Asianet Suvarna News Asianet Suvarna News

ಚಿಕ್ಕೋಡಿ: ಗಡಿಭಾಗದ ಸಮಸ್ಯೆ ಅರಿತು ಕೆಲಸ ಮಾಡಿ, ಡಾ.ಪ್ರಭಾಕರ ಕೋರೆ

ಬೇರೆ ರಾಜ್ಯದವರ ಕುತಂತ್ರದಿಂದ ಕನ್ನಡ ಶಿಕ್ಷಣ ಕೊಲೆ, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ.ಪ್ರಭಾಕರ ಕೋರೆ ಅಭಿಪ್ರಾಯ

Dr Prabhakar Kore Talks Over Border Problems grg
Author
First Published Dec 23, 2022, 10:30 PM IST

ಚಿಕ್ಕೋಡಿ(ಡಿ.23): ನಮ್ಮ ಕನ್ನಡ ನೆಲ, ಜಲ ಉಳಿಯಬೇಕಾದರೇ ಇಲ್ಲಿನ ಸಾಹಿತಿಗಳ ಪಾತ್ರ ಬಹಳ ಮುಖ್ಯ. ಸಾಹಿತ್ಯ ಪರಷತ್ತ ರಾಜ್ಯಾಧ್ಯಕ್ಷರಿಗೆ ಸಚಿವ ಸ್ಥಾನ, ಮಾನ ಸರ್ಕಾರ ನೀಡಿದೆ. ಅವರು ಗಡಿಭಾಗದಲ್ಲಿ ಸಂಚರಿಸಿ ಇಲ್ಲಿನ ಸಮಸ್ಯೆಗಳ ಬಗ್ಗೆ ಅರಿತುಕೊಂಡು ಕೆಲಸ ಮಾಡಲು ಮಾರ್ಗದರ್ಶನ ಮಾಡಬೇಕು. ಆದರೆ ,ಅದು ಆಗುತ್ತಿಲ್ಲ. ಬೇರೆ ರಾಜ್ಯದವರು ಕುತಂತ್ರದಿಂದ ಕನ್ನಡ ಶಿಕ್ಷಣ ಕೊಲೆ ಮಾಡುತ್ತಿದ್ದಾರೆ ಎಂದು ಮಾಜಿ ರಾಜ್ಯಸಭೆ ಸದಸ್ಯರು, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ನಗರದ ಸಿಎಲ್‌ಇ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಯುತ್ತ ಬಂದಿದ್ದರೂ ಕನ್ನಡದ ಕಿಚ್ಚು ಹೆಚ್ಚುತ್ತಲೇ ಬಂದ ಪರಿಣಾಮವಾಗಿ ಅಖಂಡ ಕರ್ನಾಟಕ ನಿರ್ಮಾಣ ಸಾಧ್ಯವಾಗಿದೆ ಎಂದರು.

ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚು ಅನ್ಯಾಯ: ಪ್ರಭಾಕರ ಕೋರೆ

ಹಿರಿಯ ಸಾಹಿತಿ ಚಂದ್ರ ಶೇಖರ ಅಕ್ಕಿ ಮಾತನಾಡಿ, ಕನ್ನಡವನ್ನು ಪ್ರಥಮ ಭಾಷೆಯಾಗಿ ಅನುಷ್ಠಾನಕ್ಕೆ ತರಲು ಸರ್ಕಾರ ಕಾನೂನು ರೂಪಿಸಿ ಅದರ ಮೂಲಕವೇ ಕನ್ನಡ ಉಳಿಸಬೇಕು. ಕನ್ನಡವೇ ಸಾರ್ವಭೌಮ ಭಾಷೆಯಾಗಿ ಜಾರಿಗೊಳಿಸಬೇಕು ಎಂದರು.

ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಳ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಚರ್ಚೆಯಾಗಬೇಕು. ಕೃಷ್ಣಾ ಬಚಾವತ್‌ ತೀರ್ಪಿನ ಪ್ರಕಾರ ನಮ್ಮ ನೀರನ್ನು ಬಳಕೆ ಮಾಡಿಕೊಳ್ಳಲು ಕ್ರಮಕೈಗೊಳ್ಳಬೇಕು. ನನೆಗುದಿಗೆ ಬಿದ್ದಿರುವ ಗಡಿಭಾಗದ ಏತ ನೀರಾವರಿ ಯೋಜನೆಗಳಿಗೆ ಈ ಅಧಿವೇಶನದಲ್ಲಿ ಚಾಲನೆ ನೀಡಬೇಕು ಎಂದು ಆಗ್ರಹಿಸಿದರು.

