ತಿಪಟೂರು(ಜು.20): ಕೊರೋನಾ ವೈರಸ್‌ ತಡೆಗಟ್ಟಬೇಕಾದರೆ ಮನುಷ್ಯ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಸ್ಥಳೀಯ ಆಹಾರ ಪದಾರ್ಥಗಳ ಸೇವನೆ ಮತ್ತು ಮನೆಮದ್ದಿನಂತಹ ಕಷಾಯ ಬಳಕೆಯಿಂದ ಕೊರೋನಾ ಬಾರದಂತೆ ತಡೆಗಟ್ಟಲು ಸಾಧ್ಯ ಎಂದು ತಾಲೂಕು ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಉದಯ್‌ಕುಮಾರ್‌ ಜೋಶಿ ತಿಳಿಸಿದ್ದಾರೆ. 

ನಗರದ ಕಲ್ಪತರು ಕಾಲೇಜಿನ ಆಡಿಟೋರಿಯಂನಲ್ಲಿ ಪೊಲೀಸ್‌ ಇಲಾಖೆ ಮತ್ತು ಆಯುಷ್‌ ಇಲಾಖೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕೋವಿಡ್‌-19 ವೈರಸ್‌ ತಡೆಗಟ್ಟುವ ಕುರಿತು ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಿ ಕಿಟ್‌ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತೀಯರಾದ ನಾವು ಮನೆಮದ್ದು ಕಷಾಯ ಬಳಕೆಯಿಂದ ಕೊರೋನಾ ಬಾರದಂತೆ ತಡೆಗಟ್ಟಲು ಸಾಧ್ಯವಿದೆ. ಪ್ರತಿ ನೂರು ವರ್ಷಗಳಿಗೊಮ್ಮೆ ಇಂತಹ ಮಹಾಮಾರಿ ಕಾಯಿಲೆಗಳು ಜಗತ್ತಿಗೆ ಬರುತ್ತವೆ. ಅದರಲ್ಲಿ ಕೊರೋನಾ ವೈರಸ್‌ ಪ್ರಭಾವಶಾಲಿಯಾಗಿದ್ದು ಮೊದಲು ಮನುಷ್ಯ ತನ್ನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಿದ್ದು ಆಯುರ್ವೇದ ಔಷಧ ಬಳಕೆಯಿಂದ ಕೊರೊನಾ ತಡೆಗಟ್ಟಬಹುದಾಗಿದ್ದು ಯೋಗ, ಧ್ಯಾನ ಪ್ರಾಣಾಯಾಮಕ್ಕೆ ಹೆಚ್ಚು ಒತ್ತು ನೀಡಬೇಕೆಂದರು.

ಎಲ್ಲಿ ನೋಡಿದ್ರೂ ಗಿಜಿ-ಗಿಜಿ ಅಂತಾರೆ: ಕೊರೋನಾ ರೋಗಿಗಳನ್ನ ಹೀಯಾಳಿಸಿದ ಸಚಿವ ಸೋಮಣ್ಣ

ಕೊನೇಹಳ್ಳಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸುಮನಾ ಮಾತನಾಡಿ ದಿನದಿಂದ ದಿನಕ್ಕೆ ಕೊರೋನಾ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ನಮ್ಮಲ್ಲಿ ಜಾಗೃತಿ ಅವಶ್ಯಕವಿದೆ. ಪರಿಶುದ್ಧ ಆಹಾರ, ಅರಿಶಿನಪುಡಿ, ಮೆಣಸು, ಶುಂಠಿ, ಬೆಳ್ಳುಳ್ಳಿ, ಬೇವಿನ ಸೊಪ್ಪಿನ ಕಷಾಯ ಮುಂತಾದವುಗಳಿಂದ ಕೊರೋನಾಗೆ ಮನೆಯಲ್ಲಿಯೇ ಔಷಧಿ ತಯಾರಿಸಿಕೊಳ್ಳಬಹುದೆಂದು ಮಾಹಿತಿ ನೀಡಿದರು.

ಡಿವೈಎಸ್‌ಪಿ ಚಂದನ್‌ಕುಮಾರ್‌ ಮಾತನಾಡಿ, ರಾಜ್ಯದಲ್ಲಿ ಇನ್ನೂರಕ್ಕೂ ಹೆಚ್ಚು ಪೊಲೀಸರಿಗೆ ಕೊರೋನಾ ಬಂದಿದ್ದು, ಅನೇಕರು ಗುಣಮುಖರಾಗಿದ್ದಾರೆ. ಪೊಲೀಸರ ಒತ್ತಡದ ಜೀವನದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಪ್ರತಿನಿತ್ಯ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಸಾಮಾಜಿಕ ಅಂತರ, ಮಾಸ್ಕ್‌ ಧರಿಸುವುದು ಜೊತೆಗೆ ಜನತೆಯಲ್ಲಿ ಜಾಗೃತಿ ಮುಡಿಸುವ ಕೆಲಸವನ್ನು ನಾವೆಲ್ಲೂ ಮಾಡೋಣ ಎಂದರು.

ಈ ಸಂದರ್ಭದಲ್ಲಿ ತಿಪಟೂರು ನಗರಠಾಣೆ, ಗ್ರಾಮಾಂತರ ಹಾಗೂ ಚಿಕ್ಕನಾಯಕನಹಳ್ಳಿಯ 8 ಠಾಣೆಯ 250ಕ್ಕೂ ಹೆಚ್ಚು ಪೋಲೀಸ್‌ ಸಿಬ್ಬಂದಿಗಳಿಗೆ ಆಯರ್ವೇದ ಔಷಧಿ ಕಿಟ್‌ಗಳನ್ನು ನೀಡಲಾಯತು. ಡಾ. ಹೇಮರಾಜು, ಜನಾರ್ಧನ ಆಸ್ಪತ್ರೆ ಸಿಬ್ಬಂದಿಗಳಾದ ತಿಮ್ಮೇಗೌಡ, ದೇವರಾಜ್‌, ಸಿಪಿಐ ಜಯಲಕ್ಷಿ, ಶಿವಕುಮಾರ್‌, ಎಸ್‌ಐ ದ್ರಾಕ್ಷಾಯಿಣಿ ಮತ್ತಿತರರಿದ್ದರು.