Asianet Suvarna News Asianet Suvarna News

Raichur: ಮಳೆಗಾಲದಲ್ಲಿಯೂ ಲಿಂಗಸುಗೂರು ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ!

ಇಡೀ ರಾಜ್ಯಾದ್ಯಂತ ಭಾರೀ ಮಳೆಯಿಂದಾಗಿ ನೂರಾರು ಅವಾಂತರಗಳು ಸೃಷ್ಟಿ ಆಗುತ್ತವೆ. ಆದರೆ ರಾಯಚೂರು ಜಿಲ್ಲೆಯಲ್ಲಿ ಮಾತ್ರ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಪಟ್ಟಣದ ಜನರು ಕುಡಿಯೋದಕ್ಕೆ ಹನಿ ನೀರಿಲ್ಲದೇ ಕಂಗಾಲಾದ್ರೆ, ಸದ್ಯ ಅಲ್ಲಿ ಸಪ್ಲೈಯಾದ ಉಪ್ಪು ನೀರು ಕುಡಿದ ಜನರು ಆಸ್ಪತ್ರೆ ಸೇರುತ್ತಿದ್ದಾರೆ.

Drinking water problem In Lingasugur town of Raichur district gvd
Author
Bangalore, First Published Aug 3, 2022, 6:20 PM IST

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು

ರಾಯಚೂರು (ಆ.03): ಇಡೀ ರಾಜ್ಯಾದ್ಯಂತ ಭಾರೀ ಮಳೆಯಿಂದಾಗಿ ನೂರಾರು ಅವಾಂತರಗಳು ಸೃಷ್ಟಿ ಆಗುತ್ತವೆ. ಆದರೆ ರಾಯಚೂರು ಜಿಲ್ಲೆಯಲ್ಲಿ ಮಾತ್ರ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಪಟ್ಟಣದ ಜನರು ಕುಡಿಯೋದಕ್ಕೆ ಹನಿ ನೀರಿಲ್ಲದೇ ಕಂಗಾಲಾದ್ರೆ, ಸದ್ಯ ಅಲ್ಲಿ ಸಪ್ಲೈಯಾದ ಉಪ್ಪು ನೀರು ಕುಡಿದ ಜನರು ಆಸ್ಪತ್ರೆ ಸೇರುತ್ತಿದ್ದಾರೆ.

ಕಳೆದ‌ 10‌ ದಿನಗಳಿಂದ ನಲ್ಲಿಗೆ ಬಂದಿಲ್ಲ ಹನಿ ನೀರು: ರಾಯಚೂರು ಜಿಲ್ಲೆ ಲಿಂಗಸುಗೂರು ಪಟ್ಟಣದಲ್ಲಿ  ಒಟ್ಟು 23 ವಾರ್ಡ್‌ಗಳಿದ್ದು, ಸುಮಾರು 50-60 ಸಾವಿರ ಜನರು ವಾಸವಾಗಿದ್ದಾರೆ. ಪಟ್ಟಣದ ಜನರಿಗೆ ಕುಡಿಯುವ ನೀರು ಒದಗಿಸಲು ಹೊರವಲಯದಲ್ಲಿ ಬೃಹತ್ ಕೆರೆಯೊಂದನ್ನು ನಿರ್ಮಿಸಿದ್ದಾರೆ. ಆ ಕೆರೆಯಿಂದ ನಿತ್ಯವೂ ಕುಡಿಯುವ ನೀರನ್ನು ಒದಗಿಸಲಾಗುತ್ತೆ. ಬೇಸಿಗೆ ಮುಗೀತು, ಇನ್ನೇನು ಮಳೆಗಾಲ ಕುಡಿಯುವ ನೀರಿನ ಸಮಸ್ಯೆಯಿಲ್ಲ ಅಂತ ಅಂದುಕೊಂಡಿದ್ದ ಲಿಂಗಸೂಗೂರಿನ ಜನತೆಗೆ ಪುರಸಭೆ ‌ವಾಟರ್ ಶಾಕ್ ನೀಡಿದೆ. ಕಳೆದ 10 ದಿನಗಳಿಂದ ಲಿಂಗಸೂಗೂರು ಪಟ್ಟಣದ ಜನರು ಕುಡಿಯಲು ನೀರು ಇಲ್ಲದೆ ಅಕ್ಷರಶಃ ಕಂಗಾಲಾಗಿ ಹೋಗಿದ್ದಾರೆ. 50 ಎಕರೆಯ ಕುಡಿಯುವ ನೀರಿನ ಮೀಸಲು ಕೆರೆ ಇದ್ದರೂ ಕೆರೆ ಸಂಪೂರ್ಣವಾಗಿ ಬತ್ತಿ ಹೋಗಿದ್ದು, ಜನ ಕುಡಿಯಲು ಹನಿ ನೀರಿಲ್ಲದೇ, ಕಳೆದ ಎಂಟು- ಹತ್ತು ದಿನಗಳಿಂದ ನೀರಿಗಾಗಿ ಪರದಾಟ ನಡೆಸಿದ್ದಾರೆ.

