ಮಳೆಹಾನಿ ವರದಿ ಸಲ್ಲಿಸುವಾಗ ತಪ್ಪಾಗಬಾರದು: ಶಾಸಕ ಗೋಪಾಲಕೃಷ್ಣ ಬೇಳೂರು

ವಿಪರೀತ ಮಳೆಯಿಂದಾಗಿ ತಾಲೂಕಿನಲ್ಲಿ ಸಾಕಷ್ಟು ಅವಾಂತರಗಳಾಗಿದ್ದು, ಹಾನಿಯ ವರದಿ ಬಂದಕೂಡಲೇ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಈ ವ್ಯವಸ್ಥೆ ಪಂಚಾಯತಿ ಮಟ್ಟದಿಂದಲೂ ನಡೆಯಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸೂಚಿಸಿದರು. 

Dont make mistakes while submitting rain damage report Says MLA Gopalakrishna Belur gvd

ಸಾಗರ (ಆ.04): ವಿಪರೀತ ಮಳೆಯಿಂದಾಗಿ ತಾಲೂಕಿನಲ್ಲಿ ಸಾಕಷ್ಟು ಅವಾಂತರಗಳಾಗಿದ್ದು, ಹಾನಿಯ ವರದಿ ಬಂದಕೂಡಲೇ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಈ ವ್ಯವಸ್ಥೆ ಪಂಚಾಯತಿ ಮಟ್ಟದಿಂದಲೂ ನಡೆಯಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸೂಚಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆಗಳ ಮಟ್ಟದಲ್ಲಿ ನಡೆದ ಮಳೆಹಾನಿ ಕುರಿತು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ತಾಕೀತು ಮಾಡಿದರು.

ಗಾಳಿ- ಮಳೆಯಿಂದಾಗಿ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು ೧೦೦ ಮನೆಗಳಿಗೆ ಹಾನಿಯಾಗಿದ್ದು, ೨ ಜಾನುವಾರುಗಳು ಮೃತಪಟ್ಟಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹಾಗೆಂದು ನಾವ್ಯಾರೂ ಮೈಮರೆಯದೆ ಮಳೆಗಾಲ ಮುಗಿಯುವವರೆಗೂ ಎಚ್ಚರಿಕೆಯಿಂದ ಕೆಲಸ ಮಾಡಬೇಕಿದೆ. ನಿತ್ಯವೂ ಮಳೆಯಿಂದ ಆಗುತ್ತಿರುವ ಅನಾಹುಗಳ ವರದಿಯನ್ನು ಪ್ರತಿ ಪಂಚಾಯತಿ ಮಟ್ಟದಿಂದಲೂ ಸಂಗ್ರಹಿಸಿ, ತಾಲೂಕು ಪಂಚಾಯ್ತಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ತಲುಪಿಸುವ ವ್ಯವಸ್ಥೆ ರೂಢಿಸಿಕೊಳ್ಳಬೇಕು. ಅನಾಹುತ ಸಂಭವಿಸಿದ ಪ್ರತಿ ಸ್ಥಳಕ್ಕೂ ನಾನು ಭೇಟಿ ನೀಡುತ್ತೇನೆ. ಸಾರ್ವಜನಿಕರಿಗೆ ಆಗಿರುವ ನೈಜ ಹಾನಿಯ ವಿವರವನ್ನು ಸರ್ಕಾರಕ್ಕೆ ಸಲ್ಲಿಸುವ ಕೆಲಸ ಮಾಡಬೇಕು. ಸರ್ಕಾರಕ್ಕೆ ಸಮಗ್ರ ಮಳೆ ಹಾನಿಯ ವರದಿ ಸಲ್ಲಿಸುವ ಕ್ರಮದಲ್ಲಿ ತಪ್ಪಾಗಬಾರದು ಎಂದು ಖಡಕ್ ಸೂಚನೆ ನೀಡಿದರು.

ಮಳೆಯಿಂದ ಹಾನಿಗೊಳಗಾದ ರಸ್ತೆಗಳು, ಅಂಗನವಾಡಿ, ಕಟ್ಟಡ, ಶಾಲಾ ಕಟ್ಟಡಗಳ ಬಗ್ಗೆ ಸಂಪೂರ್ಣ ವರದಿ ನೀಡಬೇಕು. ಪ್ರವಾಹ ಪೀಡಿತ ಪ್ರದೇಶಗಳು, ನೆರೆ ಸಂಭವವಿರುವ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಬೇಕು. ಮುಖ್ಯವಾಗಿ ವಿದ್ಯಾರ್ಥಿಗಳಿಗೆ, ಅಂಗನವಾಡಿ ಮಕ್ಕಳ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಿ ಅಧಿಕಾರಿಗಳು ಕೆಲಸ ಮಾಡಬೇಕು. ಮಳೆ ಹಾನಿಗೆ ನೀಡುವ ಪರಿಹಾರದ ಕುರಿತು ಮಾತನಾಡಿದ ಶಾಸಕರು, ರಾಜ್ಯ ಸರ್ಕಾರವು ನೆರೆಹಾನಿ ಪರಿಹಾರವನ್ನು ಪರಿಷ್ಕರಿಸಿದ್ದು, ಸಂಪೂರ್ಣವಾಗಿ ಹಾನಿ ಯಾಗಿರುವ ಮನೆಗಳಿಗೆ ನೀಡುವ ಪರಿಹಾರದ ಮೊತ್ತವನ್ನು ಸಾಮಾನ್ಯ ವರ್ಗದವರಿಗೆ ೧.೨೦ ಲಕ್ಷ ಹಾಗೂ ಎಸ್ಸಿ-ಎಸ್ಟಿಯವರಿಗೆ ೧.೫೦ ಲಕ್ಷ, ಅನಧಿಕೃತ ಮನೆ ಹಾನಿಗೆ ರೂ. ೫೦ ಸಾವಿರ ನಿಗದಿಪಡಿಸಿದೆ. 

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ, ಪತ್ನಿ ನೇರ ಆರೋಪಿಗಳು: ಸಂಸದ ಜಗದೀಶ್‌ ಶೆಟ್ಟರ್

ತಕ್ಷಣಕ್ಕೆ ಬಟ್ಟೆಬರೆ ಕೊಳ್ಳಲು ರು. ೨೫೦೦ ಹಾಗೂ ಪಾತ್ರೆ ಖರೀದಿಗೆ ೨೫೦೦ ರು. ನೀಡಲಾಗುತ್ತದೆ. ಸರ್ಕಾರದ ಈ ಕ್ರಮದಿಂದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ತಹಶಿಲ್ದಾರ್ ಚಂದ್ರಶೇಖರ್ ನಾಯಕ್, ತಾಪಂ ಕಾರ್ಯನಿರ್ವಹಣಾಧಿಕಾರಿ ಗುರುಕೃಷ್ಣ ಶೆಣೈ, ನಗರಸಭೆ ಆಯುಕ್ತ ಹೆಚ್.ಕೆ.ನಾಗಪ್ಪ, ಶಾಸಕರ ವಿಶೇಷ ಅಧಿಕಾರಿ ಟಿ.ಪಿ.ರಮೇಶ್ ಮತ್ತು ಮೆಸ್ಕಾಂ, ಕೃಷಿ, ತೋಟಗಾರಿಕೆ, ಪಂಚಾಯತ್ರಾಜ್, ಲೋಕೋಪಯೋಗಿ, ಕಂದಾಯ, ಸಣ್ಣ ನೀರಾವರಿ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios