ಜೆಡಿಎಸ್ ತೊರೆಯಲಿದ್ದಾರಾ ಮತ್ತೊಬ್ಬ ನಾಯಕ?
* ಯಾವುದೇ ಕಾರಣಕ್ಕೂ ಜೆಡಿಎಸ್ ತೊರೆಯುವುದಿಲ್ಲ
* ಜೆಡಿಎಸ್ ಜಿಲ್ಲಾ ಚುನಾವಣಾ ವಿಭಾಗದ ಮುಖ್ಯಸ್ಥ ಶಶಿಭೂಷಣ ಹೆಗಡೆ ದೊಡ್ಮನೆ ಹೇಳಿಕೆ
* ಎಚ್.ಡಿ. ಕುಮಾರಸ್ವಾಮಿ ಅವರನ್ನು ಬಿಟ್ಟು ಬರುವ ಪ್ರಶ್ನೆ ಇಲ್ಲ
ಶಿರಸಿ(ಅ.13): ಸೈದ್ಧಾಂತಿಕ ರಾಜಕಾರಣವನ್ನು ನಾನು ಎಂದಿಗೂ ಬಿಡುವುದಿಲ್ಲ. ಯಾವುದೇ ಕಾರಣಕ್ಕೂ ಜೆಡಿಎಸ್, ಎಚ್.ಡಿ. ಕುಮಾರಸ್ವಾಮಿ(HD Kumaraswamy) ಅವರನ್ನು ಬಿಟ್ಟು ಬರುವ ಪ್ರಶ್ನೆ ಇಲ್ಲ ಎಂದು ಜೆಡಿಎಸ್(JDS) ಜಿಲ್ಲಾ ಚುನಾವಣಾ ವಿಭಾಗದ ಮುಖ್ಯಸ್ಥ ಶಶಿಭೂಷಣ ಹೆಗಡೆ ದೊಡ್ಮನೆ(Shashibhuashan Hegde Doddamane) ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ತಾಲೂಕು ಘಟಕದ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಆದರ್ಶ, ರೈತಪರ(Farmers) ಕಾಳಜಿ, ಬದ್ಧತೆಯನ್ನು ಹತ್ತಿರದಿಂದ ನೋಡಿದ್ದೇನೆ. ಅವರ ಜೊತೆಗಿನ ಒಡನಾಟ ಆತ್ಮೀಯವಾಗಿಯೂ ಇದೆ. ಯಾವುದೇ ಕಾರಣಕ್ಕೂ ಜೆಡಿಎಸ್ ಬಿಡುವ ಪ್ರಶ್ನೆ ಇಲ್ಲ. ಕುಮಾರಸ್ವಾಮಿ ಅವರ ನಾಯಕತ್ವ ರಾಜ್ಯಕ್ಕೆ(Karnataka) ಬೇಕು ಎಂಬುದನ್ನು ಇವತ್ತಿಗೂ ನಂಬುತ್ತೇನೆ. ಅವರ ಯೋಚನೆ, ಯೋಜನೆಗಳನ್ನು ಜನರ ಬಳಿಗೆ ತಲುಪಿಸುವುದೇ ನನ್ನ ಕಾರ್ಯ ಎಂದರು.
ಕುಮಾರಸ್ವಾಮಿ ಅವರು ಪಕ್ಷ ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ. ಪಂಚ ರತ್ನ ಯೋಜನೆಗಳನ್ನೂ ಜನರ ಬಳಿ ಒಯ್ಯಲು ಮುಂದಾಗಿದ್ದಾರೆ. ಪೂರ್ಣ ಬಹುಮತ ಬಂದರೆ ರೈತ ಚೈತನ್ಯ, ಶಿಕ್ಷಣ, ಆರೋಗ್ಯ, ಉದ್ಯೋಗ ಕ್ಷೇತ್ರದಲ್ಲಿ ಕೆಲಸ ಮಾಡಲು ಚಿಂತಿಸಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹೈಟೆಕ್ ಶಾಲೆ, 20 ಬೆಡ್ ಆಸ್ಪತ್ರೆಯ ಕನಸೂ ಇದೆ. ಪ್ರತಿ ಕುಟುಂಬಕ್ಕೊಂದು ಉದ್ಯೋಗ ನೀತಿ, ಸರ್ವರಿಗೂ ಸೂರು ಭಾಗ್ಯ ನೀಡಲು ಚಿಂತಿಸಿದ್ದಾರೆ. ಜನರ ಭಾವನೆ ಜೊತೆ ಆಟ ಆಡುವುದು ಬಿಟ್ಟು, ಜನಪರ ಯೋಜನೆ ಜನರ ಬಳಿ ಒಯ್ಯಲಿದ್ದೇವೆ ಎಂದರು.
