ಹೊಸಪೇಟೆ (ಸೆ.25): ಕಣ್ಣಿದ್ರೇ ಕನಕಗಿರಿ ನೋಡಬೇಕು... ಕಾಲಿದ್ರೇ ಹಂಪಿ ಸುತ್ತಬೇಕು ಅನ್ನೋ ವಾಡಿಕೆ ಮಾತಿಗೆ ಮತ್ತೊಂದು ಸೇರ್ಪಡೆ, ಹಣವಿದ್ದವರಿಗೆ ಡಬಲ್‌ ಡೆಕ್ಕರ್‌ ಬಸ್‌!

ಹೌದು, ಇನ್ಮುಂದೆ ಹಂಪಿಯ ಸ್ಮಾರಕಗಳ ಸೊಬಗನ್ನು ಡಬಲ್‌ ಡೆಕ್ಕರ್‌ ಬಸ್‌ನಲ್ಲಿ ಸುತ್ತಾಡಿ ಕಣ್ಣದುಂಬಿಕೊಳ್ಳಬಹುದು. ಹಂಪಿಯಲ್ಲಿ ಆರಂಭದಲ್ಲಿ ಮೂರು ಬಸ್‌ಗಳು ಬರಲಿವೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಈ ಬಗ್ಗೆ ಯೋಜನೆ ರೂಪಿಸಿದ್ದು, ಹಂಪಿಯಲ್ಲಿ ಬಸ್‌ ಓಡಾಟದ ಕುರಿತ ಮಾರ್ಗ (ರೂಟ್‌ ಸರ್ವೇ) ಸಮೀಕ್ಷೆ ನಡೆಸಲಾಗುತ್ತಿದೆ.

ಭೋರ್ಗರೆದ ತುಂಗಭದ್ರಾ: ಹಂಪಿ ಸ್ಮಾರಕಗಳು ಮುಳುಗಡೆ ...

ಈ ಬಸ್‌ಗಳು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿವೆ. ಪ್ರವಾಸಿಗರು ದಿನವಿಡೀ ಈ ಬಸ್‌ಗಳಲ್ಲಿ ಸುತ್ತಾಡಿ ‘ಬಯಲು ವಸ್ತು ಸಂಗ್ರಹಾಲಯ’ ಕಣ್ಣದುಂಬಿಕೊಳ್ಳಬಹುದು. ಬರೀ . 300 ಪ್ಯಾಕೇಜ್‌ನಲ್ಲಿ ತುಂಗಭದ್ರಾ ನದಿ, ಅಂಜನಾದ್ರಿ ಬೆಟ್ಟ, ವಾಜಪೇಯಿ ಜೈವಿಕ ಉದ್ಯಾನ ವೀಕ್ಷಿಸಬಹುದು. ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಹಂಪಿ ಸುತ್ತಮತ್ತಲಿನ ಎಲ್ಲ ಸ್ಥಳಗಳನ್ನು ತೋರಿಸಲು ಪ್ರವಾಸೋದ್ಯಮ ಇಲಾಖೆ ಯೋಜನೆ ರೂಪಿಸಿದೆ.

ಹಂಪಿಯ ಪ್ರಮುಖ ಸ್ಮಾರಕಗಳನ್ನು ವೀಕ್ಷಿಸುವ ಜತೆಗೆ ಅಂಜನಾದ್ರಿ ಬೆಟ್ಟಹಾಗೂ ವಾಜಪೇಯಿ ಝೂಲಾಜಿಕಲ್‌ ಪಾರ್ಕ್ ಅನ್ನು ಕೂಡ ಪ್ರವಾಸಿಗರು ವೀಕ್ಷಿಸಬಹುದಾಗಿದೆ.

ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಡಬಲ್‌ ಡಕ್ಕರ್‌ ಬಸ್‌ ಸೌಲಭ್ಯ ಒದಗಿಸಲಾಗುವುದು. ಇದಕ್ಕಾಗಿ ಹಂಪಿಯಲ್ಲಿ ಇನ್ನು ಮಾರ್ಗದ ಸರ್ವೇ ನಡೆಯುತ್ತಿದೆ. ಬಳಿಕ ಬಸ್‌ಗಳ ಓಡಾಟ ಆರಂಭವಾಗಲಿದೆ.

ತಿಪ್ಪೇಸ್ವಾಮಿ, ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ ಹಂಪಿ