Asianet Suvarna News Asianet Suvarna News

ಉತ್ತರ ಕನ್ನಡ: ಸೂಪಾ ಜಲಾಶಯ ಒಡಲಲ್ಲಿ ನೀರಿಗೆ ಹಾಹಾಕಾರ..!

ಜೋಯಿಡಾ ತಾಲೂಕಿನ ರಾಮನಗರಕ್ಕೆ ಸ್ಥಳೀಯಾಡಳಿತಗಳು ಇದುವರೆಗೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ.

Drinking Water Problem at Joida in Uttara Kannada grg
Author
Bengaluru, First Published Aug 3, 2022, 10:23 PM IST

ಅನಂತ ದೇಸಾಯಿ

ಜೋಯಿಡಾ(ಆ.03): ವಿದ್ಯುಚ್ಛಕ್ತಿ ಉತ್ಪಾದಿಸಿ ಇಡೀ ರಾಜ್ಯಕ್ಕೆ ಬೆಳಕು ನೀಡುವ ಸೂಪಾ ಜಲಾಶಯವು ತನ್ನ ಒಡಲಿನ ಮಕ್ಕಳಿಗೆ ಹನಿ ನೀರು ಕೊಡುತ್ತಿಲ್ಲ! ತಾಲೂಕಿನ ರಾಮನಗರಕ್ಕೆ ಸ್ಥಳೀಯಾಡಳಿತಗಳು ಇದುವರೆಗೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. 35 ವರ್ಷಗಳಿಂದ ಸೂಪಾ ಜಲಾಶಯದಿಂದ ಪುನರ್ವಸತಿಗೊಂಡ ಜನರು ಕಾಳಿ ನದಿಯಿಂದ ಎತ್ತಿ ಬೀಸಾಡಿದ ಮೀನಿನಂತೆ ನೀರಿಗಾಗಿ ಒದ್ದಾಡುತ್ತಲೇ ಇದ್ದಾರೆ. ಆದರೆ ನೀರುಮಾತ್ರ ಇದುವರೆಗೂ ಸಿಗುತ್ತಿಲ್ಲ. ಮಳೆಗಾಲದಲ್ಲಿ ಮಳೆಯ ನೀರನ್ನೇ ಬಳಸುವ ಪರಿಸ್ಥಿತಿ ತಲೆದೋರಿದೆ.

ಸೌಲಭ್ಯ ಮರೀಚಿಕೆ:

1985ರಲ್ಲಿ ಕಾಳಿನದಿಗೆ ಸೂಪಾದಲ್ಲಿ ಅಣೆಕಟ್ಟು ನಿರ್ಮಿಸಿದಾಗ ಪುನರ್ವಸತಿ ನಿರ್ಮಿಸಿದ ರಾಮನಗರಕ್ಕೆ 47 ಹಳ್ಳಿಗಳ ಸುಮಾರು 1400ಕ್ಕೂ ಹೆಚ್ಚು ಕುಟುಂಬಗಳು ಆಶ್ರಯಿಸಿ ಬಂದವು. ನಿರಾಶ್ರಿತರಿಗೆ ಸರ್ಕಾರ ಕುಡಿಯುವ ನೀರು ಸಹಿತ ಎಲ್ಲ ಮೂಲ ಸೌಕರ್ಯ ಕಲ್ಪಿಸಿ ಕೊಡಬೇಕಾಗಿತ್ತು. ಆದರೆ ಯಾವುದು ಕೂಡ ಕಾರ್ಯರೂಪಕ್ಕೆ ಬರಲಿಲ್ಲ. ಅಂದಿನ ಶಾಸಕ ಬಿ.ಪಿ. ಕದಂ ಇಲ್ಲಿನ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ವರದಿ ನೀಡಿ ನಿರಾಶ್ರಿತರಿಗೆ ಸೂಕ್ತ ಪರಿಹಾರ ಮತ್ತು ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿದ್ದರು. ಸರ್ಕಾರ ಕದಂ, ಅವರ ವರದಿ ಸ್ವೀಕರಿಸಿ ಜಿಲ್ಲಾಧಿಕಾರಿಗೆ ಕಳುಹಿಸಿತ್ತು. ಆದರೆ ಜಿಲ್ಲಾ ಮಟ್ಟದಿಂದ ವಿಶೇಷ ಕ್ರಮ ಆಗಲೇ ಇಲ್ಲ. ಸೌಕರ್ಯಗಳು ಸ್ಥಳೀಯರಿಗೆ ಇಂದಿಗೂ ಮರೀಚಿಕೆಯಾಗಿದೆ.
ರಾಮನಗರ ಪುನರ್ವಸತಿ ಕೇಂದ್ರಕ್ಕೆ ಕಳೆದ 10 ವರ್ಷಗಳಲ್ಲಿ ಕುಡಿಯುವ ನೀರಿಗಾಗಿ ಹಲವಾರು ಕೋಟಿ ರು. ವ್ಯಯಿಸಲಾಗಿದೆ. ಯಾವ ಯೋಜನೆ ಮಾಡಿಸುವಾಗಲೂ ಸರಿಯಾದ ಕ್ರಮ ಕೈಕೊಳ್ಳದ ಕಾರಣ ಸರ್ಕಾರದ ಹಣ ನೀರಿನಂತೆ ಖರ್ಚಾಗಿದೆಯೇ ಹೊರತು ನಯಾಪೈಸೆ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

