ಹಾಸನ(ಆ.20): ಬೇಲೂರಿನ ವಿಷ್ಣುಸಮುದ್ರ ಕಲ್ಯಾಣಿಗೆ ಹೋಗುವ ರಸ್ತೆ ಪಕ್ಕದ ಯುಜಿಡಿ ಒಡೆದು ಮಲಮೂತ್ರದ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಇದರ ದುರ್ನಾತಕ್ಕೆ ಸುತ್ತಮುತ್ತಲಿನ ನಿವಾಸಿಗಳು ಮತ್ತು ಭಕ್ತರು ಪರದಾಡುವಂತಾಗಿದೆ.

ಇಲ್ಲಿನ ವಿಶ್ವವಿಖ್ಯಾತ ಶ್ರೀಚೆನ್ನಕೇಶವಸ್ವಾಮಿ ದೇಗುಲದ ಸಮೀಪದ ವಿಷ್ಣುಸಮುದ್ರ ಕಲ್ಯಾಣಿ ರಸ್ತೆಯಲ್ಲಿ (ಕೆರೆಬೀದಿ) ಯುಜಿಡಿ ಒಡೆದು ಮಲಮೂತ್ರ ರಸ್ತೆ ಮೇಲೆ ಹರಿಯುತ್ತಿದೆ. ಕಳೆದ 15 ದಿನಗಳಿಂದ ಯುಜಿಡಿಯಿಂದ ಹರಿದು ಬರುವ ತ್ಯಾಜ್ಯವಸ್ತುಗಳು ಮತ್ತು ಮಲ ಮೂತ್ರ ಡಾಂಬರು ರಸ್ತೆಯ ಮೇಲೆ ಹರಿದು ಬರುತ್ತಿದ್ದು, ಇಡೀ ಬೀದಿ ಗಬ್ಬುನಾರುತ್ತಿದೆ.

ಯುಜಿಡಿ ಪೈಪ್ ಹಾನಿ:

ಇದೇ ರಸ್ತೆಯಲ್ಲಿ ಸೆಸ್ಕಾಂನಿಂದ ವಿದ್ಯುತ್‌ ಕಾಮಗಾರಿ ನಡೆಯುತ್ತಿದ್ದು, ಗುಂಡಿಯನ್ನು ತೆಗೆಯುವ ವೇಳೆ ಯುಜಿಡಿ ಪೈಪ್‌ಗೆ ಹಾನಿಯಾಗಿ ಒಡೆದು ಅದರಿಂದ ತ್ಯಾಜ್ಯವಸ್ತುಗಳು ರಸ್ತೆ ಮೇಲೆ ಹರಿದು ಬರುತ್ತಿದೆ. ಮಲಮೂತ್ರಗಳ ಗಬ್ಬುವಾಸನೆಗೆ ಇಲ್ಲಿನ ನಿವಾಸಿಗಳು ಹೈರಾಣಾಗಿದ್ದಾರೆ.

ಭಕ್ತರ ಆಕ್ರೋಶ:

ಚೆನ್ನಕೇಶವಸ್ವಾಮಿ ದೇಗುಲಕ್ಕೆ ಬರುವ ಭಕ್ತರು ಇಲ್ಲಿನ ವಿಷ್ಣುಸಮುದ್ರಕ್ಕೆ ಬಂದು ಸ್ನಾನ ಮಾಡಿ ದರ್ಶನ ಪಡೆಯುವುದು ವಾಡಿಕೆ. ಅದರಲ್ಲೂ ಚೆನ್ನಕೇಶವಸ್ವಾಮಿ ಮನೆ ದೇವರಾಗಿದ್ದರೆ ಮುಡಿ ಹರಕೆಯನ್ನು ಹೊತ್ತು ಮುಡಿಯನ್ನು ಕೊಟ್ಟು ಇಲ್ಲಿನ ಐತಿಹಾಸಿಕ ವಿಷ್ಣುಸಮುದ್ರ ಕಲ್ಯಾಣಿಯಲ್ಲಿ ಮಿಂದು ಮಡಿಯಿಂದ ದೇವರ ದರ್ಶನಕ್ಕೆ ತೆರಳಿ ತಮ್ಮ ಹರಕೆ ತೀರಿಸುತ್ತಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅದರಲ್ಲೂ ಶ್ರಾವಣ ಮಾಸ ಬಂದರೇ, ಕಲ್ಯಾಣಿಯಲ್ಲಿ ಮಿಂದು ಚೆನ್ನಕೇಶವಸ್ವಾಮಿಯ ದರ್ಶನ ಭಾಗ್ಯ ಪಡೆಯಲು ಮತ್ತು ರಾಜ್ಯದ ನಾನಾ ಮೂಲೆಯಿಂದ ಸಾವಿರಾರು ಭಕ್ತರು ಬರುತ್ತಾರೆ. ಮುಡಿಯನ್ನು ಕೊಟ್ಟು ವಿಷ್ಣುಸಮುದ್ರ ಕಲ್ಯಾಣಿಗೆ ಸ್ನಾನ ಮಾಡಲು ಬರುವ ಭಕ್ತರು ಇದೇ ಕೆರೆ ಬೀದಿಯಲ್ಲಿ ರಸ್ತೆಯ ಮೇಲೆ ಹರಿದು ಬರುತ್ತಿರುವ ಯುಜಿಡಿ ಮಲಮೂತ್ರವನ್ನು ತುಳಿದು ಬರಬೇಕು. ಸ್ನಾನ ಮಾಡಿದ ನಂತರ ಮತ್ತೆ ಡಾಂಬರು ರಸ್ತೆಯ ಮೇಲೆ ಹರಿಯುತ್ತಿರುವ ಮಲಮೂತ್ರವನ್ನು ತುಳಿದುಕೊಂಡೇ ದೇವರ ದರ್ಶನಕ್ಕೆ ತೆರಳಬೇಕು.

