ಜಿಲ್ಲೆಯೊಳಗೆ ಯಾವುದೇ ಕಾರಣಕ್ಕೂ ಬಿಜೆಪಿಯವರನ್ನು ಬೆಂಬಲಿಸಬೇಡಿ. ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನಾನು ಅಭಿವೃದ್ಧಿಗೆ ಕೊಟ್ಟಹಣವನ್ನು ವಾಪಸ್‌ ಪಡೆದವರಿಗೆ ಮತ ಕೊಡಬೇಡಿ. ಅವರಾರ‍ಯರಿಗೂ ಜಿಲ್ಲೆಯ ಜನರ ಮತ ಕೇಳುವ ನೈತಿಕತೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದರು.

 ಮಂಡ್ಯ: ಜಿಲ್ಲೆಯೊಳಗೆ ಯಾವುದೇ ಕಾರಣಕ್ಕೂ ಬಿಜೆಪಿಯವರನ್ನು ಬೆಂಬಲಿಸಬೇಡಿ. ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನಾನು ಅಭಿವೃದ್ಧಿಗೆ ಕೊಟ್ಟಹಣವನ್ನು ವಾಪಸ್‌ ಪಡೆದವರಿಗೆ ಮತ ಕೊಡಬೇಡಿ. ಅವರಾರ‍ಯರಿಗೂ ಜಿಲ್ಲೆಯ ಜನರ ಮತ ಕೇಳುವ ನೈತಿಕತೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಪಂಚರತ್ನ ರಥಯಾತ್ರೆಯ ಮೂಲಕ ಮಂಡ್ಯ ಪ್ರವೇಶಿಸಿದ ಹೆಚ್‌.ಡಿ.ಕುಮಾರಸ್ವಾಮಿ (HD Kumaraswamy) , ನಗರದ ಸಿಲ್ವರ್‌ ಜ್ಯುಬಿಲಿ ಪಾರ್ಕ್ನಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

2019ರವರೆಗೂ ಜಿಲ್ಲೆಯಲ್ಲಿ ಬಿಜೆಪಿ (BJP) ಖಾತೆ ತೆರೆಯುವುದಕ್ಕೆ ಅವಕಾಶ ನೀಡಿರಲಿಲ್ಲ. ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿ ಕುತಂತ್ರದಿಂದ ಗೆಲುವು ಸಾಧಿಸಿದರು. ಜಿಲ್ಲೆಯ ಅಭಿವೃದ್ಧಿಗಾಗಿ 9 ಸಾವಿರ ಕೋಟಿ ರು. ಹಣ ಕೊಟ್ಟೆ. ನಾನು, ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಕೂಡಲೇ ಅವರು ಆ ಹಣವನ್ನು ಬೇರೆ ಕ್ಷೇತ್ರಗಳಿಗೆ ವರ್ಗಾಯಿಸಿಕೊಂಡರು. ಇನ್ನು ಯಾವ ಧೈರ್ಯದ ಮೇಲೆ ಜನರ ಬಳಿ ಓಟು ಕೇಳಿಕೊಂಡು ಜಿಲ್ಲೆಯನ್ನು ಪ್ರವೇಶ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಬಿಜೆಪಿಯ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಎಲ್ಲರೂ ಮದ್ದೂರು, ಪಾಂಡವಪುರಕ್ಕೆ ಬಂದಾಗ ಏನು ಕೊಟ್ಟರು. ರೈತರು ಎರಡೂವರೆ ತಿಂಗಳಿಂದ ಅಹೋರಾತ್ರಿ ಧರಣಿ ನಡೆಸಿದರೂ ಅವರ ಕಷ್ಟಗಳನ್ನು ಕೇಳಲಿಲ್ಲ. ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ, ಬೆಳೆಗಾರರ ಹಿತ ಕಾಪಾಡಲಿಲ್ಲ. ಕೊಬ್ಬರಿ ಸೇರಿದಂತೆ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಂಬಲ ಬೆಲೆ ಘೋಷಿಸುವಂತೆ ಅನ್ನದಾತರು ಮೊರೆ ಇಡುತ್ತಿದ್ದರೂ ಬಿಜೆಪಿಯವರು ಕಿವಿಗೊಡುತ್ತಿಲ್ಲ. ಅವರಿಗೆ ಏನು ಹೇಳಿದರೂ ಪ್ರಯೋಜನವಿಲ್ಲ. ನಾನೇನಾದರೂ ಮುಖ್ಯಮಂತ್ರಿ ಸ್ಥಾನದಲ್ಲಿದ್ದಿದ್ದರೆ ರೈತರು ಒಂದು ಗಂಟೆಯೂ ಧರಣಿ ಮಾಡಲು ಬಿಡುತ್ತಿರಲಿಲ್ಲ ಎಂದು ನೇರವಾಗಿ ಹೇಳಿದರು.

