Asianet Suvarna News Asianet Suvarna News

ಕಸದಿಂದ ಗೊಬ್ಬರ ತಯಾರಿಸುವ ಯಂತ್ರಗಳಿಗೆ ಚಾಲನೆ

ಪ್ಲಾಸ್ಟಿಕ್‌ ಮುಕ್ತ ವ್ಯವಸ್ಥೆಯೊಂದಿಗೆ ನಾಗರಿಕರು ಮನೆಗಳಲ್ಲಿ ಉತ್ಪತಿಯಾಗುವ ಕಸವನ್ನು ವೈಜ್ಞಾನಿಕ ವಿಲೇವಾರಿ ಮಾಡುವ ಮೂಲಕ ಸುಸ್ಥಿರ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕೆಂದು ಶಾಸಕ ಸಿ.ಎನ್‌.ಬಾಲಕೃಷ್ಣ ಹೇಳಿದರು.

Drive for composting machines snr
Author
First Published Oct 10, 2023, 9:20 AM IST

  ಚನ್ನರಾಯಪಟ್ಟಣ : ಪ್ಲಾಸ್ಟಿಕ್‌ ಮುಕ್ತ ವ್ಯವಸ್ಥೆಯೊಂದಿಗೆ ನಾಗರಿಕರು ಮನೆಗಳಲ್ಲಿ ಉತ್ಪತಿಯಾಗುವ ಕಸವನ್ನು ವೈಜ್ಞಾನಿಕ ವಿಲೇವಾರಿ ಮಾಡುವ ಮೂಲಕ ಸುಸ್ಥಿರ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕೆಂದು ಶಾಸಕ ಸಿ.ಎನ್‌.ಬಾಲಕೃಷ್ಣ ಹೇಳಿದರು.

ಪುರಸಭೆ ವ್ಯಾಪ್ತಿಯ ಕಸ ಡಂಪಿಂಗ್‌ ಯಾರ್ಡ್‌ನ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸದಿಂದ ಗೊಬ್ಬರ ತಯಾರಿಸುವ ಟ್ರಾಮಲ್, ಬೇಲಿಂಗ್ ಹಾಗೂ ಶೆಡ್ಡರ್ ಮೆಷಿನ್‌ಗಳ ಕಾರ್ಯಾರಂಭಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಸ್ವಚ್ಛ್‌ ಭಾರತ್ ಮಿಷನ್ ೧.೦ ಯೋಜನೆಯಡಿಯಲ್ಲಿ ಕಸ ವಿಂಗಡಣೆ ಮಾಡಿ, ಗೊಬ್ಬರ ತಯಾರಿಸುವ ಯಂತ್ರಗಳನ್ನು ೩.೮ ಕೋಟಿ ರು. ವೆಚ್ಚದಲ್ಲಿ ನೂತನವಾಗಿ ಅಳವಡಿಸಲಾಗಿದೆ. ಪಟ್ಟಣದಲ್ಲಿನ ಜನಸಂಖ್ಯೆ ಹೆಚ್ಚಾದಂತೆ, ತ್ಯಾಜ್ಯವು ಹೆಚ್ಚಾಗುತ್ತಿದ್ದು, ಮನೆ ಬಳಿ ಕಸದ ಗಾಡಿಗಳಿಗೆ ಕಸವನ್ನು ಮೂಲದಲ್ಲೆ ಹಸಿ, ಒಣಕಸವನ್ನಾಗಿ ಬೇರ್ಪಡಿಸಿ ನೀಡುವುದು ನಾಗರಿಕರ ಕರ್ತವ್ಯವಾಗಿದೆ ಎಂದರು.

ನಲ್ಲೂರಿನ ಕಸ ವಿಲೇವಾರಿ ಘಟಕದಲ್ಲಿ ಈಗಾಗಲೇ ತಯಾರಿಸಲ್ಪಟ್ಟ ೬೦ಟನ್ ಗೊಬ್ಬರವನ್ನು ಸುತ್ತಮುತ್ತಲಿನ ರೈತರಿಗೆ ಮಾರಾಟ ಮಾಡಲಾಗಿದೆ. ಸದ್ಯವೀಗ ಅಳವಡಿಸಲಾಗಿರುವ ನೂತನ ಯಂತ್ರಗಳಿಂದ ದಿನವೊಂದಕ್ಕೆ ೫೦ಟನ್ ಗೊಬ್ಬರ ತಯಾರಿಸುವ ಸಾಮರ್ಥ್ಯವಿದೆ. ಇನ್ನೂ ಯಾರ್ಡ್‌ನಲ್ಲಿ ೭೦ಸಾವಿರ ಟನ್ ಹಳೇ ಪಾರಂಪರಿಕ ಕಸವಿದ್ದು, ಅದನ್ನೂ ಬೇರ್ಪಡಿಸಿ ಗೊಬ್ಬರವನ್ನಾಗಿಸಲು ಎರಡನೇ ಹಂತದಲ್ಲಿ ೬.೫ಕೋಟಿ ರು.ವೆಚ್ಚದಲ್ಲಿ ಯಂತ್ರಗಳ ಅಳವಡಿಕೆಗೆ ಮುಂದಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಪೌರಡಳಿತ ಸಚಿವಾಲಯವು ಸಕರಾತ್ಮಕವಾಗಿ ಸ್ಪಂದಿಸಿದೆ ಎಂದರು.