ಫೋನ್ ಟ್ಯಾಪಿಂಗ್: 'ಅವರಿವರ ಕಾಲಿಡಿದು ತನಿಖೆಯಿಂದ ತಪ್ಪಿಸಿಕೊಳ್ತಾರೆ, ಮೊದ್ಲು FIR ಹಾಕಿ'

ಮಡಿಯಿಂದ ಸ್ನಾನವನ್ನು ಮಾಡಿ ಯುಜಿಡಿ ತ್ಯಾಜ್ಯವನ್ನು ತುಳಿದುಕೊಂಡು ದೇವರ ದರ್ಶನ ಮಾಡುವುದು ಯಾವ ಕರ್ಮ ಸಾರ್‌, ಅದರಲ್ಲೂ ಹೊಳೆಯಂತೆ ರಸ್ತೆಯ ಮೇಲೆ ಮಲಮೂತ್ರ ಹರಿಯುತ್ತಿದ್ದರೂ ಯಾರೂ ಗಮನ ಹರಿಸದಿರುವುದು ವಿಪರ್ಯಾಸವಾಗಿದೆ ಎಂದು ಮಾಗಡಿಯಿಂದ ಬಂದ ಭಕ್ತರ ಕುಟುಂಬದವರು ದೂರಿದರು.

ಊಟ ತಿಂಡಿ ಮಾಡದಂತಾಗಿದೆ:

ಸೆಸ್ಕಾಂ ಕಂಪನಿಯವರು ವಿದ್ಯುತ್‌ ಕಾಮಗಾರಿಗಾಗಿ ಆಳುದ್ದದ 3 ಗುಂಡಿಗಳನ್ನು ತೆಗೆದಿದ್ದಾರೆ. ಯುಜಿಡಿ ಪೈಪ್‌ ಒಡೆದು ಅದರಿಂದ ಬರುವ ನೀರು 3 ಗುಂಡಿಗಳಲ್ಲಿ ತುಂಬಿ ನಂತರ ರಸ್ತೆಯ ಮೇಲೆ ಹರಿದು ಬರುತ್ತದೆ. ಅದರಲ್ಲೂ ಬೆಳಗ್ಗೆ ಮತ್ತು ಸಂಜೆ ಮಲಮೂತ್ರ ಸರಾಗವಾಗಿ ರಸ್ತೆಯ ಮೇಲೆ ಹರಿಯುತ್ತಿದ್ದು, ಗಬ್ಬು ವಾಸನೆಯಿಂದ ಮನೆಯಲ್ಲಿ ಕುಳಿತು ಊಟ ತಿಂಡಿ ಮಾಡದಂತಾಗಿದೆ. ಪುರಸಭೆ ಮತ್ತು ಸೆಸ್ಕಾಂ ಅಧಿಕಾರಿಗಳಿಗೆ ಸಾಕಷ್ಟುಬಾರಿ ಮನವಿ ಮಾಡಿದ್ದರೂ ಯಾರೂ ಈ ಬಗ್ಗೆ ತಲೆಡಕೆಡಿಸಿಕೊಳ್ಳುತ್ತಿಲ್ಲ ಎಂದು ತಾಲೂಕು ಅಂಗವಿಕಲರ ಸಂಘದ ಅಧ್ಯಕ್ಷ ಉಮೇಶ್‌ ಮತ್ತು ನಿವಾಸಿ ಕವಾಡಗೇರಿ ಬೀದಿ ರಾಮೇಗೌಡ ಆರೋಪಿಸಿದರು.

ಎ. ರಾಘವೇಂದ್ರಹೊಳ್ಳ