ಸಾಮಾನ್ಯ ಜನರು ಮುಖ್ಯಮಂತ್ರಿಯನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಹಾವೇರಿಯ ಜನರೇ ಮುಖ್ಯಮಂತ್ರಿಯನ್ನು ಭೇಟಿ ಮಾಡಿಸುವಂತೆ ನನ್ನ ಬಳಿಗೆ ಬರುತ್ತಿದ್ದಾರೆ. ಜನಸಾಮಾನ್ಯರ ಸಂಕಷ್ಟಗಳು, ರೈತರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಕಾಳಜಿ ಬಿಜೆಪಿ ಸರ್ಕಾರಕ್ಕಿಲ್ಲ ಎಂದು ಟೀಕಿಸಿದರು.

ಜನತಾದಳ ವಿಸರ್ಜನೆ: ಬರುವ ಚುನಾವಣೆಯಲ್ಲಿ ಜೆಡಿಎಸ್‌ ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬಂದು ನಾನು, ಮುಖ್ಯಮಂತ್ರಿಯಾಗಿಯೂ ಪಂಚರತ್ನ ಯೋಜನೆ ಜಾರಿಗೊಳಿಸದಿದ್ದರೆ ಜಾತ್ಯತೀತ ಜನತಾದಳ ವಿಸರ್ಜನೆ ಮಾಡುತ್ತೇನೆ. ಇನ್ನೆಂದಿಗೂ ಜನರಿಗೆ ನನ್ನ ಮುಖ ತೋರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರೈತರಿಗೆ ಸಾಲಗಾರರಾಗದಂತೆ ಆರ್ಥಿಕ ಶಕ್ತಿ ತುಂಬುವುದಕ್ಕಾಗಿ 25 ಸಾವಿರ ಕೋಟಿ ರು. ಮೊತ್ತದ ಯೋಜನೆ ರೂಪಿಸಿಟ್ಟುಕೊಂಡಿದ್ದೇನೆ. ನಾನು ಅಧಿಕಾರಕ್ಕೆ ಬಂದ ಒಂದು ಗಂಟೆಯೊಳಗೆ ಈ ಯೋಜನೆಗಳು ಜಾರಿಯಾಗಲಿವೆ. ಆನಂತರ ರೈತರ ಮಕ್ಕಳಿಗೆ ಯಾರು ಹೆಣ್ಣು ಕೊಡುತ್ತಿಲ್ಲವೋ ಅವರು ರೈತರ ಮನೆ ಬಾಗಿಲಲ್ಲಿ ಕ್ಯೂ ನಿಲ್ಲುವಂತೆ ಮಾಡುತ್ತೇನೆ ಎಂದು ವಿಶ್ವಾಸದಿಂದ ನುಡಿದರು.

ಜಿಲ್ಲೆಗೇನು ಕೊಟ್ಟೆಅಂತ ಜನರನ್ನೇ ಕೇಳಲಿ

ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಗೆ ನಾನೇನು ಕೊಟ್ಟೆಅಂತ ಪ್ರಶ್ನಿಸುವವರು ಜನರನ್ನೇ ಕೇಳಲಿ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ 200ಕ್ಕೂ ಹೆಚ್ಚು ರೈತರು ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಆಗ ಕಾಂಗ್ರೆಸ್‌ನವರು ರೈತರ ಕಣ್ಣೀರು ಒರೆಸುವ ಕೆಲಸ ಮಾಡಿದರಾ. ರೈತರ ಬದುಕನ್ನು ರಕ್ಷಣೆ ಮಾಡುವುದಕ್ಕಾಗಿಯೇ ಕಳೆದ ಚುನಾವಣೆ ಸಮಯದಲ್ಲಿ ಸಾಲ ಮನ್ನಾ ಮಾಡುವುದಾಗಿ ರೈತರಿಗೆ ಭರವಸೆ ಕೊಟ್ಟಿದ್ದೆ. ಸಾಲ ಮನ್ನಾಗೆ ಎಲ್ಲಿಂದ ಹಣ ತರುತ್ತಾನೆಂದು ವಿಪಕ್ಷದವರು ಕುಹಕವಾಡಿದ್ದರು ಎಂದರು.

2018ರಲ್ಲಿ ಜೆಡಿಎಸ್‌ 37 ಸ್ಥಾನಗಳನ್ನು ಪಡೆದಾಗ ಸರ್ಕಾರ ರಚನೆಗೆ ಕಾಂಗ್ರೆಸ್‌ನ ರಾಜ್ಯ ನಾಯಕರು ಬರಲಿಲ್ಲ. ಕೇಂದ್ರದ ನಾಯಕರು ಬಂದರು. ಕಾಂಗ್ರೆಸ್‌ ಕಾರ್ಯಕ್ರಮಗಳನ್ನು ಮುಂದುವರೆಸಬೇಕು. ಸಾಲ ಮನ್ನಾ ವಿಚಾರ ನಮಗೆ ಸಂಬಂಧಿಸಿದ್ದಲ್ಲ ಎಂದು ಷರತ್ತು ಹಾಕಿದ್ದರು. ಆದರೂ, ಕಾಂಗ್ರೆಸ್‌ ಕಾರ್ಯಕ್ರಮಗಳಿಗೆ ಹಣ ಕಡಿಮೆ ಮಾಡದೆ 25 ಸಾವಿರ ಕೋಟಿ ರು. ರೈತರ ಸಾಲ ಮನ್ನಾ ಮಾಡಿದೆ. ಜಿಲ್ಲೆಗೆ 780 ಕೋಟಿ ರು. ಸಾಲ ಮನ್ನಾ ಆಯಿತು. ಇದು ಜಿಲ್ಲೆಗೆ ನಾನು ಕೊಟ್ಟಕೊಡುಗೆಯಲ್ಲವೇ ಎಂದು ಪ್ರಶ್ನಿಸಿದರು.

