Asianet Suvarna News Asianet Suvarna News

ಗದಗ: ಪುತ್ರನ ನೆನಪಿಗಾಗಿ ಬಡವರಿಗೆ ನಿವೇಶನ ದಾನ..!

ಅನಾಥರು, ಅಶಕ್ತರು, ಅಬಲೆಯರಿಗೆ ಸೂರು ಕಟ್ಟಿಕೊಳ್ಳಲು ಆಸರೆಯಾಗಲಿರುವ ದಂಪತಿ

Donate Sites to the Poor in Memory of the Son at Lakshmeshwara in Gadag grg
Author
First Published Sep 29, 2022, 2:30 AM IST

ಅಶೋಕ ಸೊರಟೂರ

ಲಕ್ಷ್ಮೆಶ್ವರ(ಸೆ.29):  ಸಮೀಪದ ಸೂರಣಗಿ ಗ್ರಾಮದ ದ್ಯಾಮಣ್ಣ ಹಾಗೂ ಜ್ಯೋತಿ ನೀರಲಗಿ ದಂಪತಿಗಳು ತಮ್ಮ ಮಗ ಜೀವನ್‌ ಸ್ಮರಣಾರ್ಥ 2 ಎಕರೆ ಜಮೀನನ್ನು ಬಡವರಿಗಾಗಿ ನಿವೇಶನ ಮಾಡಿ ಹಂಚಲು ಮುಂದಾಗಿದ್ದಾರೆ. ಸಮೀಪದ ಸೂರಣಗಿ ಗ್ರಾಮದ ದ್ಯಾಮಣ್ಣ ದೇವೇಂದ್ರಪ್ಪ ನೀರಲಗಿ ಹಾಗೂ ಜ್ಯೋತಿ ನೀರಲಗಿ ದಂಪತಿಗಳಿಗೆ ಮದುವೆಯಾಗಿ ಬಹಳ ವರ್ಷಗಳ ನಂತರ 2013 ಮೇ 1ರಂದು ಗಂಡು ಮಗು ಜನಿಸಿತ್ತು. ಆ ಮಗುವಿಗೆ ಜೀವನ್‌ ಎಂದು ನಾಮಕರಣ ಮಾಡಲಾಗಿತ್ತು. ಆರಂಭದಲ್ಲಿ ಆರೋಗ್ಯದಿಂದಿದ್ದ ಜೀವನ್‌ಗೆ 1 ವರ್ಷದ ನಂತರ ಹೊಟ್ಟೆಯಲ್ಲಿ ಗಂಟಿನ ಸಮಸ್ಯೆ ಕಾಣಿಸಿಕೊಂಡಾಗ ಹಲವು ಪ್ರತಿಷ್ಟಿತ ಆಸ್ಪತ್ರೆಗಳಲ್ಲಿ ಲಕ್ಷಾಂತರ ರು. ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದರು. ಅದರಿಂದ ಗುಣಮುಖನಾದ ಜೀವನ್‌ಗೆ ಕಣ್ಣಿನ ಸಮಸ್ಯೆ ಕಾಡಿದೆ. ಅದಕ್ಕೂ ಚಿಕಿತ್ಸೆ ಕೊಡಿಸಿದ್ದಾರೆ. ಇಷ್ಟೆಲ್ಲ ಆದ ನಂತರ ಜೀವನ್‌ಗೆ ಮೆದುಳು ಜ್ವರ ಕಾಣಿಸಿಕೊಂಡಿದೆ. ಅದಕ್ಕೂ ಚಿಕಿತ್ಸೆ ಕೊಡಿಸಿ ಗುಣಮುಖ ಮಾಡಿದ್ದಾರೆ.

ಕೆಲವು ದಿನಗಳ ನಂತರ ಆಟವಾಡುವ ವೇಳೆ ಜೀವನ್‌ ಎಡವಿ ಬಿದ್ದು ತಲೆಗೆ ಪೆಟ್ಟುಬಿದ್ದಿದ್ದು, ಚಿಕಿತ್ಸೆಗಾಗಿ ಬೆಂಗಳೂರು. ಮುಂಬೈಯಲ್ಲಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಿಸಿದರು. ಆದರೆ, ಮಗುವನ್ನು ಉಳಿಸಿಕೊಳ್ಳುವುದು ಸಾಧ್ಯವಾಗದೇ ಕೊನೆಗೆ 2019ರ ಡಿಸೆಂಬರ್‌ 21ರಂದು ಮೃತನಾದ.

