Asianet Suvarna News Asianet Suvarna News

ಬೆಂಗ್ಳೂರಲ್ಲಿ ಕುಡಿಯುವ ನೀರಿಗೆ ಹಾಹಾಕಾರ: ಟ್ಯಾಂಕರ್‌ಗೆ ಸಿಗುವ ನೀರು ಬಿಬಿಎಂಪಿಗೇಕಿಲ್ಲ?

ಶ್ರೀಮಂತರು ವಾಸಿಸುವ ಬಡಾವಣೆಗಳಿಗೆ ಎಂದಿನಂತೆ ನೀರು ಪೂರೈಕೆ ಮಾಡುತ್ತಿದ್ದಾರೆ. ಆದರೆ, ಕೂಲಿ ಕಾರ್ಮಿಕರು ವಾಸಿಸುವ ಕೊಳಗೇರಿ, ಬಡವರು, ಮಧ್ಯಮ ವರ್ಗದವರು ಇರುವ ಬಡಾವಣೆಗಳಿಗೆ ಪೂರೈಕೆ ಮಾಡುವ ನೀರಿನ ಪ್ರಮಾಣವನ್ನು ಕಡಿತಗೊಳಿಸಲಾಗಿದೆ.

Drinking Water Problem in Bengaluru grg
Author
First Published Mar 7, 2024, 9:26 AM IST

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಮಾ.07):  ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಹಂಚಿಕೆಯಲ್ಲಿ ತಾರತಮ್ಯ ನೀತಿಯಿಂದ ಬಡವರು ಮತ್ತು ಮಧ್ಯಮ ವರ್ಗದವರಿಗೆ ಮಾತ್ರ ನೀರಿನ ಸಮಸ್ಯೆ ಎಂಬಂತಾಗಿದೆ. ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದಂತೆ ನೀರು ಪೂರೈಕೆಯ ಜವಾಬ್ದಾರಿ ಹೊತ್ತಿರುವ ಬೆಂಗಳೂರು ಜಲಮಂಡಳಿ ಮತ್ತು ಬಿಬಿಎಂಪಿ ಅಧಿಕಾರಿಗಳು ನೀರು ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಶ್ರೀಮಂತರು ವಾಸಿಸುವ ಬಡಾವಣೆಗಳಿಗೆ ಎಂದಿನಂತೆ ನೀರು ಪೂರೈಕೆ ಮಾಡುತ್ತಿದ್ದಾರೆ. ಆದರೆ, ಕೂಲಿ ಕಾರ್ಮಿಕರು ವಾಸಿಸುವ ಕೊಳಗೇರಿ, ಬಡವರು, ಮಧ್ಯಮ ವರ್ಗದವರು ಇರುವ ಬಡಾವಣೆಗಳಿಗೆ ಪೂರೈಕೆ ಮಾಡುವ ನೀರಿನ ಪ್ರಮಾಣವನ್ನು ಕಡಿತಗೊಳಿಸಲಾಗಿದೆ.

ನೀರಿನ ಸಮಸ್ಯೆ ಆರಂಭಕ್ಕೂ ಮೊದಲು ದಿನಬಿಟ್ಟು ದಿನ (ಎರಡು ದಿನಕ್ಕೆ ಒಂದು ಬಾರಿ) ಕಾವೇರಿ ನೀರನ್ನು ನಗರದ ಕೇಂದ್ರ ಭಾಗದ ಎಲ್ಲ ಬಡಾವಣೆಗಳಿಗೆ ಪೂರೈಕೆ ಮಾಡಲಾಗುತ್ತಿತ್ತು. ಆದರೀಗ ಕೊಳಗೇರಿ, ಬಡವರು ವಾಸಿರುವ ಪ್ರದೇಶಗಳಿಗೆ ಐದಾರು ದಿನಕ್ಕೆ ಒಂದು ಬಾರಿ ಮಾತ್ರ ನೀರು ಎಂಬ ಹೊಸ ಕಾನೂನು ತರಲಾಗಿದೆ.

ಒಂದೇ ತಿಂಗಳಲ್ಲಿ 200 ಸ್ವತ್ತುಗಳಿಗೆ ಅಕ್ರಮವಾಗಿ ಎ ಖಾತಾ; ಲೋಕಾಯುಕ್ತರಿಗೆ ದೂರು ನೀಡಿದ ಎನ್‌ಆರ್ ರಮೇಶ್

ಕೇಂದ್ರ ಭಾಗದಲ್ಲಿಯೂ ಸಮಸ್ಯೆ ಉಲ್ಬಣ

ಕಾವೇರಿ ನೀರು ಪೂರೈಕೆ ಆಗುತ್ತಿರುವ ನಗರದ ಕೇಂದ್ರ ಭಾಗದಲ್ಲಿಯೂ ನೂರಾರು ಬಡಾವಣೆ, ಕೊಳಗೇರಿಗಳಿಗೆ ನಿಯಮಿತವಾಗಿ ನೀರು ಪೂರೈಕೆ ಮಾಡದೇ ತಾರತಮ್ಯ ನೀತಿ ಆರಂಭಿಸಿದ ಪರಿಣಾಮ ವಿಜಯನಗರ, ಚಾಮರಾಜಪೇಟೆ, ಬಸವಗುಡಿ, ಮಲ್ಲೇಶ್ವರ, ರಾಜಾಜಿನಗರ, ಬಸವೇಶ್ವರ ನಗರ, ಕೋರಮಂಗಲ, ಗೋವಿಂದ ರಾಜನಗರ, ಜಯನಗರ ಸೇರಿದಂತೆ ಮೊದಲಾದ ಭಾಗದಲ್ಲಿ ನೀರಿನ ಸಮಸ್ಯೆ ಶುರುವಾಗಿದೆ. ಆದರೆ, ನೀರಿನ ಸಮಸ್ಯೆ ಇರುವ ಪ್ರದೇಶಕ್ಕೆ ಹೊಂದಿಕೊಂಡಿರುವ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌, ಶ್ರೀಮಂತ ಬಡಾವಣೆಗೆ ಮಾತ್ರ ಭರಪೂರ ನೀರು ಪೂರೈಕೆ ಆಗುತ್ತಿದೆ ಎಂಬ ದೂರುಗಳು ದಿನದಿಂದ ದಿನಕ್ಕೆ ಹೆಚ್ಚಾಗಿ ಕೇಳಿ ಬರುತ್ತಿವೆ.

ಶ್ರೀಮಂತರಿಂದ ಪ್ರಬಲ ಒತ್ತಡ:

ಶ್ರೀಮಂತರು, ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಹೆಚ್ಚಾಗಿರುವ ವಾಸಿಸುವ ಬಡಾವಣೆಗಳಿಗೆ ನಿಗದಿತ ಪ್ರಮಾಣದಲ್ಲಿ ನೀರು ಪೂರೈಕೆ ಆಗಬೇಕೆಂಬ ಒತ್ತಡವರನ್ನು ಜಲಮಂಡಳಿ ಮತ್ತು ಬಿಬಿಎಂಪಿಯ ಅಧಿಕಾರಿಗಳ ಮೇಲೆ ಒತ್ತಡ ಹಾಕಲಾಗುತ್ತಿದೆ. ಒತ್ತಡಕ್ಕೆ ಮಣಿದು ಅಧಿಕಾರಿಗಳು ಶ್ರೀಮಂತರು ವಾಸಿಸುವ ಬಡಾವಣೆಗಳಿಗೆ ಆದ್ಯತೆಯ ಮೇರೆಗೆ ನೀರು ಪೂರೈಕೆ ಮಾಡಲಾಗುತ್ತಿದೆ.

ನೀರಿಗಾರಿ ಕಾದು ಕುಳಿತ ಬಡವರು:

ಯಾವುದೇ ಪ್ರಭಾವ ಅಧಿಕಾರವಿಲ್ಲದ ಕೂಲಿಕಾರರು, ಬಡವರು, ಮಧ್ಯಮ ವರ್ಗದ ಜನರು ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ನೀರು ಪೂರೈಕೆ ಮಾಡುತ್ತಿಲ್ಲ. ಬಡವರಿಗೆ ಮಾತ್ರ ಬರ, ಕೊಳವೆ ಬಾವಿ ಬತ್ತಿ ಹೋಗಿವೆ. ಹೀಗಾಗಿ, ನೀರಿನ ಸಮಸ್ಯೆ ಉಂಟಾಗುತ್ತಿದೆ. ಸಾಧ್ಯವಾದಷ್ಟು ಕಡಿಮೆ ನೀರು ಬಳಕೆ ಮಾಡಿ ಎಂಬ ಸಂದೇಶವನ್ನು ಅಧಿಕಾರಿಗಳು ಕೇಳಿ ಕಳುಸುತ್ತಿದ್ದಾರೆ. ವಿಧಿ ಇಲ್ಲದ ಬಡವರು ನೀರಿಗಾಗಿ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ನೀರು ಇರುವ ಬಡಾವಣೆಗಳ ಹುಡುಕಾಟ:

