯ ಠಾಣೆ​ಯಲ್ಲಿ ಪ್ರಕ​ರಣ ದಾಖ​ಲಾ​ಗಿ​ದೆ.