Chain-Link Scam: ಚೈನ್ ಲಿಂಕ್ ನಂಬಿ ಸೇರಿಕೊಂಡ ಮಹಿಳೆ ಈಗ ಪರದಾಟ!

ಬೋರ್‌ವೆಲ್‌ನ ಉಪ್ಪು ನೀರು ಕುಡಿದು ಆಸ್ಪತ್ರೆ ಸೇರುತ್ತಿರುವ ಜನ: ಕಳೆದ 10 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದಂತೆಯೇ, ಲಿಂಗಸುಗೂರು ಪುರಸಭೆ ಬೋರ್‌ವೆಲ್ ಹಾಗೂ ಬಾವಿ ನೀರ‌ನ್ನು ಸರಬರಾಜು ಮಾಡ್ತಿದ್ದಾರೆ. ಆದ್ರೆ ಇಲ್ಲೆ ಪುರಸಭೆ ದೊಡ್ಡ ಯಡವಟ್ಟು ಮಾಡಿದೆ. ಬೋರ್‌ವೆಲ್‌ನಿಂದ ಸರಬರಾಜು ಆಗುತ್ತಿರುವ ಉಪ್ಪು ನೀರನ್ನು ಜನರು ಕುಡಿದು ಜನ ವಾಂತಿ, ಭೇದಿಯಿಂದ ಬಳಲುತ್ತಿದ್ದಾರೆ. ಮಕ್ಕಳು, ವೃದ್ಧರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಡ್ತಿದೆ. ಇಡೀ ದಿನ ಕೂಲಿ ಮಾಡಿದ ಹಣವನ್ನೆಲ್ಲಾ ಮಕ್ಕಳು, ಕುಟುಂಬಸ್ಥರ ಚಿಕಿತ್ಸೆಗೆ ಖರ್ಚಾಗ್ತಿದೆ. ಯಾರಿಗೆ ಹೇಳೋದು, ಯಾರಿಗೆ ಕೈಕಾಲು ಬೀಳೋದು ಹೇಳಿ, ಇದೇ ನೀರನ್ನ ಕುಡಿದೇ ಪ್ರಾಣ ಬಿಡ್ತಿವಿ ಬಿಡಿ ಅಂತ ಜನರು ಪುರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ಸದಸ್ಯರು ಹಾಗೂ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ‌ಇಷ್ಟೆಲ್ಲ ಸಮಸ್ಯೆಗಳು ಆಗುತ್ತಿದ್ದರೂ ಲಿಂಗಸೂಗೂರು ಶಾಸಕರು ಮಾತ್ರ ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸಲು ಶುರು ಮಾಡಿದ್ದಾರೆ. ಹೆಸರಿಗೆ ಮಾತ್ರ ಕುಡಿಯಲು ನೀರಿನ ಕೆರೆಗೆ ಭೇಟಿ ನೀಡಿ ಈಗ ಕೆರೆ ತುಂಬಿಸುತ್ತಿದ್ದೇವೆ. ಕೆಲವೇ ದಿನಗಳಲ್ಲಿ ‌ನೀರು ಬರುತ್ತೆ ಅಂತ ಹೇಳಿ ಜಾರಿಕೊಂಡಿದ್ದಾರೆ. ಇತ್ತ ಪುರಸಭೆ ಅಧಿಕಾರಿಗಳು ಜುಲೈ 10ಕ್ಕೆ ಕಾಲುವೆಗೆ ನೀರು ಬರುತ್ತಿತ್ತು. ಈ ವರ್ಷ ನೀರು ಬರಲು ವಿಳಂಬವಾಗಿದೆ. ಹೀಗಾಗಿ ‌ನೀರಿನ ಸಮಸ್ಯೆ ಆಗಿದೆ. ಯಾವ ವಾರ್ಡ್‌ನಲ್ಲಿ ಬೋರ್‌ವೆಲ್ ಇಲ್ಲವೂ ಅಲ್ಲಿ ಟ್ಯಾಂಕರ್ ಮುಖಾಂತರ ‌ನೀರು ಕೊಡುತ್ತಿದ್ದೇವೆ. ಈಗ ಕಾಲುವೆ ನೀರನ್ನು ಬಿಟ್ಟಿದ್ದಾರೆ. ಕಾಲುವೆ ತುಂಬಿಸಿಕೊಂಡು ಜನರಿಗೆ ಎರಡು - ಮೂರು ದಿನಗಳಲ್ಲಿ ನೀರು ಸರಬರಾಜು ಮಾಡುತ್ತೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಜಗನ್ನಾಥ್ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ತಿಳಿಸಿದರು. ಅಷ್ಟೇ  ಅಲ್ಲದೇ 10 ದಿನಗಳಿಂದ ನೀರಿನ ಸಮಸ್ಯೆ ಆಗಿದ್ರೂ, ಪುರಸಭೆ ಅಧಿಕಾರಿಗಳು ‌ಮಾತ್ರ‌ ನೀರಿನ ಸಮಸ್ಯೆ ಆಗಿಲ್ಲ, ಮೂರ್ನಾಲ್ಕು ದಿನ ಅಷ್ಟೇ ಸಮಸ್ಯೆ ಆಗಿದೆ ನೀರು ಕೊಡ್ತಿದಿವಿ ಎಂದು  ಹಾರಿಕೆ ಉತ್ತರ ನೀಡುತ್ತಿದ್ದಾರೆ.