ನಾನು ಕೊಟ್ಟ9 ಸಾವಿರ ಕೋಟಿ ರು. ಹಣವನ್ನು ಜಿಲ್ಲೆಗೆ ಕೊಟ್ಟರೆ ಎಲ್ಲಿ ಅಭಿವೃದ್ಧಿಯಾಗುವುದೋ ಎಂಬ ಭಯದಿಂದ ಕಾಂಗ್ರೆಸ್‌ನವರು ಪಿತೂರಿ ನಡೆಸಿ ನನ್ನನ್ನು ಅಧಿಕಾರದಿಂದ ಕೆಳಗಿಳಿಸಿದರು. ಆನಂತರ ಬಿಜೆಪಿ ಜೊತೆ ಸೇರಿಕೊಂಡು ಹಣ ಬಿಡುಗಡೆಯಾಗದಂತೆ ತಡೆದರು. ಹಣ ಕೊಟ್ಟಿರುವುದಕ್ಕೆ ಸಾಕ್ಷಿ ಕೇಳುತ್ತಾರಲ್ಲ, ಬಜೆಟ್‌ ಪುಸ್ತಕವೇ ಸಾಕ್ಷಿ ಸಾಕಲ್ಲವೇ. ಅದನ್ನು ಬದಲಾವಣೆ ಮಾಡಲಾಗುವುದೇ ಎಂದು ತಿರುಗೇಟು ನೀಡಿದರು.

ಮಗನನ್ನು ಚುನಾವಣೆಯಲ್ಲಿ ಸೋಲಿಸಿದರೆಂಬ ಕಾರಣಕ್ಕೆ ಜಿಲ್ಲೆಗೆ ಕೊಟ್ಟಹಣವನ್ನು ಬಿಡುಗಡೆ ಮಾಡಲಿಲ್ಲ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಅಂತಹ ಕೆಟ್ಟವಂಶದಲ್ಲಿ ನಾನು ಹುಟ್ಟಿದವನಲ್ಲ. ರೈತ ಕುಟುಂಬಕ್ಕೆ ಸೇರಿದ ಒಳ್ಳೆಯ ವಂಶದಲ್ಲಿ ಹುಟ್ಟಿದವನು. ಜನರಿಗೆ ದ್ರೋಹ ಮಾಡುವ ಮನಸ್ಥಿತಿ ನಮ್ಮ ವಂಶಕ್ಕೆ ಬಂದಿಲ್ಲ ಎಂದು ದಿಟ್ಟವಾಗಿ ಹೇಳಿದರು.

ಸಭೆಯಲ್ಲಿ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ಶಾಸಕರಾದ ಎಂ.ಶ್ರೀನಿವಾಸ್‌, ಸಿ.ಎಸ್‌.ಪುಟ್ಟರಾಜು, ವಿಧಾನಪರಿಷತ್‌ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ನಗರಸಭೆ ಅಧ್ಯಕ್ಷ ಹೆಚ್‌.ಎಸ್‌.ಮಂಜು, ಮನ್‌ಮುಲ್‌ ಅಧ್ಯಕ್ಷ ಬಿ.ಆರ್‌.ರಾಮಚಂದ್ರ, ಪಿಇಟಿ ಅಧ್ಯಕ್ಷ ಕೆ.ಎಸ್‌.ವಿಜಯ್‌ಆನಂದ್‌, ಜಿ.ಪಂ ಮಾಜಿ ಸದಸ್ಯ ಹೆಚ್‌.ಎನ್‌.ಯೋಗೇಶ್‌, ಜೆಡಿಎಸ್‌ ಜಿಲ್ಲಾ ವಕ್ತಾರ ಮುದ್ದನಘಟ್ಟಮಹಾಲಿಂಗೇಗೌಡ, ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ.ರಮೇಶ್‌, ಮಹಿಳಾಧ್ಯಕ್ಷೆ ಮಂಜುಳಾ, ತಾಲೂಕು ಜೆಡಿಎಸ್‌ ಅಧ್ಯಕ್ಷ ತಿಮ್ಮೇಗೌಡ, ಬೇಲೂರು ಶಶಿಕುಮಾರ್‌, ಅಂಬುಜಮ್ಮ ಇತರರಿದ್ದರು.