ಸಿದ್ದರಾಮಯ್ಯನವರ ಅನ್ನಭಾಗ್ಯ ಲೇವಡಿ ಮಾಡಿದ ಕುಮಾರಸ್ವಾಮಿ
ನೂತನ ಅಧ್ಯಕ್ಷ ಗಣಪೇ ಗೌಡ ಮಾತನಾಡಿ, ಜಿಲ್ಲೆಯಲ್ಲಿ ಜೆಡಿಎಸ್ ಪುನಾರಚನೆ ಮಾಡಲಾಗುತ್ತಿದೆ. ಎಲ್ಲರೂ ಕಷ್ಟಪಟ್ಟು ಪಕ್ಷ ಬೆಳೆಸಲು ಯೋಜಿಸಿದ್ದೇವೆ. ರೈತ ಸೇರಿದಂತೆ ಅನೇಕ ವಿಭಾಗ ರಚನೆ ಮಾಡಲಾಗುತ್ತಿದೆ. ಜೋಯಿಡಾ(Joida), ಅಂಕೋಲಾ(Ankola), ಕಾರವಾರ(Karwar) ತಾಲೂಕು ಘಟಕ ಆಗಬೇಕು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಮಿತಿ ಪದಾಧಿಕಾರಿಗಳ ಆಯ್ಕೆ ಆಗಿದೆ. ಕೆಲವು ವಿಭಾಗ ಆಗಬೇಕು. ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಅರಿಣ ಗೌಡ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷ ರ ಆಯ್ಕೆಯನ್ನು ಗೊಂದಲ ಬಗೆಹರಿಸಿ ನೂತನ ಆಯ್ಕೆ ಮಾಡಲಾಗುತ್ತದೆ ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕಾರ್ಯಕ್ರಮವನ್ನು ಜಿಲ್ಲೆಯ ಎರಡು ಕಡೆ ಕಾರ್ಯಕ್ರಮ ನಡೆಸಲಾಗುತ್ತದೆ. ಪ್ರಜ್ವಲ್ ರೇವಣ್ಣ(Prajwal Revanna), ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಅವರನ್ನು ಆಹ್ವಾನಿಸಿ ವಿಶೇಷ ಕಾರ್ಯಕ್ರಮ ಮಾಡಲಿದ್ದೇವೆ ಎಂದ ಅವರು, ಶಿರಸಿ ಸಿದ್ದಾಪುರಕ್ಕೆ ಶಶಿಭೂಷಣ ಹೆಗಡೆ, ಕುಮಟಾಕ್ಕೆ ಸೂರಜ್ ನಾಯ್ಕ ಸೋನಿ ಅವರಿಗೆ ಸಂಘಟನೆ ಆರಂಭಿಸಲು ಸೂಚನೆ ಸಿಕ್ಕಿದೆ ಎಂದರು. ಅವರು ಕಳೆದ ಚುನಾವಣೆಗಳಲ್ಲಿ(Election) ಶಶಿಭೂಷಣ ಅವರ ಜೊತೆ ಹೈಕಮಾಂಡ್ ನಿಂತಿದೆ, ನಿಂತಿಲ್ಲ ಎಂದರೆ ಅವರು ಆತ್ಮಸಾಕ್ಷಿಯಾಗಿ ಹೇಳಲಿ ಎಂದೂ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
ಈ ವೇಳೆ ಪ್ರಮುಖರಾದ ಜಿ.ಕೆ. ಪಾಟಗಾರ, ವಿ.ಎಂ.ಭಂಡಾರಿ, ಪಿ.ಟಿ. ನಾಯ್ಕ, ಮುನಾಫ ಮಿರ್ಜಾನಕರ, ಮುಜೀಬ, ಎನ್.ಎಸ್. ಭಟ್ಟಮಣದೂರು, ದೀಪಕ್ ರೇವಣಕರ, ರೇವತಿ, ತಾಲೂಕು ಅಧ್ಯಕ್ಷ ಆರ್.ಜಿ. ನಾಯ್ಕ ಕಿಬ್ಬಳ್ಳಿ ಹಾಗೂ ಇತರರು ಇದ್ದರು.
ಮಧು ಬಂಗಾರಪ್ಪ, ಬಿ.ಆರ್. ನಾಯ್ಕ ಅವರು ಜೆಡಿಎಸ್ ತೊರೆದ ಮೇಲೆ ಎಷ್ಟು ಜನ ಬಿಟ್ಟು ಹೋದರು? ಅವರಿಗೆ ವರ್ಚಸ್ಸು ಇಲ್ಲ ಎಂದಲ್ಲ, ಆದರೆ ಈವರೆಗೆ ಯಾರೂ ಹೋಗಿಲ್ಲ ಎಂದು ಜೆಡಿಎಸ್ ಅಧ್ಯಕ್ಷ ಗಣಪೇ ಗೌಡ ತಿಳಿಸಿದ್ದಾರೆ.