ಡಾ.ಕೃಷ್ಣಮೂರ್ತಿ ನಿಗೂಢ ಸಾವು: ಕರ್ನಾಟಕದಲ್ಲೂ ತನಿಖೆ
- ಡಾ.ಕೃಷ್ಣಮೂರ್ತಿ ನಿಗೂಢ ಸಾವು: ಕರ್ನಾಟಕದಲ್ಲೂ ತನಿಖೆ
- ಮುಸ್ಲಿಂ ಲ್ಯಾಂಡ್ ಜಿಹಾದ್‌ಗೆ ವೈದ್ಯರು ಬಲಿಯಾದರೇ?, ಎನ್‌ಐಎ ತನಿಖೆಗೆ ಹಿಂದೂ ಸಂಘಟನೆಗಳ ಪಟ್ಟು
ಮಂಗಳೂರು (ನ.12) ಕಾಸರಗೋಡಿನ ಬದಿಯಡ್ಕದ ದಂತ ವೈದ್ಯ ಡಾ.ಕೃಷ್ಣಮೂರ್ತಿ ನಿಗೂಢ ಸಾವಿಗೆ ಸಂಬಂಧಿಸಿ ಕರ್ನಾಟಕದಲ್ಲೂ ಪ್ರತ್ಯೇಕ ಕೇಸು ದಾಖಲಾಗಲಿದೆ. ಕುಂದಾಪುರದಲ್ಲಿ ವೈದ್ಯರ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸುವಂತೆ ವೈದ್ಯರ ಕುಟುಂಬಸ್ಥರು ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗೆ ಶನಿವಾರ ದೂರು ನೀಡಿದ್ದಾರೆ.
ಶನಿವಾರ ಮಂಗಳೂರಿಗೆ ಆಗಮಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿದ ಕುಟುಂಬಸ್ಥರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ವೈದ್ಯರು ಆತ್ಮಹತ್ಯೆ ಮಾಡಿಕೊಂಡದ್ದಲ್ಲ, ಅದೊಂದು ಕೊಲೆ ಎಂದು ಗೃಹ ಸಚಿವರಿಗೆ ನೀಡಿದ ದೂರಿನಲ್ಲಿ ವೈದ್ಯರ ಪುತ್ರಿ ಡಾ.ವರ್ಷಾ ಆರೋಪಿಸಿದ್ದಾರೆ. ಹೀಗಾಗಿ ಶವ ಕುಂದಾಪುರದಲ್ಲಿ ಪತ್ತೆಯಾದ ಕಾರಣ ಉಡುಪಿ ಎಸ್ಪಿಗೆ ದೂರು ನೀಡುವಂತೆ ಗೃಹ ಸಚಿವರು ಸೂಚಿಸಿದ್ದಾರೆ.
ಮಂಗಳೂರಿಗೆ ಆಗಮಿಸಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಕುಟುಂಬಿಕರ ಜೊತೆ ಮಂಗಳೂರಿನ ಶಾಸಕರಾದ ಡಾ.ಭರತ್ ಶೆಟ್ಟಿಮತ್ತು ವೇದವ್ಯಾಸ ಕಾಮತ್ ಘಟನೆಯ ವಿವರ ನೀಡಿದ್ದಾರೆ. ಇದೇ ವೇಳೆ ವಿಶ್ವಹಿಂದು ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ನೇತೃತ್ವದಲ್ಲಿ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಈ ಮನವಿಯಲ್ಲಿ, ವೈದ್ಯ ಡಾ.