ತುಮಕೂರು (ಆ.20):  ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿರುವ ಖಾಸಗಿ ಆಸ್ಪತ್ರೆಗಳು ಸರ್ಕಾರದ ನಿರ್ದೇಶನದನ್ವಯ ಶೇ.50ರಷ್ಟುಬೆಡ್‌ಗಳನ್ನು ಸರ್ಕಾರಕ್ಕೆ ನೀಡಿ ಸೋಂಕಿತರನ್ನು ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್‌ಕುಮಾರ್‌ ಅವರು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ತುಮಕೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳು ಯಾವುದೇ ಕಾರಣಕ್ಕೂ ಕೊರೊನಾ ಸೋಂಕಿತರ ಚಿಕಿತ್ಸೆಯನ್ನು ನಿರಾಕರಿಸಬಾರದು. ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಸರ್ಕಾರಕ್ಕೆ ಬಿಟ್ಟು ಕೊಡಬೇಕಾಗಿರುವ ಶೇ.50ರಷ್ಟುಬೆಡ್‌ಗಳನ್ನು ಕಡ್ಡಾಯವಾಗಿ ಮೀಸಲಿಟ್ಟು, ಸೋಂಕಿತರು ಬಂದಾಗ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಬೇಕು ಎಂದು ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳಿಗೆ ಸೂಚಿಸಿದರು.

ಬುಧವಾರ ದೇಶದಲ್ಲಿ ದಾಖಲೆಯ 71,281 ಹೊಸ ಕೊರೋನಾ ಕೇಸು..!.

ಸರ್ಕಾರದ ವತಿಯಿಂದ ರೆಫರ್‌ ಆಗುವ ಸೋಂಕಿತರ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಸರ್ಕಾರ ನಿಗಧಿಪಡಿಸಿರುವ ದರದಲ್ಲಿ ಪಾವತಿಸಲಾಗುವುದು. ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜುಗಳು ಕೂಡ ಬೆಡ್‌ಗಳನ್ನು ಐಸಿಯು, ವೆಂಟಿಲೇಟರ್‌ಗಳನ್ನು ಸಿದ್ಧವಾಗಿಟ್ಟುಕೊಂಡಿರಬೇಕು. ಸೋಂಕಿತರು ಬಂದಾಗ ಚಿಕಿತ್ಸೆ ನೀಡಬೇಕು ಎಂದು ಅವರು ತಿಳಿಸಿದರು.

ಇದಕ್ಕಾಗಿ ಪ್ರತಿ ಖಾಸಗಿ ಆಸ್ಪತ್ರೆಗಳು ನೋಡೆಲ್‌ ಅಧಿಕಾರಿಗಳನ್ನು ನೇಮಿಸಬೇಕು. ಅದೇ ರೀತಿ ಜಿಲ್ಲಾಡಳಿತ ವತಿಯಿಂದ ಪ್ರತಿ ಆಸ್ಪತ್ರೆಗೆ ನೋಡೆಲ್‌ ಅಧಿಕಾರಿಗಳನ್ನು ನೇಮಿಸಲಾಗುವುದು. ಇದರಿಂದ ಸೋಂಕಿತರ ಚಿಕಿತ್ಸೆ ಕೈಗೊಳ್ಳಲು ಸಮನ್ವಯತೆಯನ್ನು ಸಾಧಿಸಲು ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

ಗುಡ್‌ ನ್ಯೂಸ್: ದೇಶಿ ಕೋವಿಡ್ ಲಸಿಕೆ ಬಳಕೆಗೆ ಶೀಘ್ರ ಸಮ್ಮುತಿ..?.

ಕೊರೋನಾ ಸಂಕಷ್ಟದ ಸಮನ್ವಯದಲ್ಲಿ ಜಿಲ್ಲಾಡಳಿತದೊಂದಿಗೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಸಹಕಾರ ನೀಡಿದರೆ ಜಿಲ್ಲೆಯಲ್ಲಿ ಸೋಂಕಿತರಿಗೆ ಉತ್ತಮ ಚಿಕಿತ್ಸೆ ದೊರೆತು, ಸೋಂಕನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದ ಅವರು, ವೈದ್ಯರು ಇಂತಹ ಸಂದರ್ಭದಲ್ಲಿ ತಮ್ಮ ವೃತ್ತಿಪರತೆಯನ್ನು ಮೆರೆಯಬೇಕು ಎಂದರು. 

"