Asianet Suvarna News Asianet Suvarna News

ವಿಜ್ಞಾನ-ಆಧ್ಯಾತ್ಮಿಕತೆ ಎರಡೂ ಒಂದಕ್ಕೊಂದು ಪೂರಕ: ಚುಂಚಶ್ರೀ

ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಎರಡೂ ಒಂದಕ್ಕೊಂದು ಪೂರಕ| ವಿಜ್ಞಾನ ಮತ್ತು ತಂತ್ರಜ್ಞಾನವೂ ಇದ್ದು ಅದರ ಮಧ್ಯೆ ಜ್ಞಾನವೂ ಇರಬೇಕು| ಜ್ಞಾನದಲ್ಲಿ ಆಧ್ಯಾತ್ಮಿಕತೆ ಮಿಳಿತವಾಗಿರಬೇಕು|  ಬದುಕು ಭಗವಂತನ ಸೃಷ್ಟಿ. ಒಮ್ಮೆ ಬದುಕನ್ನು ಕಳೆದುಕೊಂಡರೆ ಪುನಾ ಸರಿಪಡಿಸಲು ಕಷ್ಟಸಾಧ್ಯ| 

Dr Nirmalanandnath Swamiji Talks Over Science Spiritualitygrg
Author
Bengaluru, First Published Oct 1, 2020, 3:33 PM IST
  • Facebook
  • Twitter
  • Whatsapp

ಬೆಂಗಳೂರು(ಅ.01): ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಆಧ್ಯಾತ್ಮಿಕ ಜ್ಞಾನದ ಸಂಗಮವೂ ಉಂಟಾದಲ್ಲಿ ಬದುಕು ಸುಂದರವಾಗುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಬುಧವಾರ ಆಯೋಜಿಸಿದ್ದ ‘12ನೇ ಆವೃತ್ತಿಯ ಮಂಥನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಎರಡೂ ಒಂದಕ್ಕೊಂದು ಪೂರಕ. ವಿಜ್ಞಾನ ಮತ್ತು ತಂತ್ರಜ್ಞಾನವೂ ಇದ್ದು ಅದರ ಮಧ್ಯೆ ಜ್ಞಾನವೂ ಇರಬೇಕು. ಜ್ಞಾನದಲ್ಲಿ ಆಧ್ಯಾತ್ಮಿಕತೆ ಮಿಳಿತವಾಗಿರಬೇಕು. ಬದುಕು ಭಗವಂತನ ಸೃಷ್ಟಿ. ಒಮ್ಮೆ ಬದುಕನ್ನು ಕಳೆದುಕೊಂಡರೆ ಪುನಾ ಸರಿಪಡಿಸಲು ಕಷ್ಟಸಾಧ್ಯ. ಹೀಗಾಗಿ ಸಾಧಕರ ಸಾಧನೆಗಳನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಬದುಕನ್ನು ಎಲ್ಲರೂ ಕಟ್ಟಿಕೊಳ್ಳಬೇಕು ಎಂದರು.

ಸೆ.15 ಅನ್ನು ಎಂಜಿನಿಯ​ರ್ಸ್‌ ದಿನಾಚರಣೆಯಾಗಿ ಅಚರಿಸುತ್ತೇವೆ. ಸರ್‌ ಎಂ.ವಿಶ್ವೇಶ್ವರಯ್ಯ ಅವರು 99 ವರ್ಷದವರಿದ್ದಾಗ ಯುವ ಪತ್ರಕರ್ತನೊಬ್ಬ ಸರ್‌, ನಿಮ್ಮ 100ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಭರವಸೆ ಇಟ್ಟುಕೊಳ್ಳಬಹುದಾ ಎಂದಿದ್ದನಂತೆ. ಆಗ ವಿಶ್ವೇಶ್ವರಯ್ಯನವರು, ‘ಡಿಯರ್‌ ಡು ಯು ಹ್ಯಾವ್‌ ಆ್ಯನ್‌ ಎ ಹೆಲ್ತ್‌ ಇಶ್ಯೂ’ ಅಂತ ಮರು ಪ್ರಶ್ನಿಸಿದ್ದರಂತೆ. ಪ್ರಸ್ತುತ ದಿನಗಳಲ್ಲಿ 20-30 ವರ್ಷಕ್ಕೆ ಬದುಕಿನ ಉತ್ಸಾಹ ಕಳೆದುಕೊಂಡಿರುವವರಿಗೆ ವಿಶ್ವೇಶ್ವರಯ್ಯನವರು ಹುಟ್ಟು ಹಾಕಿದ ಎಫ್‌ಕೆಸಿಸಿಐ ಸಂಸ್ಥೆ ಸ್ಫೂರ್ತಿಯಾಗಿದೆ ಎಂದು ಹೇಳಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಶ್ರೀಗಳಿಗೆ ಹುಟ್ಟುಹಬ್ಬದ ಸಂಭ್ರಮ