ಕೃಷ್ಣಮೂರ್ತಿ ಅವರ ಶವ ಕುಂದಾಪುರ ಬಳಿ ಬುಧವಾರ ಪತ್ತೆಯಾಗಿದೆ. ಇದೊಂದು ಕೊಲೆ ಎಂಬ ಶಂಕೆ ವ್ಯಕ್ತವಾಗಿದ್ದು, ಬದಿಯಡ್ಕ ಠಾಣೆಯಲ್ಲಿ ನಾಪತ್ತೆ ಕೇಸು ದಾಖಲಾದರೂ ಕೇರಳ ಪೊಲೀಸರ ತನಿಖೆ ಮೇಲೆ ವಿಶ್ವಾಸ ಇಲ್ಲದ ಕಾರಣ ಕುಂದಾಪುರದಲ್ಲಿ ಕೇಸು ದಾಖಲಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಕಾಸರಗೋಡಿನ ವೈದ್ಯ ನಿಗೂಢ ಸಾವು: ಕೇರಳ ಪೊಲೀಸರಿಂದ ಐವರ ಬಂಧನ
ಬಂಧಿತರಿಗೆ ನ್ಯಾಯಾಂಗ ಬಂಧನ:
ದಂತವೈದ್ಯ ಡಾ.ಕೃಷ್ಣಮೂರ್ತಿ ಸಾವಿನ ಪ್ರಕರಣದಲ್ಲಿ ಕ್ಲಿನಿಕ್‌ಗೆ ಆಗಮಿಸಿ ಹಲ್ಲೆಗೆ ಯತ್ನಿಸಿದ ಐವರು ಆರೋಪಿಗಳನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಐವರು ಆರೋಪಿಗಳಿಗೆ ಕಾಸರಗೋಡು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಸಿಸಿ ಕ್ಯಾಮರಾ ಪರಿಶೀಲನೆ:
ವೈದ್ಯರ ಬೈಕ್ ಕುಂಬಳೆಯಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿ ಬದಿಯಡ್ಕ ಪೊಲೀಸರು ಬದಿಯಡ್ಕ-ಕುಂಬಳೆ ರಸ್ತೆ ಬದಿಯ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದಾರೆ. ಕುಂಬಳೆಯಲ್ಲಿ ಕೇವಲ ಬೈಕ್ ಪತ್ತೆಯಾಗಿದ್ದು, ಅದರ ಕೀ ನಾಪತ್ತೆಯಾಗಿದೆ. ಅಲ್ಲಿ ಕೂಡ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದು, ವೈದ್ಯರು ಸಂಚರಿಸಿದ ಬಗ್ಗೆ ಸುಳಿವು ಸಿಕ್ಕಿಲ್ಲ ಎಂದು ತಿಳಿಯಲಾಗಿದೆ. ಇದೇ ರೀತಿ ಕುಂದಾಪುರ ಪೊಲೀಸರು ಕೂಡ ವೈದ್ಯರ ಶವ ಪತ್ತೆಯಾದ ರೈಲು ಹಳಿಯ ಸುತ್ತಮುತ್ತ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದಾರೆ. ವೈದ್ಯರ ಉಡುಪು ಬದಲಾದ ಬಗೆ, ಅವರಲ್ಲಿದ್ದ ಪರ್ಸ್ ಹಾಗೂ ಚಪ್ಪಲಿ ನಾಪತ್ತೆಯಾದ ಬಗ್ಗೆ ಹಾಗೂ ಅವರು ಕುಂದಾಪುರಕ್ಕೆ ಹೇಗೆ ಬಂದರು ಎಂಬ ಬಗ್ಗೆ ಕುಂದಾಪುರ ಪೊಲೀಸರು ಕೂಲಂಕಷ ತನಿಖೆ ನಡೆಸುತ್ತಿದ್ದಾರೆ.