ನೀರಿನ ಸಮಸ್ಯೆ ಇರುವ ಬಡಾವಣೆಗಳಲ್ಲಿ ವಾಸಿಸುತ್ತಿರುವ ಮಧ್ಯಮ ವರ್ಗದ ಕುಟುಂಬಗಳು ಇದೀಗ ನೀರಿನ ಪೂರೈಕೆ ಚನ್ನಾಗಿರುವ ಬಡಾವಣೆಗಳಲ್ಲಿ ಹೆಚ್ಚು ಬಾಡಿಗೆಯಾದರೂ ಪರವಾಗಿಲ್ಲ ಎಂದು ಹೊಸ ಬಾಡಿಗೆ ಮನೆ ಹುಡುಕಾಟ ಆರಂಭಿಸಿದ್ದಾರೆ. ಆದರೆ, ಕಡು ಬಡವರು ಬೇರೆ ಅವಕಾಶವಿಲ್ಲದೇ ಬರುವ ನೀರಿನ್ನು ಸಂಗ್ರಹಿಸಿಟ್ಟುಕೊಂಡು ಬದುಕು ನಡೆಸುವುದಕ್ಕೆ ಮಾನಸಿಕವಾಗಿ ತಯಾರಿ ಆರಂಭಿಸಿದ್ದಾರೆ.

ಪ್ರತಿ ದಿನ ಯಾವ ಪ್ರದೇಶಕ್ಕೆ ಎಷ್ಟು ನೀರು ಪೂರೈಕೆ?

ಪ್ರದೇಶಗಳು- ಪ್ರಮಾಣ (ಎಂಎಲ್‌ಡಿ)

* ಬನಶಂಕರಿ, ಬಸವನಗುಡಿ, ಇಂದಿರಾ ನಗರ, ಶಾಂತಿನಗರ, ಸಿ.ವಿ.ರಾಮನ್‌ ನಗರ- 135
* ಬನಶಂಕರಿ2ನೇ ಹಂತ, ಕುಮಾರಸ್ವಾಮಿ ಲೇಔಟ್‌, ಜಯನಗರ, ಚಾಮರಾಜಪೇಟೆ- 135
* ಹೈಗ್ರೌಂಡ್ಸ್, ಶಿವಾಜಿನಗರ, ಮಲ್ಲೇಶ್ವರ, ಪುಲಕೇಶಿನಗರ, ಗಾಂಧಿನಗರ- 330
*ಬೆಂಗಳೂರು ದಕ್ಷಿಣ, ಎಚ್‌ಎಸ್‌ಆರ್‌ ಲೇಔಟ್‌, ಕೋರಮಂಗಲ, ಬಿಟಿಎಂ ಲೇಔಟ್‌, ಜೆ.ಪಿ.ನಗರ, ಗೋವಿಂದರಾಜನಗರ, ವಿಜಯನಗರ, ರಾಜಾಜಿನಗರ, ಮಹಾಲಕ್ಷ್ಮೀಲೇಔಟ್‌, ದಾಸರಹಳ್ಳಿ, ಆರ್‌.ಆರ್‌.ನಗರ, ಯಶವಂತಪುರ, ಶಾಂತಿನಗರ, ಸಿ.ವಿ.ರಾಮನ್‌ ನಗರ, ಅನೇಕಲ್‌, ಎಲೆಕ್ಟ್ರಾನಿಕ್‌ ಸಿಟಿ, ಸೂರ್ಯ ಸಿಟಿ- 300
* ಬೊಮ್ಮನಹಳ್ಳಿ,ಕೆ.ಆರ್.ಪುರ, ಮಹದೇವಪುರ, ದಾಸರಹಳ್ಳಿ, ಬ್ಯಾಟರಾಯನಗಪುರ, ಸರ್ವಜ್ಞನಗರ, ಆರ್‌.ಆರ್‌.ನಗರ, ಯಶವಂತಪುರ- 550