ರಾಯಚೂರು: ಎರಡು ವರ್ಷಗಳ ಬಳಿಕ ಮುದಗಲ್‌ನಲ್ಲಿ ಮೊಹರಂ ಸಂಭ್ರಮ..!

ನೀರು ಕುಡಿದು ಸತ್ತರೂ ಬುದ್ಧಿಕಲಿಯದ ಲಿಂಗಸೂಗೂರು ಪುರಸಭೆ: ರಾಯಚೂರಿನಲ್ಲಿ ರಾಂಪೂರ ಕೆರೆ‌ ನೀರು ಸೇವಿಸಿ 7 ಜನರು ಜೀವ ಹೋಗಿದೆ. ಆದರೂ ಲಿಂಗಸೂಗೂರು ‌ಪುರಸಭೆ ವ್ಯಾಪ್ತಿಯಲ್ಲಿ ಬರುವ ಕುಡಿಯಲು ನೀರು ಶುದ್ಧೀಕರಣ ಘಟಕದಲ್ಲಿ ನೀರಿನ ತಪಾಸಣೆ ಆಗಲ್ಲ. ನೀರಿಗೆ ಮನಬಂದಂತೆ ಬ್ಲಿಚಿಂಗ್ ಮತ್ತು ಆಲಂ ಕಲಬೆರಕೆ ಮಾಡುತ್ತಾರೆ. ಅಷ್ಟೇ ಅಲ್ಲದೇ ನೀರು ಶುದ್ಧೀಕರಣ ಮಾಡುವ ಹತ್ತಾರು ಯಂತ್ರಗಳು ಕೆಟ್ಟು ನಿಂತಿವೆ. ಅಂತಹ ನೀರೇ ಜನರಿಗೆ ಲಿಂಗಸೂಗೂರು ‌ಪುರಸಭೆ ಸರಬರಾಜು ‌ಮಾಡುತ್ತಿದೆ. ಈ ವಿಚಾರ ಪುರಸಭೆ ಅಧಿಕಾರಿಗಳಿಗೂ ಹಾಗೂ ಪುರಸಭೆ ಅಧ್ಯಕ್ಷರು ಹಾಗೂ ಸದಸ್ಯರು ಗೊತ್ತಿದ್ದರೂ ಯಾರು ಕೂಡ ತಲೆಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಸಂಬಂಧ ಶಾಸಕರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇತ್ತ ಗಮನಹರಿಸಿ ದುರಂತ ಸಂಭವಿಸುವ ಮುನ್ನವೇ ಎಚ್ಚತ್ತುಕೊಳ್ಳಬೇಕಾಗಿದೆ.

Follow Us:
Download App:
  • android
  • ios