ಬೆಂಗಳೂರು(ಫೆ.05): ಯೋಗ ಮತ್ತು ನ್ಯಾಚುರೋಪತಿಯನ್ನು ಭಾರತೀಯ ಔಷಧ ಪದ್ಧತಿಯ ರಾಷ್ಟ್ರೀಯ ಆಯೋಗಕ್ಕೆ ಸೇರಿಸಲು ಆಗ್ರಹಿಸಿ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಎಚ್.ಆರ್. ನಾಗೇಂದ್ರಜಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. 

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಭಾರತೀಯ ಯೋಗ ಹಾಗೂ ಪ್ರಕೃತಿ ಚಿಕಿತ್ಸಾ ವೈದ್ಯಕೀಯ ಪದವೀಧರರ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ನವೀನ್‌ ಕೆ. ವಿ. ಅವರು, ಪ್ರಧಾನಮಂತ್ರಿ ಕಾರ್ಯಾಲಯ  ತಕ್ಷಣ ಮಧ್ಯಪ್ರವೇಶಿಸಿ ದೇಶಾದ್ಯಂತ ಇರುವ ಯೋಗ ಮತ್ತು ನ್ಯಾಚುರೋಪತಿ ಶಿಕ್ಷಣ ಸಂಸ್ಥೆಗಳು, ಸಾವಿರಾರು ವೈದ್ಯರುಗಳ ಭವಿಷ್ಯ ಹಾಗೂ ವೈದ್ಯಕೀಯ ಪದ್ಧತಿಯನ್ನು ಉಳಿಸಲು ಶೀಘ್ರದಲ್ಲಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೇಂದ್ರ ಸರ್ಕಾರ ಯೋಗ ಸೇರಿದಂತೆ ನ್ಯಾಚುರೋಪತಿಗೆ ವಿಶೇಷ ಆದ್ಯತೆ ನೀಡದಿದ್ದರೂ, ಶೈಕ್ಷಣಿಕ ವ್ಯವಸ್ಥೆಯಲ್ಲಾಗಿರುವ ನ್ಯೂನ್ಯತೆಯನ್ನು ಸರಿ ಮಾಡದೇ ಇರುವುದು ದುರದುಷ್ಟಕರ ಸಂಗತಿ ಎಂದು ಹೇಳಿದ್ದಾರೆ. 

ಯೋಗವನ್ನು ಮುಂಡಿಟ್ಟುಕೊಂಡು ಭಾರತ ವಿಶ್ವಗುರು ಆಗುತ್ತಿರುವ ಈ ಸಂದರ್ಭದಲ್ಲಿ, ಕೇಂದ್ರ ಸರ್ಕಾರ ವಿಶೇಷ ಆಸಕ್ತಿಯ ಹೊರತಾಗಿಯೂ ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ ಸೂಕ್ತ ಶೈಕ್ಷಣಿಕೆ ಮಾನ್ಯತೆ ಹಾಗೂ ವೈದ್ಯರುಗಳ ರಾಷ್ಟ್ರೀಯ ವೈದ್ಯಕೀಯ ಪರವಾನಿಗೆ ನೀಡುವ ಸದಾವಕಾಶವನ್ನ ಕಳೆದುಕೊಳ್ಳುತ್ತಿರುವುದು ದುರದುಷ್ಟಕರ ಬೆಳವಣಿಗೆ ಎನ್ನುವುದು ನಮ್ಮೆಲ್ಲರ ಆತಂಕವಾಗಿದೆ ಎಂದು ತಿಳಿಸಿದ್ದಾರೆ. 

ಮೌನ ಹಾಗೂ ಉಪವಾಸ ಸತ್ಯಾಗ್ರಹ 

ಯೋಗ ಮತ್ತು ನ್ಯಾಚುರೋಪತಿಯನ್ನು ಭಾರತೀಯ ಔಷಧ ಪದ್ಧತಿಯ ರಾಷ್ಟ್ರೀಯ ಆಯೋಗಕ್ಕೆ ಸೇರಿಸುವಂತೆ ಒತ್ತಾಯಿಸಿ ದೇಶದ 42 ವಿದ್ಯಾಸಂಸ್ಥೆಗಳು ಒಟ್ಟಾಗಿ ಫೆ. 12ರಂದು ಒಂದು ದಿನದ ಮೌನ ಹಾಗೂ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ. ಅಂದು ಎಲ್ಲಾ ಫಲಾನುಭವಿಗಳು ಹಾಗೂ ಇವುಗಳನ್ನ ಪ್ರೋತ್ಸಾಹಿಸುವ ವಿವಿಧ ಸಂಘ ಸಂಸ್ಥೆಗಳು ಈ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿವೆ ಎಂದು ಹೇಳಿದ್ದಾರೆ.