Asianet Suvarna News Asianet Suvarna News

ನಿಮ್ಮೆಲ್ಲರ ಪ್ರೀತಿ, ವಿಶ್ವಾಸದಿಂದ ಉತ್ಸಾಹ ದುಪ್ಪಟ್ಟಾಗಿದೆ: ಡಾ. ವೀರೇಂದ್ರ ಹೆಗ್ಗಡೆ

ಪಾದಯಾತ್ರೆಯು ಪ್ರತಿ ವರ್ಷ ವಿಶೇಷತೆಯಿಂದ ಕೂಡಿರುವುದು ಸಂತಸ ತಂದಿದೆ. ಸಮಸ್ಯೆಗಳು ಬಂದಾಗ ಬೆನ್ನು ತೋರಿಸದೆ ಎದುರಿಸಿರುವುದರಿಂದ ಮತ್ತು ನನ್ನ ಗುರಿ ಉದ್ದೇಶ ಸ್ಪಷ್ಟವಾಗಿದ್ದರಿಂದ ಅದು ನನ್ನನ್ನು ರಾಜ್ಯಸಭಾ ಸದಸ್ಯತ್ವದವರೆಗೆ ತಂದು ನಿಲ್ಲಿಸಿದೆ. ಇದು ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವೇ ಆಗಿದೆ ಎಂದ ವೀರೇಂದ್ರ ಹೆಗ್ಗಡೆ 

Dr Veerendra Heggade Talks Over Devotees Padayatra grg
Author
First Published Nov 20, 2022, 3:30 AM IST

ಬೆಳ್ತಂಗಡಿ(ನ.19): ಸಾಮರಸ್ಯದ ಬಾಳನ್ನು ಎತ್ತರಕ್ಕೆ ಕೊಂಡೊಯ್ಯುವ ಪ್ರಯತ್ನದಿಂದ ಭೇದ ಅಳಿಸಬಹುದು. ನಿಮ್ಮೆಲ್ಲರ ಅಂತಃಕರಣ ಪ್ರೀತಿ ವಿಶ್ವಾಸದಿಂದ ನನ್ನ ಉತ್ಸಾಹ ದುಪ್ಪಟ್ಟಾಗಿದೆ ಎಂದು ಧರ್ಮಾಧಿಕಾರಿ, ರಾಜಸಭಾ ಸದಸ್ಯ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ, ಶನಿವಾರ ಉಜಿರೆಯಿಂದ ಧರ್ಮಸ್ಥಳದವರೆಗೆ ನಡೆದ 10 ನೇ ವರ್ಷದ ಪಾದಯಾತ್ರೆಯ ಯಾತ್ರಿಕರನ್ನುದ್ದೇಶಿಸಿ ಅವರು ಮಾತನಾಡಿದರು.

ಪಾದಯಾತ್ರೆಯು ಪ್ರತಿ ವರ್ಷ ವಿಶೇಷತೆಯಿಂದ ಕೂಡಿರುವುದು ಸಂತಸ ತಂದಿದೆ. ಸಮಸ್ಯೆಗಳು ಬಂದಾಗ ಬೆನ್ನು ತೋರಿಸದೆ ಎದುರಿಸಿರುವುದರಿಂದ ಮತ್ತು ನನ್ನ ಗುರಿ ಉದ್ದೇಶ ಸ್ಪಷ್ಟವಾಗಿದ್ದರಿಂದ ಅದು ನನ್ನನ್ನು ರಾಜ್ಯಸಭಾ ಸದಸ್ಯತ್ವದವರೆಗೆ ತಂದು ನಿಲ್ಲಿಸಿದೆ. ಇದು ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವೇ ಆಗಿದೆ ಎಂದರು. ಸಹಬಾಳ್ವೆ, ಸಾಮರಸ್ಯ, ಸಹಜೀವನಕ್ಕೆ ಕ್ಷೇತ್ರದ ಆಡಳಿತ ಆದ್ಯತೆ ನೀಡಿದೆ. ಇಲ್ಲಿ ಭಕ್ತರೊಳಗೆ ಭೇದ ಮಾಡುವ ಪ್ರಶ್ನೆಯೇ ಉದ್ಭವಿಸದು. ಒತ್ತಡಗಳು ಸ್ವಾಭಾವಿಕವಾಗಿ ಬಂದಿವೆ. ಅದನ್ನು ಸ್ವಾಭಾವಿಕವಾಗಿಯೇ ಎದುರಿಸಿದ್ದೇನೆ ಎಂದರು. ಸಮಾಜದಲ್ಲಿನ ಬಡತನ ಹೋಗಲಾಡಿಸಲು ಗ್ರಾಮಾಭಿವೃದ್ಧಿ ಯೋಜನೆ, ಆಪತ್ತು ನಿರ್ವಹಣೆ ಮಾಡಲು ಶೌರ್ಯ ತಂಡ ಮೊದಲಾದ ಸೇವೆ ಮಾಡುವ ಅವಕಾಶ ನಮ್ಮದಾಗಿದೆ. ಇದೆಲ್ಲವೂ ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಶ್ರದ್ಧೆ ಯ ಫಲ ಎಂದು ಡಾ. ಹೆಗ್ಗಡೆ ಹೇಳಿದರು.

