Asianet Suvarna News Asianet Suvarna News

ಕುಡಿಯುವ ನೀರು ಅಸಮರ್ಪಕ ಪೂರೈಕೆ: ಚಪ್ಪಲಿ ಹಾರ ಹಾಕಿಸಿಕೊಳ್ಳುವ ದುರ್ಗತಿ ಬಂದೈತಿ ಎಂದ ವಾರ್ಡ್ ಸದಸ್ಯರು

  • ಚಪ್ಪಲಿ ಹಾರ ಹಾಕಿಸಿಕೊಳ್ಳುವ ದುರ್ಗತಿ ಬಂದೈತಿ
  • ಸಾಮಾನ್ಯ ಸಭೆಯಲ್ಲಿ ತಮ್ಮ ಸಂಕಟ ಹೇಳಿಕೊಂಡ ಸದಸ್ಯರು
  • ಎಲ್‌ ಆ್ಯಂಡ್‌ ಟಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಹಿನ್ನೆಲೆ
  • ಸೋಮವಾರ ಹುಬ್ಬಳ್ಳಿ-ಮಂಗಳವಾರ ಧಾರವಾಡದಲ್ಲಿ ಸಭೆಗೆ ಮೇಯರ್‌ ತೀರ್ಮಾನ
drinking water problems Ward members are Ward members are upset
Author
First Published Dec 31, 2022, 9:05 AM IST

ಧಾರವಾಡ (ಡಿ.31) : ಹೂವಿನ ಹಾರ ಹಾಕಿಸಿಕೊಂಡ ಜನರಿಂದಲೇ ಚಪ್ಪಲಿ ಹಾರ ಹಾಕಿಸಿಕೊಳ್ಳುವ ದುರ್ಗತಿ ಬಂದೈತಿ. ಎಲ್‌ ಆ್ಯಂಡ್‌ ಟಿಯಿಂದ ಚೇಂಬರ್‌ ನೀರು ಕುಡಿಯುವಂತೆ ಆಗಿದೆ. ವಾರ್ಡ್‌ ಜನರು ಕಚೇರಿಗೆ ಬಂದು ಧರಣಿ ನಡೆಸುತ್ತಿದ್ದಾರೆ. ಇದು... ಇಲ್ಲಿನ ಅಮೃತ ಮಹೋತ್ಸವ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರೂ ಸೇರಿದಂತೆ ಎಲ್ಲ ಸದಸ್ಯರು ತಮ್ಮ ಸಂಕಟ ಹಾಗೂ ಆಕ್ರೋಶವನ್ನು ಹೊರಹಾಕಿದರು.

ಎರಡ್ಮೂರು ತಿಂಗಳಿಂದ ಕುಡಿಯುವ ನೀರಿ(Drinking water)ನ ಸಮಸ್ಯೆಯಿಂದ ಪಾಲಿಕೆ ಸದಸ್ಯರು ವಾರ್ಡ್‌ ಜನರಿಂದ ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆ. ಎಲ್‌ ಆ್ಯಂಡ್‌ ಟಿ ಕಂಪನಿ ಅವ್ಯವಸ್ಥೆಯಿಂದ ಸುಸ್ತಾಗಿ, ಬೆಸ್ತು ಬಿದ್ದಿರುವ ಸದಸ್ಯರು ಎಲ್‌ ಆ್ಯಂಡ್‌ ಟಿ ವಿರುದ್ಧ ಉಗ್ರಗೊಂಡಿದ್ದಾರೆ.

ನೀರು ಪೂರೈಕೆ ಜಾಲಕ್ಕೆ ಕಲ್ಲು ಹಾಕಿ ಪಾಲಿಕೆ ವಿರುದ್ಧ ಜನರನ್ನು ರೊಚ್ಚಿಗೆಬ್ಬಿಸುವ ಪ್ಲಾನ್ ಮಾಡಿದ್ದ ಕಿಡಿಗೇಡಿಗಳು!

ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಬೆಳಗ್ಗೆಯಿಂದಲೇ ಕಾಯುತ್ತಿದ್ದ ಸದಸ್ಯರಿಗೆ ಸಂಜೆ 5ರ ನಂತರ ಶೂನ್ಯವೇಳೆ ಅವಕಾಶ ದೊರೆಯಿತು. ಪಾಲಿಕೆ ಸದಸ್ಯರಾದ ವೇಳೆ ಖುಷಿಯಿಂದ ಹೂವಿನ ಹಾರ ಹಾಕಿದ ವಾರ್ಡ್‌ ಜನತೆಯಿಂದಲೇ ಎಲ್‌ ಆ್ಯಂಡ್‌ ಟಿ ಕಂಪನಿ ಮಾಡಿದ ತಪ್ಪಿನಿಂದಾಗಿ ಚಪ್ಪಲಿ ಹಾರ ಹಾಕಿಸಿಕೊಳ್ಳುವ ದುರ್ಗತಿ ಬಂದಿದೆ ಎಂದು ಆಡಳಿತ ಪಕ್ಷದ ಚಂದ್ರಶೇಖರ ಮನಗುಂಡಿ ತಮ್ಮ ಆಕ್ರೋಶ ಹೊರಹಾಕಿದರು.

ಚೇಂಬರ್‌ ನೀರು:

ವಿಪಕ್ಷ ಸದಸ್ಯರಾದ ಇಕ್ಬಾಲ್‌ ನವಲೂರ, ನಿರಂಜನ ಹಿರೇಮಠ, ಸಲೀಂ ಭದ್ರಾಪೂರ, ಕವಿತಾ ಕಬ್ಬೇರ, ಸುವರ್ಣ ಮಣಿಕಂಟ್ಲ, ಬಿಜೆಪಿ ಸದಸ್ಯ ಮಂಜುನಾಥ ಬಟ್ಟೆಣ್ಣವರ ಸೇರಿದಂತೆ ಹಲವು ಸದಸ್ಯರು ಎಲ್‌ ಆ್ಯಂಡ್‌ ಟಿ ವಿರುದ್ಧ ಹರಿಹಾಯ್ದರು. ಅವರಿಂದಾಗಿ ಚೇಂಬರ್‌ ನೀರು ಕುಡಿಯುವಂತಾಗಿದೆ. ವಾರ್ಡ್‌ ಜನರು ನಮ್ಮ ಕಚೇರಿಗಳಿಗೆ ಬಂದು ಧರಣಿ ಮಾಡುತ್ತಿದ್ದಾರೆ. ಎಲ್‌ ಆ್ಯಂಡ್‌ ಟಿ ಸತ್ತರೂ ಅವಳಿ ನಗರಕ್ಕೆ ನೀರು ಪೂರೈಕೆ ಮಾಡಲು ಸಾಧ್ಯವಿಲ್ಲ. ಕೂಡಲೇ ಈ ಮೊದಲಿನ ವಾಲ್‌ಮನ್‌ಗಳನ್ನು ಮರು ನೇಮಿಸಿಕೊಂಡು ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡಿ ಎಂದು ಪಟ್ಟು ಹಿಡಿದರು. ಈ ಮೊದಲಿನ ವಾಲ್‌ಮನ್‌ಗಳು ಯಾವುದೇ ಬೇಡಿಕೆ ಇಲ್ಲದೇ ಬರಲು ಒಪ್ಪಿದ್ದಾರೆ. ಪಾಲಿಕೆ ಅವರನ್ನು ಬಳಸಿಕೊಂಡು ಸಮಸ್ಯೆ ಬಗೆಹರಿಸಿ ಎಂದರು. ಪಾಲಿಕೆ ಆಯುಕ್ತರು ಎಲ್‌ ಆ್ಯಂಡ್‌ ಟಿ ಅವರೊಂದಿಗೆ ಹಲವು ಬಾರಿ ಸಭೆ ನಡೆಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಅವಳಿ ನಗರಕ್ಕೆ ನೀರು ಪೂರೈಕೆಯ ಜವಾಬ್ದಾರಿಯಿಂದ ಅವರನ್ನು ಕೈ ಬಿಡಿ ಎಂದು ಆಗ್ರಹ ವ್ಯಕ್ತಪಡಿಸಿದರು.

