ಬೆಂಗಳೂರು [ಡಿ.03]:  ಮಹಿಳೆಯರು ಯಾವುದೇ ಸಂದರ್ಭದಲ್ಲಿ ಸಮಸ್ಯೆ ಎದುರಾದರೆ ಪೊಲೀಸರಿಂದ ತಕ್ಷಣ ರಕ್ಷಣೆ ಪಡೆದುಕೊಳ್ಳಲು ತಮ್ಮ ಮೊಬೈಲ್‌ ಫೋನ್‌ಗಳಲ್ಲಿ ‘ಸುರಕ್ಷಾ’ ಆ್ಯಪ್‌ ಅಳವಡಿಸಿಕೊಳ್ಳುವಂತೆ ನಗರ ಪೊಲೀಸ್‌ ಆಯುಕ್ತ ಭಾಸ್ಕರರಾವ್‌ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈದರಾಬಾದ್‌ನಲ್ಲಿ ಪಶುವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆಯಿಂದ ಯಾವೊಬ್ಬ ಮಹಿಳೆಯರು ಆತಂಕಪಡುವ ಅಗತ್ಯವಿಲ್ಲ. ಸದಾ ಪೊಲೀಸ್‌ ಇಲಾಖೆ ರಕ್ಷಣೆ ನೀಡಲಿದೆ. ಎಲ್ಲ ಹಂತದ ಅಧಿಕಾರಿಗಳಿಗೆ ರಕ್ಷಣೆ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸದೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಒಂದು ವೇಳೆ ಯಾರಾದರೂ ಕರ್ತವ್ಯ ಲೋಪ ಎಸಗಿದರೆ ಅವರ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಹಿಳೆಯರ ಸುರಕ್ಷತೆ ದೃಷ್ಟಿಯಿಂದಲೇ ಬೆಂಗಳೂರು ನಗರದಲ್ಲಿ ‘ಸುರಕ್ಷಾ ಆ್ಯಪ್‌’ ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಬ್ಬ ಮಹಿಳೆಯರು ಮತ್ತು ನಾಗರಿಕರು ತಮ್ಮ ಸ್ಮಾರ್ಟ್‌ ಫೋನ್‌ಗಳಲ್ಲಿ ‘ಸುರಕ್ಷಾ ಆ್ಯಪ್‌’ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಸಮಸ್ಯೆ ಎದುರಾದರೆ ತುರ್ತು ಸಂದರ್ಭದಲ್ಲಿ ಈ ಆ್ಯಪ್‌ನಲ್ಲಿರುವ ಕೆಂಪು ಬಣ್ಣದ ಬಟನ್‌ ಒತ್ತುವ ಮೂಲಕ ಪೊಲೀಸರಿಗೆ ಕರೆ ನೀಡಬಹುದು ಎಂದರು.

ಮದ್ವೆ ನಾಟಕವಾಡಿ ಕೊಲೆ ಆರೋಪಿ ಬಂಧಿಸಿದ ಮಹಿಳಾ SI!...

ಗಾರ್ಮೆಂಟ್ಸ್‌, ಕೈಗಾರಿಕಾ ಪ್ರದೇಶ, ಶಾಲಾ-ಕಾಲೇಜು, ಮಾರುಕಟ್ಟೆಹಾಗೂ ಇತರೆ ಜನನಿಬಿಡ ಪ್ರದೇಶಗಳಲ್ಲಿ ನಿಗದಿತ ಸಮಯದಲ್ಲಿ ಹೊಯ್ಸಳ ವಾಹನ ಸಿಬ್ಬಂದಿ ಗಸ್ತು ತಿರುಗಬೇಕು. ಯಾವುದೇ ಕರೆ ಬಂದರೂ ಕೂಡಲೇ ಸ್ಪಂದಿಸಬೇಕು. ಕೆಲವೊಮ್ಮೆ ಸಾರ್ವಜನಿಕರು ಪರೀಕ್ಷಾರ್ಥ ಕರೆ ಮಾಡುವ ಸಾಧ್ಯತೆ ಇರಲಿವೆ. ಯಾವುದನ್ನು ನಿರ್ಲಕ್ಷ್ಯ ಮಾಡದೆ ಸ್ಥಳಕ್ಕೆ ತೆರಳಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

ಆರೇಳು ನಿಮಿಷದಲ್ಲಿ ಸಹಾಯ!

ಸ್ಮಾರ್ಟ್‌ ಫೋನ್‌ಗಳಲ್ಲಿ ‘ಸುರಕ್ಷಾ’ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಅದರಲ್ಲಿ ನಿಮ್ಮ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ ನಮೂದಿಸಿ, ಓಟಿಪಿ ಮೂಲಕ ದೃಢಿಕರಿಸಿಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ಸಂಪರ್ಕಿಸಬೇಕಾದ ಸ್ನೇಹಿತರು ಅಥವಾ ಪೋಷಕರ ಎರಡು ಮೊಬೈಲ್‌ ಸಂಖ್ಯೆ ನೋಂದಾಯಿಸಬೇಕು. ತುರ್ತು ಸಂದರ್ಭದಲ್ಲಿ ಆ್ಯಪ್‌ ಓಪನ್‌ ಮಾಡಿ, ಕೆಂಪು ಬಣ್ಣದ ಬಟನ್‌ ಒತ್ತಬೇಕು. ಕೂಡಲೇ ಈ ಕರೆ ಸಹಾಯವಾಣಿ ಕೇಂದ್ರದಲ್ಲಿರುವ ಸಿಬ್ಬಂದಿಗೆ ರವಾನೆಯಾಗುತ್ತದೆ. ಏಳು ಸೆಕೆಂಡ್‌ನಲ್ಲಿ ತಮ್ಮ ಸ್ಥಳ ಪತ್ತೆ ಹಚ್ಚಿ, ಆಡಿಯೋ ಮತ್ತು ವಿಡಿಯೋ ತುಣುಕು ಸಹ ಕೇಂದ್ರಕ್ಕೆ ಒದಗಿಸಲಿದೆ. ಇದೇ ಮಾಹಿತಿಯನ್ನು ಮೊದಲೇ ನೋಂದಾಯಿಸಿದ ಎರಡು ಮೊಬೈಲ್‌ ಸಂಖ್ಯೆಗಳಿಗೂ ಸಂದೇಶ ರವಾನೆಯಾಗುತ್ತದೆ. ಈ ಮಾಹಿತಿಯನ್ನು ಸಮೀಪದ ಪೊಲೀಸ್‌ ಠಾಣೆಗೆ ಸಹಾಯವಾಣಿ ಕೇಂದ್ರದ ಸಿಬ್ಬಂದಿ ರವಾನಿಸಿ, ಆರೇಳು ನಿಮಿಷದಲ್ಲಿ ಹೊಯ್ಸಳ ಪೊಲೀಸರು ನಿಮ್ಮ ನೆರವಿಗೆ ಬರಲಿದ್ದಾರೆ.