ಇಷ್ಟೆಲ್ಲಾ ಸೌಲಭ್ಯಗಳ ನಡುವೆಯೂ ಪಟ್ಟಣದ ಶ್ರವಣಬೆಳಗೊಳ ರಸ್ತೆ, ಮತ್ತು ಹೇಮಾವತಿ ನಾಲೆಯ ಅಕ್ಕಪಕ್ಕದಲ್ಲಿ ಅವಿವೇಕಿಗಳು ರಾತ್ರಿವೇಳೆ ತ್ಯಾಜ್ಯ ಸುರಿಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಿಸಿ ಕ್ಯಾಮರಾ ಅಳವಡಿಕೆಯೊಂದಿಗೆ ಕಸ ಸುರಿಯುವ ವಾಹನದ ನಂಬರ್‌ ಅನ್ನು ಸಾರ್ವಜನಿಕರು ಕೊಟ್ಟಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು, ಇನ್ನೂ ಮಾಹಿತಿ ನೀಡಿದವರಿಗೆ ಪುರಸಭೆಯಿಂದ ೧ ಸಾವಿರ ರು. ಬಹುಮಾನ ನೀಡಲಾಗುವುದು, ಮಾಹಿತಿ ಕೊಟ್ಟವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದರು.

ಮೂಲದಿಂದ ಕಸ ಸಂಗ್ರಹಿಸಿ, ಘಟಕದಲ್ಲಿ ಕಸವನ್ನು ಬೇರ್ಪಡಿಸಿ, ಕೊಳೆಸಿ, ಗೊಬ್ಬರ ಮಾಡುವ ವಿಧಾನದವರಿಗೆ ಶ್ರಮಿಸುವ ಪೌರಕಾರ್ಮಿಕರು, ಘಟಕದಲ್ಲಿ ಕೆಲಸ ಮಾಡುವ ಕಾರ್ಮಿಕರು, ಆರೋಗ್ಯ ನಿರೀಕ್ಷಕರ ಕಾರ್ಯ ಶ್ಲಾಘನೀಯ ಅವರ ಕೆಲಸವನ್ನು ಗೌರವಿಸುವ ನಿಟ್ಟಿನಲ್ಲಿ ಪಟ್ಟಣದ ಜನತೆ ಕಸವನ್ನು ಎಲ್ಲೆಂದರಲ್ಲಿ ಬಿಸಾಡದೇ ಪುರಸಭಾ ವಾಹನಗಳಿಗೆ ಕೊಡುವ ಮೂಲಕ ಸ್ವಚ್ಛತೆಗೆ ಸ್ಪಲ್ಪಮಟ್ಟಿಗಾದರೂ ಕೈಜೋಡಿಸಬೇಕೆಂದರು.

ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಲಕ್ಷ್ಮಮ್ಮ, ಕವಿತಾರಾಜು, ಸುಜಾತ, ಬನಶಂಕರಿರಘು, ರಾಣಿಕೃಷ್ಣ, ಸುರೇಶ್‌, ಎಚ್‌.ಎನ್‌.ನವೀನ್‌, ಗಣೇಶ್‌, ಧರಣೇಶ್‌, ಪುರಸಭಾ ಮುಖ್ಯಾಧಿಕಾರಿ ಕೆ.ಎನ್.ಹೇಮಂತ್‌ ಕುಮಾರ್, ಆರೋಗ್ಯ ನಿರೀಕ್ಷಕರಾದ ರಾಜು, ಮಂಜುನಾಥ್‌, ಪುರಸಭಾ ಸಿಬ್ಬಂದಿ ವರ್ಗ ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.

Follow Us:
Download App:
  • android
  • ios