ವಾಲ್‌ಮನ್‌ಗಳು ಬರುತ್ತಿಲ್ಲ:

ಪಾಲಿಕೆ ಆಯುಕ್ತ ಡಾ. ಪಿ. ಗೋಪಾಲಕೃಷ್ಣ ಮಾತನಾಡಿ, ಅವಳಿನಗರದ 82 ವಾರ್ಡ್‌ಗಳಲ್ಲಿ 36 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿಲ್ಲ. ಉಳಿದ 46 ವಾರ್ಡ್‌ಗಳಲ್ಲಿ ಅದರಲ್ಲೂ ನವನಗರ, ಹಳೇ ಹುಬ್ಬಳ್ಳಿ, ಉಣಕಲ್‌ ಭಾಗದಲ್ಲಿ ಹೆಚ್ಚಿನ ಸಮಸ್ಯೆಯಾಗಿದೆ. 10ರಿಂದ 12 ದಿನಗಳ ವರೆಗೂ ನೀರು ಪಡೆಯದೇ ಜನರು ತೊಂದರೆ ಅನುಭವಿಸಿದ್ದು ತಮ್ಮ ಗಮನಕ್ಕೂ ಬಂದಿದೆ. ಹಳೆಯ ವಾಲ್‌ಮನ್‌ಗಳು ಬರದ ಹಿನ್ನೆಲೆಯಲ್ಲಿ ಹೊಸಬರಿಗೆ ಎಲ್ಲೆಲ್ಲಿ ವಾಲ್‌ ಇದೆ, ಅದನ್ನು ಹೇಗೆ ಓಪನ್‌ ಮಾಡಬೇಕು ಹಾಗೂ ಸಿಕ್ವೆನ್ಸ್‌ ಮಾಹಿತಿ ಇಲ್ಲದೇ ಇಷ್ಟೊಂದು ತೊಂದರೆಯಾಗಿದೆ. ಒತ್ತಡಕ್ಕೆ ಒಳಗಾಗಿ ಅವರು ಸಹ ನೀರು ಬಿಟ್ಟಿದ್ದರೆ ಪೈಪ್‌ಗಳು ಸಹ ಒಡೆದಿವೆ. ಬೋರ್‌ವೆಲ್‌ ರಿಪೇರಿ ಆಗಿಲ್ಲ. ಮೊದಲಿಗಿಂತ ಈಗ ವ್ಯವಸ್ಥೆ ಸುಧಾರಿಸುತ್ತಿದ್ದರೂ ಇನ್ನೂ ಗೊಂದಲ ಇದೆ. ಕೆಲವೇ ದಿನಗಳಲ್ಲಿ ಅದು ಸರಿಯಾಗುತ್ತದೆ ಎಂದು ಸಮಜಾಯಿಸಿದರು.

