ಬೆಂಗಳೂರು(ಫೆ.22): ಗುಜರಾತ್‌ ಮೂಲದ 15 ವರ್ಷದ ಬಾಲಕಿಯ ಕುತ್ತಿಗೆಯಲ್ಲಿ ಬೆಳೆದಿದ್ದ 3.5 ಕೆ.ಜಿ. ತೂಕದ ಫೈಬ್ರೊಮಾಟೋಸಿಸ್‌ ಗಡ್ಡೆ ನಿವಾರಣೆಗಾಗಿ ಆಸ್ಟರ್‌ ಸಿಎಂಐ ಆಸ್ಪತ್ರೆಯ 21 ತಜ್ಞ ವೈದ್ಯರ ತಂಡ ನಡೆಸಿರುವ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

ಬಾಲಕಿ ಸುರ್ಭಿಬೇನ್‌ಗೆ ಚಿಕ್ಕಂದಿನಿಂದಲೇ ಕುತ್ತಿಗೆಯಲ್ಲಿ ಗಡ್ಡೆ ಕಾಣಿಸಿಕೊಂಡಿತ್ತು. ಆಸ್ಟರ್‌ ಸಿಎಂಐ ಆಸ್ಪತ್ರೆಯ ವೈದ್ಯರ ತಂಡ ಹಲವು ತಿಂಗಳ ಕಾಲ ಹಂತ ಹಂತವಾಗಿ ಶಸ್ತ್ರಚಿಕಿತ್ಸೆ ನಡೆಸಿ, ಗೆಡ್ಡೆಯನ್ನು ಹೊರತೆಗೆದಿದೆ. ಆಸ್ಟರ್‌ ಸಿಎಂಐ ಆಸ್ಪತ್ರೆ ಪೀಡಿಯಾಟ್ರಿಕ್ಸ್‌ ತಜ್ಞ ಡಾ. ಚೇತನ್‌ ಗಿಣಿಗೇರಿ ಹಾಗೂ ಸರ್ಜಿಕಲ್‌ ಆಂಕೋಲಾಜಿ ತಜ್ಞ ಡಾ. ಗಿರೀಶ್‌ ಅವರು, ರೋಗಿಯ ಕುತ್ತಿಗೆಯಲಿದ್ದ ಮೂರು ಗಡ್ಡೆಗಳು ನರಗಳೊಂದಿಗೆ ಬೆಸೆದುಕೊಂಡಿದ್ದವು.

 ಮೃತದೇಹ ಮೇಲೆ ಶಸ್ತ್ರಚಿಕಿತ್ಸೆ: ಭಾರತದಲ್ಲೇ ಮೊದಲು, ಬಾಗಲಕೋಟೆ ವೈದ್ಯರ ಸಾಧನೆ..!

ಎದೆಯ ಎಲುಬಿಗೆ ತಾಗಿಕೊಂಡಿದ್ದ ದೊಡ್ಡದಾದ ಗೆಡ್ಡೆಯನ್ನು ತೆಗೆದು ಹಾಕಿ, ಕತ್ತಿನ ದೊಡ್ಡ ರಕ್ತನಾಳಗಳ ಮೇಲಾಗುವ ಗಾಯವನ್ನು ಮುಚ್ಚುವುದು ಸವಾಲಾಗಿತ್ತು. ಹೀಗಾಗಿ ಆಕೆಯ ತೊಡೆಯಿಂದ ಅಗತ್ಯದಷ್ಟು ಚರ್ಮದ ಹೊದಿಕೆ ತೆಗೆದು ಜೋಡಿಸಲಾಗಿದೆ. ಇನ್ನು ಮೂರು ತಿಂಗಳಲ್ಲಿ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದ್ದಾರೆ ಎಂದಿದ್ದಾರೆ.

ಆಸ್ಟರ್‌ ಸಿಎಂಐ ಆಸ್ಪತ್ರೆಯ ಅರಿವಳಿಕೆ ಕ್ರಿಟಿಕಲ್‌ ಕೇರ್‌ ವಿಭಾಗದ ಮುಖ್ಯ ಸಲಹಾ ತಜ್ಞ ಡಾ. ವಿ.ಅರುಣ್‌, ಸರ್ಜಿಕಲ್‌ ಆಂಕೊಲಾಜಿ ಸಲಹಾ ತಜ್ಞ ಡಾ. ಜಿ.ಗಿರೀಶ್‌, ಪ್ಲಾಸ್ಟಿಕ್‌ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ಜಿ.ಮಧುಸೂದನ್‌, ಮಕ್ಕಳ ತಜ್ಞ ಡಾ. ಸಿ.ಪಿ.ರಘುರಾಂ, ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಸಲಹಾ ತಜ್ಞ ಡಾ. ನರೇಂದ್ರ ಬಾಬು ಸೇರಿದಂತೆ ವಿವಿಧ ವಿಭಾಗಗಳ ತಜ್ಞ ವೈದ್ಯರು ಈ ಶಸ್ತ್ರಚಿಕಿತ್ಸೆಯಲ್ಲಿ ಭಾಗಿಯಾಗಿದ್ದರು.