ಮೈಸೂರು(ಜೂ.13): ಪೈನಾಪಲ್‌ಗೆ ಸಿಡಿಮದ್ದು ತುಂಬಿ ಆನೆಗೆ ನೀಡಿದ್ದು, ಮಂಗನ ಬಾಯಿ ಸೀಳಿದ ಘಟನೆ ಹಸಿಯಾಗಿರುವಾಗಲೇ ನಗರದ ಟಿ.ಕೆ. ಲೇಔಟ್‌ ಮತ್ತು ರಾಮಕೃಷ್ಣನಗರದ ಕೆಲವೆಡೆ ನಾಯಿಗಳು ಅನುಮಾನಾಸ್ಪದವಾಗಿ ಮೃತಪಡುತ್ತಿದ್ದು, ನಾಯಿಗಳಿಗೆ ವಿಷ ಹಾಕಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.

"

ಕಳೆದ ಒಂದು ವಾರದಿಂದ ಈಚೆಗೆ ಬೀದಿ ನಾಯಿಗಳು ಕಾಣೆ ಆಗುತ್ತಿರುವುದನ್ನು ಪ್ರಾಣಿ ಪ್ರಿಯರೊಬ್ಬರು ಗಮನಿಸಿದ್ದಾರೆ. ಹೀಗೆ ಸುಮಾರು 13 ಬೀದಿ ನಾಯಿ ಕಾಣೆಯಾಗಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಈ ಪೈಕಿ ಒಂದೆರಡು ನಾಯಿಗಳು ಮೃತಪಟ್ಟಿದ್ದು, ಅವುಗಳ ಮೃತದೇಹ ಪತ್ತೆಯಾಗುತ್ತಿದ್ದಂತೆಯೇ ಪ್ರಾಣಿ ದಯಾ ಸಂಘದವರಿಗೆ ವಿಷಯ ತಿಳಿಸಲಾಗಿದೆ.

 

ಮತ್ತೆರಡು ನಾಯಿಗಳ ಮೃತದೇಹವು ರಾಮಕೃಷ್ಣನಗರ ಭಾಗದಲ್ಲಿ ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡು ನಾಯಿಗಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಅನಾರೋಗ್ಯಕ್ಕೆ ತುತ್ತಾದಂತೆ ಕಂಡುಬಂದ ಕೆಲವು ನಾಯಿಗಳನ್ನು ಚಿಕಿತ್ಸೆಗಾಗಿ ಸಾಗಿಸುತ್ತಿರುವಾಗ ಮತ್ತೊಂದು ನಾಯಿ ಮೃತಪಟ್ಟಿದೆ. ಹೀಗೆ ಒಟ್ಟು 5 ನಾಯಿ ಮೃತಪಟ್ಟಿದ್ದರೆ, ಒಂದು ನಾಯಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

 

ನಾಯಿಗಳು ಹೀಗೆ ಒಂದರ ಹಿಂದೆ ಒಂದರಂತೆ ಮೃತಪಡುತ್ತಿರುವುದು ಅನುಮಾನಕ್ಕೆ ಕಾರಣವಾಗಿದ್ದು, ಯಾರೋ ಕಿಡಿಗೇಡಿಗಳು ವಿಷ ಹಾಕಿರಬಹುದು ಎಂದು ಶಂಕಿಸಲಾಗಿದೆ. ಬೀದಿ ನಾಯಿಗಳ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಈ ದೃಷ್ಕೃತ್ಯಕ್ಕೆ ಕೈ ಹಾಕಿರಬಹುದು ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಪೊಲೀಸ್‌ ಠಾಣೆಗೆ ದೂರು ನೀಡಲು ಪ್ರಾಣಿ ದಯಾ ಸಂಘಟನೆ ಮುಂದಾಗಿದೆ.