ಕರ್ಮಜೀವಿ ವಿಶ್ವೇಶ್ವರಯ್ಯನವರ ಸಾಧನೆ ವಿಶೇಷವಾದುದು. ಅವರ ಪ್ರಕಾರ, ಕೈಗಾರಿಕೆಗಳ ನಾಶ ದೇಶದ ವಿನಾಶಕ್ಕೆ ಕಾರಣವಾಗುತ್ತದೆ. ಕೈಗಾರಿಕೆಗಳ ಅಭಿವೃದ್ಧಿಯಿಂದ ದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯ. ಹೀಗಾಗಿ ಇಂದು ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಕೈಗಾರಿಕೆಗಳು ಫಲ ನೀಡುತ್ತಿದೆ. ವಿಶ್ವೇಶ್ವರಯ್ಯನವರು ಹಾಕಿಕೊಟ್ಟಿರುವ ದಾರಿಯಲ್ಲಿ ನಡೆಯುವವರ ಜೀವನವೂ ಸುಂದರವಾಗಿರುತ್ತದೆ ಎಂದರು.

‘ಮಂಥನ’ ಕಾರ್ಯಕ್ರಮದ ಅಧ್ಯಕ್ಷ ಡಾ. ಬಿ.ಅಮರ್‌ನಾಥ್‌ ಮಾತನಾಡಿ, ಮಂಥನ ಯೋಜನೆಯು ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಜ್ಞಾನವನ್ನು ಹೊರತರುವ ವಿನೂತನ ಕಾರ್ಯಕ್ರಮವಾಗಿದೆ. ಈ ವರ್ಷ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ನವೋದ್ಯಮದ ಯೋಜನೆಗಳನ್ನು ಮಂಡಿಸಿದ್ದಾರೆ. ಇದರಲ್ಲಿ 16 ವ್ಯವಹಾರಿಕ ಯೋಜನೆಗಳನ್ನು ಆಯ್ಕೆಗೊಳಿಸಲಾಗಿದ್ದು, ಈ ಪೈಕಿ ಮೂವರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನೀಡಲಾಗುತ್ತಿದೆ. ಒಟ್ಟಾರೆ 3 ಲಕ್ಷ ಬಹುಮಾನ ಕೊಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರು, ಮಂಥನ ಯೋಜನೆಯಡಿ ಆಯ್ಕೆಯಾದ ವಿವಿಧ ಕಾಲೇಜಿನ ತಂಡದವರಿಗೆ ಬಹುಮಾನ ವಿತರಿಸಿದರು. ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್‌.ಜನಾರ್ದನ್‌, ಉಪಾಧ್ಯಕ್ಷರಾದ ಪೆರಿಕಲ್‌ ಎಂ.ಸುಂದರ್‌, ಪ್ರಸಾದ್‌, ಮಾಜಿ ಅಧ್ಯಕ್ಷ ಸುಧಾಕರ್‌ ಎಸ್‌.ಶೆಟ್ಟಿಇನ್ನಿತರರು ಇದ್ದರು.
 

Follow Us:
Download App:
  • android
  • ios