ನೀರು ಹಂಚಿಕೆಯಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡುತ್ತಿಲ್ಲ. ನೀರು ಸರಬರಾಜುಗೆ ಮೀಟರ್‌ಗಳನ್ನು ಅಳವಡಿಕೆ ಮಾಡಲಾಗಿದೆ. ಈ ರೀತಿ ಸಮಸ್ಯೆ ಉಂಟಾಗಿರುವ ಬಗ್ಗೆ ನಿರ್ದಿಷ್ಟ ದೂರು ಕಂಡು ಬಂದರೆ ಪರಿಶೀಲನೆ ಮಾಡಿ ಸರಿಪಡಿಸಲಾಗುವುದು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.  

ವಿಜಯನಗರದ ಹೊಸಹಳ್ಳಿ ಎಕ್ಸ್‌ಟೆನ್ಷನ್‌ನ ಒಂದು ಭಾಗಕ್ಕೆ ಇಂದಿಗೂ ಪ್ರತಿ ದಿನ ನೀರು ಪೂರೈಕೆ ಮಾಡುತ್ತಿದ್ದಾರೆ. ಅದೇ ಪ್ರದೇಶಕ್ಕೆ ಹೊಂದಿಕೊಂಡಿರುವ ಮಧ್ಯಮ ವರ್ಗದವರು, ಬಡವರು ವಾಸಿಸುತ್ತಿರುವ ಭಾಗಕ್ಕೆ ವಾರಕ್ಕೊಮ್ಮೆ ನೀರು ಎಂಬ ಹೊಸ ನೀತಿ ರೂಪಿಸಲಾಗಿದೆ. ಕುಡಿಯುವ ನೀರಿನ ಹಂಚಿಕೆಯಲ್ಲಿಯೂ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿರುವುದು ದುರಂತದ ಸಂಗತಿ ಎಂದು ವಿಜಯನಗರ (ಹೊಸಹಳ್ಳಿ) ನಿವಾಸಿ ಕುಮಾರ್‌ ತಿಳಿಸಿದ್ದಾರೆ. 

315 ಟ್ಯಾಂಕರ್‌ ಬಾಡಿಗೆ ಲಭ್ಯ

ಬೆಂಗಳೂರು:  ನಗರದಲ್ಲಿ ಬುಧವಾರದವರೆಗೆ ನೀರು ಪೂರೈಕೆ ಮಾಡುವ 966 ಟ್ಯಾಂಕರ್‌ ಮಾಲೀಕರು ಬಿಬಿಎಂಪಿಯಲ್ಲಿ ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ ಕೇವಲ 315 ಟ್ಯಾಂಕರ್‌ ಮಾಲೀಕರು ಮಾತ್ರ ಪಾಲಿಕೆಗೆ ಟ್ಯಾಂಕರ್‌ಗಳನ್ನು ಬಾಡಿಗೆಗೆ ನೀಡಲು ಒಪ್ಪಿಗೆ ಸೂಚಿಸಿದ್ದಾರೆ.

ನೀರು ಪೂರೈಕೆ ಮಾಡುವ ಟ್ಯಾಂಕರ್‌ ಮಾಲೀಕರು ಸ್ವಯಂ ನೋಂದಣಿಗೆ ಮಾ.1ರಿಂದ 7ರ ವರೆಗೆ ಬಿಬಿಎಂಪಿ ಆನ್‌ ಲೈನ್‌ ವ್ಯವಸ್ಥೆ ಕಲ್ಪಿಸಿದೆ. ಬುಧವಾರವರೆಗೆ ಒಟ್ಟು 73.72 ಲಕ್ಷ ಲೀಟರ್‌ ನೀರು ಪೂರೈಕೆಯ ವಿವಿಧ ಗಾತ್ರದ 966 ಟ್ಯಾಂಕರ್‌ ಮಾಲೀಕರು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 23.38 ಲಕ್ಷ ಲೀಟರ್‌ ವಿವಿಧ ಸಾಮರ್ಥ್ಯದ 315 ಟ್ಯಾಂಕರ್ ಮಾಲೀಕರು ಬಾಡಿಗೆ ಆಧಾರದಲ್ಲಿ ಟ್ಯಾಂಕರ್‌ ಬಾಡಿಗೆ ನೀಡಲು ಒಪ್ಪಿದ್ದಾರೆ. 50.34 ಲಕ್ಷ ಲೀಟರ್‌ ನೀರಿನ ವಿವಿಧ ಸಾಮರ್ಥ್ಯದ 651 ಟ್ಯಾಂಕರ್‌ ಮಾಲೀಕರು ಬಾಡಿಗೆ ನೀಡಲು ನಿರಾಕರಿಸಿದ್ದಾರೆ ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೋಲ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ನಾಡಿದ್ದಿನ ಒಳಗೆ ನೋಂದಣೆ ಆಗದ ನೀರಿನ ಟ್ಯಾಂಕರ್‌ಗಳು ವಶಕ್ಕೆ: ಡಿಕೆ ಶಿವಕುಮಾರ್ ವಾರ್ನಿಂಗ್