ಕೇಸು ದಾಖಲು ಹಿಂದೇಟು ಆರೋಪ: ವೈದ್ಯರು ನಾಪತ್ತೆಯಾದ ದಿನ ಮಂಗಳವಾರವೇ ಅವರ ಕಂಪೌಂಡರ್ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಕ್ಷಿಪ್ರ ಗತಿಯಲ್ಲಿ ತನಿಖೆ ನಡೆಸುತ್ತಿದ್ದರೆ, ವೈದ್ಯರ ಸುಳಿವು ಸಿಗುವ ಸಾಧ್ಯತೆ ಅಧಿಕವಾಗಿತ್ತು. ಆದರೆ ಪೊಲೀಸರು ಕೇಸು ದಾಖಲಿಸಲು ಹಿಂದೇಟು ಹಾಕಿದ್ದಾರೆ. ಮಹಿಳೆ ದೂರು ನೀಡಿರುವುದರಿಂದ ರಾಜಿಯಲ್ಲಿ ಮುಕ್ತಾಯಗೊಳಿಸುವಂತೆ ಪೊಲೀಸರು ಒತ್ತಡ ಹಾಕುತ್ತಿದ್ದರು. ಕೊನೆಗೆ ಪಟ್ಟುಬಿಡದಿದ್ದಾಗ ಪೊಲೀಸರು ವಿಳಂಬವಾಗಿ ದೂರು ದಾಖಲಿಸಿದ್ದಾರೆ ಎಂದು ವೈದ್ಯರ ಕುಟುಂಬಸ್ಥರು ಆರೋಪಿಸುತ್ತಾರೆ.
10 ಲಕ್ಷ ರು.ಗೆ ಬೇಡಿಕೆ?:
ವೈದ್ಯರ ದಂತ ಕ್ಲಿನಿಕ್‌ಗೆ ಶನಿವಾರ ಮುಸ್ಲಿಂ ಮಹಿಳೆ ಹಲ್ಲು ಚಿಕಿತ್ಸೆ ಆಗಮಿಸಿದ್ದು, ಯಾವುದೇ ತಕರಾರಿಲ್ಲದೆ ಹಣ ನೀಡಿ ಮರಳಿದ್ದರು. ಆದರೆ ಸೋಮವಾರ ಏಕಾಏಕಿ ಆಕೆಯ ಸಂಬಂಧಿಕರು ಬಂದು ಕ್ಲಿನಿಕ್‌ನಲ್ಲಿ ವೈದ್ಯರೊಂದಿಗೆ ಗಲಾಟೆ ಮಾಡಿದ್ದರು. ಅಂದು ಸಂಜೆ ಮತ್ತೆ ಬರುತ್ತೇವೆ ಎಂದು ಮರುದಿನ ಬಂದಿದ್ದಾರೆ. ಬೆಳಗ್ಗೆ ಬಂದವರೇ ವೈದ್ಯರ ಜತೆ ಗಲಾಟೆ ತೆಗೆದು ಹಲ್ಲೆಗೆ ಯತ್ನಿಸಿದ್ದಾರೆ. ಅಷ್ಟರಲ್ಲಿ ಅಲ್ಲಿದ್ದ ಕಂಪೌಂಡರ್ ಪರಮೇಶ್ವರ್ ಅವರು ಹಲ್ಲೆಯಾಗದಂತೆ ತಡೆದಿದ್ದಾರೆ. ಈ ವೇಳೆ ಹನಿಟ್ರ್ಯಾಪ್ ಮಾದರಿಯಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದ್ದು, ಅನುಚಿತವಾಗಿ ವರ್ತಿಸಿದ್ದನ್ನು ಮುಚ್ಚಿಹಾಕಬೇಕಾದರೆ 10 ಲಕ್ಷ ರು. ನೀಡುವಂತೆ ಬೇಡಿಕೆ ಇರಿಸಿದ್ದಾರೆ. ಇದಕ್ಕೆ ವೈದ್ಯರು ನಿರಾಕರಿಸಿದ್ದರು. ಮಧ್ಯಾಹ್ನ 12 ಗಂಟೆ ಬಳಿಕ ವೈದ್ಯರೇ ನಾಪತ್ತೆಯಾಗಿದ್ದಾರೆ ಎಂದು ಕಂಪೌಂಡರ್ ಬದಿಯಡ್ಕ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ವೈದ್ಯರ ಸಾವಿನ ಹಿಂದೆ ಲ್ಯಾಂಡ್ ಜಿಹಾದ್?:
ವೈದ್ಯ ಡಾ.ಕೃಷ್ಣಮೂರ್ತಿ ಅವರ ಕ್ಲಿನಿಕ್ ಹಾಗೂ ಜಾಗ ಹೆದ್ದಾರಿ ಬದಿ ಇದ್ದು, ಅದನ್ನು ಮಾರಾಟ ಮಾಡುವಂತೆ ಬಹುದಿನಗಳಿಂದ ಭೂ ಮಾಫಿಯಾ ಬೇಡಿಕೆ ಇಡುತ್ತಿತ್ತು. ವೈದ್ಯರು ನಿರಾಕರಿಸುತ್ತಲೇ ಇದ್ದರು. ಇದು ಹೆದ್ದಾರಿ ಬದಿಯಾಗಿದ್ದು, ವೈದ್ಯರು ಸುಮಾರು ಆರು ಎಕರೆ ಜಾಗ ಹೊಂದಿದ್ದರು. ಇದನ್ನು ಕಬಳಿಸಲು ವೈದ್ಯರನ್ನು ಹನಿಟ್ರ್ಯಾಪ್‌ಗೆ ಯತ್ನಿಸಿರಬೇಕು ಎಂದು ಹಿಂದೂ ಸಂಘಟನೆಗಳು ಹಾಗೂ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಇದರ ಹಿಂದೆ ಮುಸ್ಲಿಂ ಲ್ಯಾಂಡ್ ಜಿಹಾದ್ ಇದ್ದು, ಈ ಬಗ್ಗೆ ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್‌ಐಎ) ತನಿಖೆ ನಡೆಸುವಂತೆ ಸಂಘಟನೆಗಳು ಆಗ್ರಹಿಸಿವೆ.
ಅಪ್ಪನದ್ದು ಆತ್ಮಹತ್ಯೆ ಅಲ್ಲ, ವ್ಯವಸ್ಥಿತ ಕೊಲೆ: ವರ್ಷಾ
ಬದಿಯಡ್ಕದ ಲ್ಯಾಂಡ್ ಜಿಹಾದ್ ಬಗ್ಗೆ ಮೃತ ಡಾ.ಕೃಷ್ಣಮೂರ್ತಿ ಪುತ್ರಿ ಡಾ. ವರ್ಷಾ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿ, ನಾವು ಮನೆಗೆ ನಾಲ್ಕೈದು ತಿಂಗಳ ಹಿಂದೆ ಹೊಸ ಕಂಪೌಂಡ್ ಮಾಡಿದ್ದೆವು. ಆಗ ಕೆಲವು ಮುಸ್ಲಿಮರು ಮನೆ ಮಾರಾಟ ಮಾಡ್ತೀರಾ ಎಂದು ಕೇಳಿದ್ದಾರೆ. ರಸ್ತೆ ಸಮೀಪ ಮನೆ ಇರುವುದರಿಂದ ಮಾರಾಟದ ಬಗ್ಗೆ ಪ್ರಶ್ನಿಸಿದ್ದಾರೆ. ಅಲ್ಲಿ ಸುತ್ತಮುತ್ತ ಯಾವುದೇ ಹಿಂದೂಗಳ ಮನೆ ಇಲ್ಲ, ಎಲ್ಲ ಮುಸ್ಲಿಮರೇ ಇದ್ದಾರೆ. ಮಾರಾಟದ ಬಗ್ಗೆ ಕೇಳಿದವರಿಗೆ ಮಾರಾಟ ಮಾಡುವುದಿಲ್ಲ ಎಂದು ತಂದೆ ಹೇಳಿದ್ದರು ಎನ್ನುತ್ತಾರೆ.
