ನವದೆಹಲಿ(ಆ.20): ಇನ್ನೇನು ಇಳಿಮುಖವಾಗುತ್ತಿದೆ ಎಂಬ ಆಶಾಭಾವನೆಗಳ ಬೆನ್ನಲ್ಲೇ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಬುಧವಾರ ಭಾರೀ ಪ್ರಮಾಣದ ಏರಿಕೆಯಾಗಿದೆ. 

ನಿನ್ನೆ ದೇಶಾದ್ಯಂತ ದಾಖಲೆಯ 71,281 ಹೊಸ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 28.29 ಲಕ್ಷಕ್ಕೆ ತಲುಪಿದೆ. ಮತ್ತೊಂದೆಡೆ 984 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 59,709ಕ್ಕೆ ಮುಟ್ಟಿದೆ.

ಬುಧವಾರ ಮಹಾರಾಷ್ಟ್ರದಲ್ಲಿ ದಾಖಲೆಯ 13,165 ಕೇಸು ದೃಢಪಟ್ಟಿದ್ದು, 346 ಜನರು ಸಾವನ್ನಪ್ಪಿದ್ದಾರೆ. ಉಳಿದಂತೆ ಆಂಧ್ರಪ್ರದೇಶದಲ್ಲಿ 9742(86 ಸಾವು), ಕರ್ನಾಟಕದಲ್ಲಿ 8642(126 ಜನರ ಮರಣ), ತಮಿಳುನಾಡಿನಲ್ಲಿ 5795(116), ಉತ್ತರ ಪ್ರದೇಶದಲ್ಲಿ 5076(53) ಹಾಗೂ ಪಶ್ಚಿಮ ಬಂಗಾಳದಲ್ಲಿ 3169 ಮಂದಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದ್ದು, 53 ಮಂದಿಯನ್ನು ಬಲಿಪಡೆದಿದೆ.

ಅಮೆರಿಕ ನಿರ್ಮಿತ 100 ವೆಂಟಿಲೇಟರ್‌ ಭಾರತಕ್ಕೆ

ನವದೆಹಲಿ: ಕೊರೋನಾ ವಿರುದ್ಧ ಹೋರಾಟಕ್ಕೆ ಭಾರತ ಹಾಗೂ ಅಮೆರಿಕದ ಸ್ನೇಹದ ಅಂಗವಾಗಿ, ಅಮೆರಿಕ ಕಳುಹಿಸಿರುವ ಎರಡನೇ ಹಂತದ 100 ವೆಂಟಿಲೇಟರ್‌ಗಳು ಬುಧವಾರ ಭಾರತಕ್ಕೆ ಬಂದಿದೆ. ಇದರೊಂದಿಗೆ ಒಟ್ಟು 200 ವೆಂಟಿಲೇಟರ್‌ಗಳು ಭಾರತಕ್ಕೆ ಬಂದಂತಾಗಿದೆ. 

ರಾಜ್ಯದಲ್ಲಿ ಎರಡನೇ ಸಲ 8000+ ಕೊರೋನಾ ಪ್ರಕರಣಗಳು ಪತ್ತೆ..!

ಜೂ.14 ರಂದು ಮೊದಲ ಹಂತದ 100 ವೆಂಟಿಲೇಟರ್‌ಗಳು ಭಾರತಕ್ಕೆ ಬಂದಿತ್ತು. ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ ಹಾಗೂ ಭಾರತೀಯ ರೆಡ್‌ ಕ್ರಾಸ್‌ ಸಹಯೋಗದೊಂದಿಗೆ ಈ ವೆಂಟಿಲೇಟರ್‌ಗಳು ಭಾರತಕ್ಕೆ ಬಂದಿದ್ದು, ಇವುಗಳನ್ನು ಭಾರತಕ್ಕೆ ಹಸ್ತಾಂತರಿಸಲು ಸಂತಸವಾಗುತ್ತಿದೆ ಎಂದು ಭಾರತದ ಅಮೆರಿಕ ರಾಯಭಾರಿ ಕೆನ್ನೆತ್‌ ಜಸ್ಟರ್‌ ಹೇಳಿದ್ದಾರೆ. ಭಾರತಕ್ಕೆ 200 ವೆಂಟಿಲೇಟರ್‌ಗಳನ್ನು ಸಹಾಯಾರ್ಥವಾಗಿ ನೀಡಲಾಗುವುದು ಎಂದು ಅಮೆರಿ ಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೇ 15ಕ್ಕೆ ಘೋಷಣೆ ಮಾಡಿದ್ದರು.