ಉತ್ತರಕನ್ನಡ: ಪಂಚಮಿಯಂದು ನೈಜ ನಾಗನಿಗೆ ಹಾಲೆರೆದು ಪೂಜೆ

ಊರ ತುಂಬ ಬೋರ್‌ವೆಲ್‌ಗಳು:

ರಾಮನಗರ ಕುಡಿಯುವ ನೀರಿನ ಯೋಜನೆ ಹೆಸರಲ್ಲಿ ಎಲ್ಲಿ ನೋಡಿದರೂ ನಿರಾಶ್ರಿತರ ಕಾಲೋನಿಗಳಲ್ಲಿ ಬೋರ್‌ವೆಲ್‌ ಕಂಡು ಬರುತ್ತಿವೆ. ಆದರೆ ಯಾವ ಬೋರ್‌ವೆಲ್‌ನಲ್ಲೂ ನೀರಿಲ್ಲ. ಕಳೆದ 10 ವರ್ಷಗಳ ಅವಧಿಯಲ್ಲಿ ಇಲ್ಲಿ 40ಕ್ಕೂ ಹೆಚ್ಚು ಬೋರ್‌ವೆಲ್‌ ಕೊರೆಯಲಾಗಿದೆ. ಪಕ್ಕದಲ್ಲೇ ಪಾಂಡ್ರಿ ನದಿ ಇದೆ. ಆದರೆ ಅಲ್ಲಿಂದ ನೀರು ಪೂರೈಸುವ ಸಮರ್ಪಕ ಯೋಜನೆ ಮಾಡಿಲ್ಲ. ಎಲ್ಲೆಂದರಲ್ಲಿ ನೀರು ಸಂಗ್ರಹಾಲಯಗಳಿವೆ. ಆದರೆ ಯಾವ ಸಂಗ್ರಹಾಲಯಕ್ಕೂ ನೀರು ಹೋಗುತ್ತಿಲ್ಲ. ಕಳೆದ ವರ್ಷ ವಾರ್ಡ್‌ ನಂ.3ರಲ್ಲಿ .50 ಲಕ್ಷ ವೆಚ್ಚದ ನೀರು ಸಂಗ್ರಹಾಲಯ ನಿರ್ಮಿಸಲಾಗಿದೆ. ಆದರೆ ಈ ಸಂಗ್ರಹಾಲಯಕ್ಕೆ ನೀರೆ ಹೋಗಿಲ್ಲ. ಅದು 10ರ ಜೊತೆ 11ರಂತಾಗಿದೆ. ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿಷ್ಕಾಳಜಿಯಿಂದ ಇಲ್ಲಿನ ಜನರ ಜೀವನ ನರಕ ಸದೃಶವಾಗಿದೆ.

ಕುಡಿಯುವ ನೀರು ನೈರ್ಮಲ್ಯ ಇಲಾಖೆ ಮತ್ತೆ .51 ಲಕ್ಷದ ಕಾಮಗಾರಿ ಕೈಗೆತ್ತಿಕೊಂಡಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಇದುವರೆಗೂ ಫಿಲ್ಟರ್‌ ಮತ್ತು ಉಳಿದ ಕೆಲಸ ಮುಗಿಸಿಲ್ಲ. ಹೀಗಾಗಿ ನೀರಿನ ಸಂಗ್ರಹಾಲಯ ಗ್ರಾಪಂಗೆ ನಾವು ಹಸ್ತಾಂತರಿಸಿಕೊಂಡಿಲ್ಲ ಅಂತ ರಾಮನಗರ ಪಿಡಿಒ ರಾಜು ತಳವಾರ ತಿಳಿಸಿದ್ದಾರೆ. 

ಅಂದಿನ ಶಾಸಕ ಬಿ.ಪಿ. ಕದಂ ಅವರಿಂದ ಇಲ್ಲಿಯವರೆಗೆ ಎಲ್ಲ ಶಾಸಕರಿಗೂ ಕುಡಿಯುವ ನೀರಿನ ಸ್ಥಿತಿ ಹೇಳಿದ್ದೇವೆ. ಆದರೆ ಯಾರು ಕೂಡ ನೈಜ ಸ್ಥಿತಿ ಅರಿತು ಸಮಸ್ಯೆಗಳನ್ನು ಪರಿಹರಿಸುವ ಗೋಜಿಗೆ ಹೋಗುತ್ತಿಲ್ಲ. ಮೇಲಧಿಕಾರಿಗಳು ಗಮನ ಹರಿಸಬೇಕು ಅಂತ ಸಾಮಾಜಿಕ ಕಾರ್ಯಕರ್ತ ಎಂ.ಕೆ. ರಾಣೆ ತಿಳಿಸಿದ್ದಾರೆ. 
 

Follow Us:
Download App:
  • android
  • ios