'ಕಾಂತಾರ' ಮೂಡ್‌ನಿಂದ ಹೊರಬಂದಿಲ್ಲ ಎಂದ ವೀರೇಂದ್ರ ಹೆಗ್ಗಡೆ..!

ವಿಧಾನ ಪರಿಷತ್‌ ಸದಸ್ಯರಾದ ಹರೀಶ್‌ ಕುಮಾರ್‌, ಪ್ರತಾಪಸಿಂಹ ನಾಯಕ್‌ ಮಾತನಾಡಿದರು.

ಡಾ. ಹೇಮಾವತಿ ವೀ. ಹೆಗ್ಗಡೆ, ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ ಉಪಸ್ಥಿತರಿದ್ದರು. ಶಾಸಕ ಹರೀಶ್‌ ಪೂಂಜ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮತನಾಡಿ, ಇಂದಿನ ಪಾದಯಾತ್ರೆ ವಿಶೇಷ ಶಕ್ತಿ ಸಂಭ್ರಮವನ್ನು ತಂದು ಕೊಟ್ಟಿದೆ ಎಂದರು. ಗ್ರಾಮಾಭಿವೃದ್ಧಿ ಯೋಜನೆಯ ಅನಿಲ್‌ ಕುಮಾರ್‌ ವಂದಿಸಿದರು. ಶ್ರೀನಿವಾಸ್‌ ರಾವ್‌ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮೊದಲು ವೇದಿಕೆಯಲ್ಲಿ ಭಗವಾನ್‌ ಶಿರಡಿಬಾಬಾ ಸತ್ಯಸಾಯಿ ಸೇವಾ ಕ್ಷೇತ್ರದ ಹಳೇಕೊಟೆ, ಬೆಳ್ತಂಗಡಿ ತಂಡದವರಿಂದ ಭಜನಾ ಸತ್ಸಂಗ ನೆರವೇರಿತು.

ವೈವಾಹಿಕ ಜೀವನದ ಐವತ್ತನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಹೆಗ್ಗಡೆ ದಂಪತಿಗೆ ಸುಮಂಗಲಿಯರು ಆರತಿ ಹಾಡಿನೊಂದಿಗೆ ಆರತಿ ಬೆಳಗಿದರು. ಪಾದಯಾತ್ರಾ ಸಮಿತಿಯಿಂದ ಹೆಗ್ಗಡೆ ದಂಪತಿಗೆ ಬೃಹತ್‌ ಹಾರ ತೊಡಿಸಿದರಲ್ಲದೆ ಯಕ್ಷಗಾನದ ಸುಂದರವಾದ ಬಾಲಗೋಪಾಲ ಪ್ರತಿಕೃತಿಯನ್ನು ನೀಡಿ ಗೌರವಿಸಲಾಯಿತು.

ಭಾರತವನ್ನು ವಿಶ್ವದಲ್ಲಿ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಸಮರ್ಥ ಪ್ರಧಾನಿಯನ್ನು ನಾವು ಪಡೆದಿದ್ದೇವೆ. ಅಪೂರ್ವ, ಆಶ್ಚರ್ಯಕರ ನಿರ್ಣಯಗಳನ್ನು ತೆಗೆದುಕೊಳ್ಳುವ ಅವರ ಶಕ್ತಿ ವಿಶೇಷವಾದದ್ದು ಎಂದು ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.
 

Follow Us:
Download App:
  • android
  • ios