ಇಂದು ನೋಂದಣಿಗೆ ಕಡೆಯ ದಿನ

ಗುರುವಾರ ಸಂಜೆವರೆಗೆ ನೋಂದಣಿಗೆ ಅವಕಾಶ ಇದೆ. ಬಿಬಿಎಂಪಿಯ https://bbmp.oasisweb.in/TankerManagement/SelfRegistration.aspx ಪೋರ್ಟಲ್‌ನಲ್ಲಿ ತಮ್ಮ ಹೆಸರು, ವಿಳಾಸ, ವಲಯ, ಪಿನ್ ಕೋಡ್, ಮೊಬೈಲ್ ಸಂಖ್ಯೆ, ಟ್ಯಾಂಕರ್ ವಾಹನದ ಸಂಖ್ಯೆ, ಟ್ಯಾಂಕರ್ ಸಾಮರ್ಥ್ಯ, ಚಾಲಕನ ಹೆಸರು, ಚಾಲಕನ ಡ್ರೈವಿಂಗ್ ಲೈಸನ್ಸ್ ಮಾಹಿತಿಗಳನ್ನು ದಾಖಲಿಸಿ ನೋಂದಣಿ ಮಾಡಿಕೊಳ್ಳಬೇಕು. ತಕ್ಷಣ ಆನ್‌ಲೈನ್‌ನಲ್ಲಿಯೇ ಪ್ರಮಾಣ ಪತ್ರ ಸಿಗುತ್ತದೆ. ಪ್ರಮಾಣ ಪತ್ರದ ಪ್ರತಿಯನ್ನು ಟ್ಯಾಂಕರ್‌ ವಾಹನ ಚಾಲಕ ಬಳಿ ಇಟ್ಟುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕ್ಯಾರೇ ಎನ್ನದ ಮಾಲೀಕರು

ನಗರದಲ್ಲಿ ಸುಮಾರು 3500ಕ್ಕೂ ಅಧಿಕ ಟ್ಯಾಂಕರ್‌ಗಳಿದ್ದು, ಎಲ್ಲ ಟ್ಯಾಂಕರ್‌ ಮಾಲೀಕರು ನೋಂದಣೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಟ್ಯಾಂಕರ್‌ಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಎಚ್ಚರಿಕೆ ನೀಡಲಾಗಿದ್ದರೂ ಬಹುತೇಕ ಟ್ಯಾಂಕರ್‌ ಮಾಲೀಕರು ನೋಂದಣಿ ಮಾಡಿಕೊಂಡಿಲ್ಲ.

ನೋಂದಣಿಯಾದ ಟ್ಯಾಂಕರ್ ವಿವರ(ಬುಧವಾರ)

ವಲಯ ಟ್ಯಾಂಕರ್‌ ನೊಂದಣಿ ಸಂಖ್ಯೆ ಬಾಡಿಗೆ ನೀಡಲು ಒಪ್ಪಿಗೆ ಬಾಡಿಗೆ ನೀಡಲ್ಲ
ಬೊಮ್ಮನಹಳ್ಳಿ 77 23 54
ದಾಸರಹಳ್ಳಿ 60 4 56
ಪೂರ್ವ 248 121 127
ಮಹದೇವಪುರ 178 36 142
ಆರ್‌ಆರ್‌ನಗರ 48 8 40
ದಕ್ಷಿಣ 247 92 155
ಪಶ್ಚಿಮ 43 17 26
ಯಲಹಂಕ 65 14 51
ಒಟ್ಟು 966 315 651

Follow Us:
Download App:
  • android
  • ios