ಗದಗ್‌ನಲ್ಲಿ ಲಂಚ ಸ್ವೀಕರಿಸುತ್ತಿದ್ದ ಅಗ್ನಿಶಾಮಕ ಅಧಿಕಾರಿ ಲೋಕಾಯುಕ್ತ ಬಲೆಗೆ

ದ್ಯಾಮಣ್ಣ ದಂಪತಿಗಳು ತಮ್ಮ ಮಗುವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎನ್ನುವ ಛಲದಲ್ಲಿ ತಮ್ಮ ಪಾಲಿನ 8 ಎಕರೆ ಜಮೀನಿನಲ್ಲಿ 3 ಎಕರೆ ಜಮೀನು ಮಾರಾಟ ಮಾಡಿ, ಲಕ್ಷಾಂತರ ರುಪಾಯಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ್ದರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನುವ ಕೊರಗು ಅವರನ್ನು ಕಾಡುತ್ತಿತ್ತು. ತಮ್ಮ ಮಗ ಜೀವನ್‌ ಹೆಸರನ್ನು ಹೇಗಾದರೂ ಮಾಡಿ ಉಳಿಸಬೇಕು ಎನ್ನುವ ಛಲವು ಅವರಲ್ಲಿ ಸಾಮಾಜಿಕ ಕಳಕಳಿ ಹುಟ್ಟುವಂತೆ ಮಾಡಿದೆ. ತಮಗಿರುವ 5 ಎಕರೆ ಜಮೀನಿನಲ್ಲಿ 2 ಎಕರೆಯನ್ನು ಸೂರಣಗಿ ಗ್ರಾಮದ ಸುಮಾರು 40 ಬಡ ಕುಟುಂಬಗಳಿಗೆ, ಅನಾಥರಿಗೆ, ವಿಧಿವೆಯರಿಗೆ ಹಾಗೂ ಅಂಗವಿಕಲರಿಗೆ ಉಚಿತವಾಗಿ ಹಂಚಬೇಕು ಎನ್ನುವ ತೀರ್ಮಾನಕ್ಕೆ ಬಂದಿದ್ದು, ಈ ಕುರಿತಂತೆ ಗ್ರಾಮದಲ್ಲಿ ಬಿತ್ತಿ ಪತ್ರ ಅಂಟಿಸಿ ಹೆಸರು ನೋಂದಾಯಿಸಲು ಮನವಿ ಮಾಡಿರುವುದು ಊರಿನ ಜನತೆಯ ಪ್ರಶಂಸೆಗೆ ಪಾತ್ರವಾಗಿದೆ.

ದ್ಯಾಮಣ್ಣ ಹಾಗೂ ಜ್ಯೋತಿ ದಂಪತಿಗಳಿಗೆ ಇರುವ ಒಬ್ಬ ಮಗನನ್ನು ಕಳೆದುಕೊಂಡ ಮೇಲೆ ಅನಾಥ ಪ್ರಜ್ಞೆ ಕಾಡಬಾರದು ಎನ್ನುವ ಕಾರಣಕ್ಕೆ ಕುಟುಂಬಸ್ಥರು ದತ್ತು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಅದಕ್ಕೆ ಒಪ್ಪದ ಇವರು ತಮ್ಮ 2 ಎಕರೆ ಜಮೀನಿನಲ್ಲಿ 40 ನಿವೇಶನ ರಚಿಸಿ ಮಗನ ಹೆಸರಿನಲ್ಲಿ ಅವುಗಳನ್ನು ಅನಾಥರು, ಅಶಕ್ತರಿಗೆ ಅವರ ಕುಟುಂಬದಲ್ಲಿ ಹುಟ್ಟುವ ಮಕ್ಕಳಲ್ಲಿ ಮಗನನ್ನು ಕಾಣುವ ಹಂಬಲ ಹೊಂದಿದ್ದಾರೆ.

ಗ್ರಾಮದಲ್ಲಿ ಬಿತ್ತಿ ಪತ್ರ ಅಂಟಿಸಿರುವೆ. ಹಿರಿಯರ ನೇತೃತ್ವದಲ್ಲಿ ಕಮೀಟಿ ರಚಿಸಿ ಅರ್ಜಿ ಕರೆದು ಅದರಲ್ಲಿ ಸೂಕ್ತ ಫಲಾನುಭವಿಗಳ ಆಯ್ಕೆ ಮಾಡಿ ಮನೆಗಳ ಹಂಚಿಕೆ ಮಾಡಲಾಗುವುದು ಅಂತ ದಾನಿ ದ್ಯಾಮಣ್ಣ ನೀರಲಗಿ ತಿಳಿಸಿದ್ದಾರೆ.  
ಪದವೀಧರನಾಗಿರುವ ದ್ಯಾಮಣ್ಣ ಅಷ್ಟೇನೂ ಶ್ರೀಮಂತರಲ್ಲ. ಆದರೆ, ಶ್ರೀಮಂತರನ್ನು ಮೀರಿಸುವ ದಾನ ಗುಣ ಅವರಲ್ಲಿ ಬಂದಿದೆ ಅಂತ ಸೂರಣಗಿ ಗ್ರಾಮಸ್ಥ ನಾಗರಾಜ ಕಳ್ಳಿಹಾಳ ಹೇಳಿದ್ದಾರೆ. 
 

Follow Us:
Download App:
  • android
  • ios