ಸಮ್ಮೇಳನಾಧ್ಯಕ್ಷರು ಹಾಗೂ ಚಿಂಚಣಿಮಠದ ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ, ಕರ್ನಾಟಕದ ಭವಿಷ್ಯದ ಬೆಳಕು ಇಂದಿನ ವಿದ್ಯಾರ್ಥಿಗಳು ಅವರು ಕೆಎಲ್‌ಇ ಯಂತಹ ಸಂಸ್ಥೆಯಲ್ಲಿ ಕಲಿತು ಇಂದು ಏಷಿಯಾ ಮಟ್ಟಕ್ಕೆ ಬೆಳೆದು ನಿಂತಿರುವ ಕೃತ್ರತ್ವ ಶಕ್ತಿಯಾಗಿರುವ ಡಾ.ಪ್ರಭಾಕರ ಕೋರೆ ಅವರ ಹಾಗೆ ಇಂದು ಯುವ ಪೀಳಿಗೆ ಶಿಕ್ಷಣ ಪಡೆಯಬೇಕು ಎಂದು ನುಡಿದರು. ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾಧ್ಯಕ್ಷರಾದ ಮಂಗಳಾ ಮೆಟಗುಡ್ಡ ಮಾತನಾಡಿ, ಕರ್ನಾಟಕದಲ್ಲಿರುವ ಪ್ರತಿಯೊಬ್ಬರು ಕನ್ನಡ ಭಾವುಟಕ್ಕೆ ಗೌರವ ಸೂಚಿಸಬೇಕು. ಮಹಾಜನ್‌ ವರದಿ ಜಾರಿಯಾಗಬೇಕು. ಇಲ್ಲವಾದಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಹೋಗಬೇಕು ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಪ್ರಭಾಕರ ಕೋರೆ: ಸಿಎಂ ಬೊಮ್ಮಾಯಿ

ಚಿಕ್ಕೋಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಕಟ್ಟಡ ಆಗಬೇಕು.ಇದಕ್ಕೆ ಈಗಾಗಲೇ ಚಿಕ್ಕೋಡಿ ಪುರಸಭೆ 10 ಗುಂಟೆ ಜಮೀನು ನೀಡಿದ್ದಾರೆ. ಕಟ್ಟಡ ನಿರ್ಮಾನಕ್ಕೆ .1.5 ಕೋಟಿಗಳ ಅನುದಾನ ನೀಡಬೇಕೆಂದು ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ನೀಡಲಾಗಿದೆ. ಅದನ್ನು ಗಡಿಅಭಿವೃದ್ಧಿ ಪ್ರಾಧಿಕಾರದ ಮೂಲಕ ನಿರ್ಮಿಸಬೇಕು. ಗಡಿಭಾಗದಲ್ಲಿ ಕನ್ನಡ ಶಾಲೆಗಳನ್ನು ಪ್ರಾರಂಭಿಸಿ ಅವುಗಳಿಗೆ ಮೂರು ವರ್ಷದೊಳಗೆ ಅನುದಾನ ನೀಡಬೇಕು ಎಂದು ತಿಳಿಸಿದರು.
ಚಿಕ್ಕೋಡಿ ಸಂಪಾದನಾ ಮಹಾಸ್ವಾಮಿಗಳು, ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಭರತ ಬನವಣೆ, ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಡಾ.ದಯಾನಂದ ನೂಲಿ, ಮಹಾಂತೇಶ ಮೆಣಸಿನಕಾಯಿ, ಜಿಲ್ಲೆಯ 15 ತಾಲೂಕು ಅಧ್ಯಕ್ಷರು, ಹಿರಿಯ ಸಾಹಿತಿಗಳು, ಗಣ್ಯರು ಉಪಸ್ಥಿತರಿದ್ದರು. ಕಸಾಪ ತಾಲೂಕು ಅಧ್ಯಕ್ಷ ಡಾ.ಸುರೇಶ ಉಕ್ಕಲಿ ಸ್ವಾಗತಿಸಿದರು. ಸುಧೀರ ಡೋಣವಾಡೆ, ಶಂಕರ ಎಂಟೆತ್ತಿನವರ ನಿರೂಪಿಸಿದರು. ಎಂ.ವೈ.ಮೆಣಸಿನಕಾಯಿ ವಂದಿಸಿದರು.

ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಉತ್ತರ ಕರ್ನಾಟಕ ಜನತೆಯ ಪಾತ್ರ ಬಹುಮುಖ್ಯವಾಗಿದೆ. ಗಡಿ ಭಾಗದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿಕೊಂಡವರು. ಅಖಂಡ ಕರ್ನಾಟಕ ಕನಸು ಕಂಡವರು ನಮ್ಮ ಪೂರ್ವಜರು, ಹಿರಿಯರು, ಹಿಂದಿನ ದಿನಗಳಲ್ಲಿ ಮೈಸೂರು ಪ್ರಾಂತದವರಿಗೆ ಮೈಸೂರು ಬೇಕಾಗಿತ್ತು. ಆದರೆ, ಉತ್ತರ ಕರ್ನಾಟಕದಲ್ಲಿನ ಜನ ಅಖಂಡ ಕರ್ನಾಟಕ ಕನಸು ಕಂಡವರು. ಸರ್ಕಾರದ ಆಡಳಿತದಲ್ಲಿ ಕನ್ನಡ ಉಳಿಯಬೇಕು. ಆಗ ಕನ್ನಡ ಉಳಿಯಲು ಸಾಧ್ಯ ಅಂತ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ಮಾಜಿ ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ ತಿಳಿಸಿದ್ದಾರೆ. 

Follow Us:
Download App:
  • android
  • ios