ಆದರೆ, ಪಾಲಿಕೆ ಸದಸ್ಯರು ಆಯುಕ್ತರ ಉತ್ತರಕ್ಕೆ ಸಮಾಧಾನವಾಗದೇ ಮೊದಲಿನ ವಾಲಮನ್‌ಗಳನ್ನು ತೆಗೆದುಕೊಂಡರೆ ಮಾತ್ರ ಈ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎಂದು ಒಕ್ಕೊರಲಿನ ಆಗ್ರಹ ಮಾಡಿದರು. ಆಗ, ಮೇಯರ್‌ ಈರೇಶ ಅಂಚಟಗೇರಿ ಮಧ್ಯಪ್ರವೇಶಿಸಿ ಎಲ್‌ ಆ್ಯಂಡ್‌ ಟಿ ಟೆಂಡರ್‌ ಪಡೆದಿದ್ದು ರಾಜ್ಯಮಟ್ಟದಲ್ಲಿ. ಹಣ ನೀಡಿದವರು ವಲ್ಡ್‌ ಬ್ಯಾಂಕ್‌. ಈ ವಿಷಯ ಬಗ್ಗೆ ಜಗದೀಶ ಶೆಟ್ಟರ್‌ ಅವರು ಅಧಿವೇಶನದಲ್ಲೂ ಪ್ರಸ್ತಾಪಿಸಿದ್ದಾರೆ. ಆಕ್ರೋಶ ವ್ಯಕ್ತಪಡಿಸುವ ಬದಲು ಸಮಸ್ಯೆಗೆ ಪರಿಹಾರ ಒದಗಿಸುವ ಬಗ್ಗೆ ಚಿಂತಿಸೋಣ. ಆದ್ದರಿಂದ ಆಯುಕ್ತರ ಅಧ್ಯಕ್ಷತೆಯಲ್ಲಿ ಹುಬ್ಬಳ್ಳಿಯ ವಾರ್ಡ್‌ ಸದಸ್ಯರು, ಎಲ್‌ ಆ್ಯಂಡ್‌ ಟಿ ಅಧಿಕಾರಿಗಳ ಸಭೆಯನ್ನು ಸೋಮವಾರ ಹುಬ್ಬಳ್ಳಿಯಲ್ಲಿ ಹಾಗೂ ಮಂಗಳವಾರ ಧಾರವಾಡ ಸದಸ್ಯರೊಂದಿಗೆ ಮಾಡುವ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಪ್ರಯತ್ನ ನಡೆಯಲಿದೆ ಎಂದರು.

ಹುಬ್ಬಳ್ಳಿಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ, ಬೇಸಿಗೆಯ ಮೊದಲೇ ಅವಸ್ಥೆ

ನಾವೇನು ಡೈವರ್ಸ್‌ ಕೇಳುತ್ತಿಲ್ಲ

ಲಗ್ನ ಆದ ಮ್ಯಾಲೆ ಬಾಳುವೆ ಮಾಡಲೇಬೇಕು ಎಂಬಂತೆ ಎಲ್‌ ಆ್ಯಂಡ್‌ ಟಿ ಅವರೊಂದಿಗೆ ಹೊಂದಾಣಿಕೆ ಮಾಡುವುದು ಬಿಟ್ಟು ಬೇರೆ ದಾರಿ ಇಲ್ಲ ಎಂದು ಮೇಯರ್‌ ಈರೇಶ ಅಂಚಟಗೇರಿ ಕುಡಿಯುವ ನೀರಿನ ಚರ್ಚೆಯ ಸಂದರ್ಭದಲ್ಲಿ ಸದಸ್ಯರನ್ನು ಸಮಾಧಾನ ಮಾಡಲು ಈ ಹೇಳಿಕೆ ನೀಡಿದರು. ಆಗ, ನಾವೇನೂ ಡೈವರ್ಸ್‌ ಕೇಳತಿಲ್ಲ. ಚೆನ್ನಾಗಿ ಸಂಸಾರ ಮಾಡಿ ಎಂದೇ ಹೇಳುತ್ತಿದ್ದೇವೆ. ಇತ್ತ ಗಂಡಸೂ ಅಲ್ಲ, ಅತ್ತ ಹೆಂಗಸೂ ಅಲ್ಲದೇ ರೀತಿಯಲ್ಲಿ ಎಲ್‌ ಆ್ಯಂಡ್‌ ಟಿ ಅಧಿಕಾರಿಗಳು ಆಡುತ್ತಿದ್ದರೆ ಹೇಗೆ ಸಂಸಾರ ಮಾಡಬೇಕೆಂದು ಕಾಂಗ್ರೆಸ್‌ ಸದಸ್ಯ ಸಲೀಂ ಭದ್ರಾಪೂರ ಆಕ್ರೋಶದಿಂದಲೇ ಹೇಳಿದರು.

Follow Us:
Download App:
  • android
  • ios