ಈ ಘಟನೆ ಬಗ್ಗೆ ಕೇರಳ ಮತ್ತು ಕರ್ನಾಟಕ ಸರ್ಕಾರ ಉನ್ನತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕುಂದಾಪುರಕ್ಕೆ ಹೋಗುವ ಅಗತ್ಯ ಇರಲಿಲ್ಲ. ಅವರಿಗೆ ಕುಂದಾಪುರ ಹೊಸತು, ಕಾಡಿನ ಮಧ್ಯೆ ಯಾಕೆ ಹೋಗುತ್ತಾರೆ? ಅದು ರೈಲು ಅಪಘಾತ ಕೂಡ ಇಲ್ಲ, ಅದು ವ್ಯವಸ್ಥಿತ ಕೊಲೆ. ಅವರ ಶರ್ಚ್ ಕೂಡ ಬದಲಾಗಿದೆ, ಅವರು ಈವರೆಗೆ ಹಾಕದ ಉದ್ದ ಕೈಯ ಟೀ ಶರ್ಚ್ ಇದೆ. ಅಪ್ಪನ ವಾಚ್, ಪರ್ಸ್ ಯಾವುದೂ ಸ್ಥಳದಲ್ಲಿ ನಮಗೆ ಸಿಕ್ಕಿಲ್ಲ. ಡೆತ್ ನೋಟ್ ಕೂಡ ಇಲ್ಲ, ನಮಗೆ ಯಾವುದೇ ಮೆಸೇಜ್ ಕೂಡ ಬಂದಿಲ್ಲ. ತಂದೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಯಾವುದೇ ಸಮಸ್ಯೆ ಇರಲಿಲ್ಲ. ಅವರ ಮಾನ ತೆಗೆಯುವುದಾಗಿ ಹೇಳಿ ಕೊಲೆ ಬೆದರಿಕೆ ಹಾಕಿದ್ದಾರೆ. 10 ಲಕ್ಷ ರು. ಕೊಡದೇ ಇದ್ದರೆ ಊರಲ್ಲಿ ಇರಲು ಬಿಡುವುವುದಿಲ್ಲ ಎಂದಿದ್ದಾರೆ. ನಮ್ಮ ಇಡೀ ಮನೆಯವರಿಗೆ ಇದೊಂದು ವ್ಯವಸ್ಥಿತ ಕೊಲೆ ಎಂದು ಅನಿಸುತ್ತಿದೆ ಎಂದಿದಾರೆ.
ಕಾಸರಗೋಡಿನ ವೈದ್ಯ ನಿಗೂಢ ಸಾವು: ಮುಸ್ಲಿಂ ಯುವತಿ ವಿಚಾರದಲ್ಲಿ ತಂಡದ ಬೆದರಿಕೆ ಕಾರಣವಾಯ್ತಾ?
ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಮೃತ ಕೃಷ್ಣಮೂರ್ತಿ ಸಂಬಂಧಿಕ ಕೃಷ್ಣಮೂರ್ತಿ ಹೇಳಿಕೆ ನೀಡಿದ್ದು, ಕಾಸರಗೋಡು ಜಿಲ್ಲೆಯನ್ನು ಪ್ರಕ್ಷುಬ್ಧ ಕಾಶ್ಮೀರ ಮಾಡುವ ಕೆಲಸ ನಡೆಯುತ್ತಿದೆ. ಕಾಶ್ಮೀರದಲ್ಲೂ ಪಂಡಿತರನ್ನು ಓಡಿಸುವ ಕೆಲಸ ಆಗಿತ್ತು. ಸಮಾಜದ ಉನ್ನತ ವ್ಯಕ್ತಿಗಳು, ಒಳ್ಳೆ ಕೊಡುಗೆ ನೀಡಿದವರನ್ನು ಬ್ಲಾಕ್ ಮೇಲ್ ಮಾಡಲಾಗುತ್ತಿದೆ. ಊರು ಬಿಟ್ಟು ಓಡುವ ಹಾಗೆ ಮತ್ತು ಜೀವ ಕಳೆದುಕೊಳ್ಳುವ ಹಾಗೆ ಮಾಡಲಾಗುತ್ತಿದೆ. ಕೊಲೆ, ಬೆದರಿಕೆಗಳ ಮೂಲಕ ಹುಟ್ಟಡಗಿಸುವ ಕೆಲಸ ಕಾಶ್ಮೀರದಲ್ಲಿ ಆಗುತ್ತಿದೆ. ಅಂಥದ್ದನ್ನೇ ಕಾಸರಗೋಡು ಭಾಗದಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ ಎಂದಿದ್ದಾರೆ.