ಮಂಗಳೂರು(ಸೆ.28): ಡ್ರಗ್ಸ್‌ ಜಾಲ ಪ್ರಕರಣಕ್ಕೆ ಸಂಬಂಧಿಸಿ ಮುಂಬೈನಿಂದ ಡ್ರಗ್ಸ್‌ ತಂದು ಮಂಗಳೂರಲ್ಲಿ ಮಾರಾಟ ಮಾಡುತ್ತಿದ್ದ ಒಬ್ಬ ಪೆಡ್ಲರ್‌ನನ್ನು ಭಾನುವಾರ ಬಂಧಿಸಿರುವ ಸಿಸಿಬಿ ತನಿಖಾ ತಂಡ, ಬೆಂಗಳೂರಲ್ಲಿ ವಿದೇಶಿ ಪ್ರಜೆಯೊಬ್ಬನನ್ನು ವಶಕ್ಕೆ ಪಡೆದಿದೆ.

ಮುಂಬೈ ಮೂಲದ ಮಹಮ್ಮದ್‌ ಶಾಕೀರ್‌(35) ಬಂಧಿತ ಆರೋಪಿ. ಈಗಾಗಲೇ ಮಂಗಳೂರು ಡ್ರಗ್ಸ್‌ ಜಾಲಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಡ್ಯಾನ್ಸರ್‌ ಕಿಶೋರ್‌ ಅಮನ್‌ ಶೆಟ್ಟಿ(30), ಕೊರಿಯಾಗ್ರಾಫರ್‌ ತರುಣ್‌ರಾಜ್‌, ಅಖಿಲ್‌ ನೌಶೀಲ್‌(28) ಹಾಗೂ ಆಸ್ಕಾ ಎಂಬುವರನ್ನು ಬಂಧಿಸಿದ್ದಾರೆ. ಈಗ ಸುರತ್ಕಲ್‌ ಮೂಲದ ಮುಂಬೈ ನಿವಾಸಿ ಮಹಮ್ಮದ್‌ ಶಾಕೀರ್‌ನನ್ನು ಬಂಧಿಸುವುದರೊಂದಿಗೆ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಆರೋಪಿಗಳ ವಿಚಾರಣೆ ವೇಳೆ ಸಿಕ್ಕ ಮಾಹಿತಿಯಂತೆ ನೈಜೀರಿಯಾ ಮೂಲದ ಪ್ರಜೆಯೊಬ್ಬನನ್ನು ಬೆಂಗಳೂರಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಡ್ರಗ್ಸ್ ಶೆಟ್ಟಿ ತಂದ ಸಂಕಟ, ಆ್ಯಂಕರ್ ಅನುಶ್ರೀಗೆ ಸಿಸಿಬಿ ನೋಟಿಸ್!

ಸುರತ್ಕಲ್‌ ಸೂರಿಂಜೆ ನಿವಾಸಿ ಮಹಮ್ಮದ್‌ ಶಾಕೀರ್‌ ಮುಂಬೈಯಿಂದ ನಿಷೇ​ಧಿತ ಡ್ರಗ್ಸ್‌ ತಂದು ನಗರದಲ್ಲಿ ಕಿಶೋರ್‌ ಸೇರಿದಂತೆ ಇತರಿಗೆ ಮಾರಾಟ ಮಾಡುತ್ತಿದ್ದ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗೆ ಪೊಲೀಸ್‌ ಕಸ್ಟಡಿ ನೀಡಲಾಗಿದೆ.

ಅನುಶ್ರೀಗೆ ಡೋಪಿಂಗ್‌ ಟೆಸ್ಟ್‌?

ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಶನಿವಾರ ಮಂಗಳೂರು ಪೊಲೀಸರ ಮುಂದೆ ವಿಚಾರಣೆ ಎದುರಿಸಿದ್ದ ನಿರೂಪಕಿ, ನಟಿ ಅನುಶ್ರೀ ಅವರನ್ನು ಮತ್ತೊಮ್ಮೆ ವಿಚಾರಣೆಗೆ ಕರೆಸುವ ನಿರೀಕ್ಷೆ ಇದೆ. ಏತನ್ಮಧ್ಯೆ, ಅನುಶ್ರೀ ವಿಚಾರವಾಗಿ ಪೆಡ್ಲರ್‌ಗಳಿಂದ ಹೆಚ್ಚಿನ ಮಾಹಿತಿ ದೊರೆತಲ್ಲಿ ಆಕೆಯನ್ನು ಡೋಪಿಂಗ್‌ ಟೆಸ್ಟ್‌ಗೂ ಒಳಪಡಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.